ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತರಬೇತುದಾರ ತುಷಾರ್ ಅರೋಠೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತಂಡದಲ್ಲಿನ ಕೆಲವು ತಾರಾ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೋಚ್ ಪಟ್ಟ ದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಆಡಳಿತದ ಮೇಲ್ವಿ ಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿ (ಸಿಒಎ) ಅಸ್ತಿತ್ವಕ್ಕೆ ಬಂದ ಅನಂತರ, ರಾಷ್ಟ್ರೀಯ ಕ್ರಿಕೆಟ್ ತಂಡದ ತರಬೇತುದಾರರು ರಾಜೀನಾಮೆ ಸಲ್ಲಿಸಿದ 2ನೇ ನಿದರ್ಶನ ಇದಾಗಿದೆ. ಕಳೆದ ವರ್ಷ, ಪುರುಷರ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಅವರು ತಂಡದ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.
ತುಷಾರ್ ಅರೋಠೆ ಭಾರತೀಯ ಕ್ರಿಕೆಟ್ ಮಂಡಳಿಗೆ (ಬಿಸಿಸಿಐ) ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ಯಾರ ವಿರುದ್ಧವೂ ಉಲ್ಲೇಖ ಮಾಡಿಲ್ಲ. ಅಲ್ಲದೆ, ತಾನು ವೈಯಕ್ತಿಕ ಕಾರಣಗಳಿಂದಾಗಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆದರೆ ಬಿಸಿಸಿಐನ ಅಧಿಕಾರಿಯೊಬ್ಬರ ಪ್ರಕಾರ, ಕೆಲವು ಹಿರಿಯ ಆಟಗಾರ್ತಿಯರು ಬಿಸಿಸಿಐ ಮೇಲೆ ಒತ್ತಡ ತಂದು ತುಷಾರ್ ಅವರನ್ನು ಕೋಚ್ ಹುದ್ದೆಯಿಂದ ಕೈಬಿಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ತುಷಾರ್ ರಾಜೀನಾಮೆಗೆ ಮುಂದಾದರು ಎಂದು ತಿಳಿದು ಬಂದಿದೆ.