ಬಳ್ಳಾರಿ: ಮಹಿಳೆಯರ ಮೇಲೆ ದೌರ್ಜನ್ಯ, ದಬ್ಟಾಳಿಕೆ, ಅತ್ಯಾಚಾರಗಳು ನಡೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಅವರಿಗೆ ಧೈರ್ಯ ತುಂಬುವ ಸಲುವಾಗಿ ನಾಲ್ಕು ಜನ ಮಹಿಳೆಯರು ರಾಜ್ಯಾದ್ಯಂತ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ಕೆಲ ಗ್ರಾಮಗಳಿಗೆ ತೆರಳಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ ಎಂದು ಬಚಪನ್ ಶಾಲೆಯ ಮುಖ್ಯಸ್ಥೆ ಪ್ರಿಯಾಕೃಷ್ಣ ಪಿಳ್ಳೈ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಟಾಳಿಕೆ, ಅತ್ಯಾಚಾರಗಳಿಂದ ಎದೆಗುಂದಿರುವ ಮಹಿಳೆಯರು, ಹೊರಬರದೆ ಮನೆಗೆ ಸೀಮಿತವಾಗುತ್ತಿದ್ದಾರೆ. ಅಂಥವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೆಡ್‌ಕ್ರಾಸ್, ವಿಸಖೀ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಸಖೀ ತಂಡದ ರಾಜಲಕ್ಷ್ಮೀ, ಸ್ವಾತಿ, ಕೀರ್ತಿನಾ, ಅನಿತಾ ಈ ನಾಲ್ವರು ಮಹಿಳೆಯರು ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನಿಂದ ಏ. 17ರಂದು ಬೈಕ್ ರ್ಯಾಲಿಯು ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದೊಡ್ಡಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ಕಲ್ಬುರ್ಗಿ ಯಾದಗಿರಿ, ರಾಯಚೂರು ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು 15ನೇ ಜಿಲ್ಲೆ ಬಳ್ಳಾರಿಗೆ ಆಗಮಿಸಿದೆ. ನಂತರ ಇಲ್ಲಿಂದ ವಿಜಯನಗರ ಜಿಲ್ಲೆಗೆ ತೆರಳಲಿದೆ ಎಂದವರು ತಿಳಿಸಿದರು.
ಸಖೀ ಅಧ್ಯಕ್ಷೆ ರಾಜಲಕ್ಷ್ಮೀ ಮಾತನಾಡಿ, ಜಿಲ್ಲಾ ಕೇಂದ್ರಗಳಲ್ಲಿ ರ್ಯಾಲಿ ನಡೆಸುವುದರ ಜತೆಗೆ, ಕೆಲವೊಂದು ಗ್ರಾಮಗಳಿಗೂ ಭೇಟಿ ನೀಡಲಾಗಿದ್ದು, ಅಲ್ಲಿ ಸ್ಥಳೀಯ ಹಿರಿಯ, ಕಿರಿಯ ಮಹಿಳೆಯರೊಂದಿಗೆ ಕೆಲಹೊತ್ತು ಸಂವಾದ ನಡೆಸಲಾಯಿತು. ಮಹಿಳೆಯರು, ಮನೆಗಳಿಗೆ, ಗ್ರಾಮಗಳಿಗೆ ಸೀಮಿತವಾಗದೆ ಹೊರಗಡೆ ಬಂದು ಕೆಲಸ ಮಾಡಬೇಕು. ಅದಕ್ಕಾಗಿ ಎಲ್ಲ ರೀತಿಯ ಭದ್ರತೆಯನ್ನು ಸಹ ನಾವು ರೂಪಿಸಿಕೊಳ್ಳಬೇಕು. ಅಲ್ಲದೇ, ಮಹಿಳೆಯರು ಉದ್ಯಮಗಳನ್ನು ಹೇಗೆ ಆರಂಭಿಸಬೇಕು. ಮನೆಗಳಲ್ಲೇ ಗುಡಿ ಕೈಗಾರಿಕೆಗಳನ್ನು ಹೇಗೆ ರೂಪಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು ಎಂದವರು ತಿಳಿಸಿದರು.
ಇದಕ್ಕೂ ಮುನ್ನ ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಬೈಕ್ ರ್ಯಾಲಿಗೆ ಮಹಿಳಾ ಪೊಲೀಸ್ ಅಧಿಕಾರಿ ಗಾಯತ್ರಿ ರೊದ್ದಂ ಚಾಲನೆ ನೀಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ರ್ಯಾಲಿಯಲ್ಲಿ ಮಹಿಳೆಯರೇ ಬೈಕ್ ಚಲಾಯಿಸಿದ್ದು ವಿಶೇಷವಾಗಿತ್ತು. ಮಹಿಳೆಯರು ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ, ಕಚೇರಿಗಳಲ್ಲಿ ಆತ್ಮಸ್ಥೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು. ತಪ್ಪುಗಳು ಕಂಡುಬಂದಲ್ಲಿ ಧೈರ್ಯವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಾಲ್ವರು ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಗುಣಾ, ನಗರಾಧ್ಯಕ್ಷೆ ಜ್ಯೋತಿ ಪ್ರಕಾಶ್, ಪುಷ್ಪಲತಾ, ವಿಜಯಲಕ್ಷ್ಮೀ ಇದ್ದರು.