Advertisement

Women’s Asia Cup: ಭಾರತಕ್ಕೆ ಇಂದು ಯುಎಇ ಸವಾಲು

09:58 PM Jul 20, 2024 | Team Udayavani |

ದಂಬುಲಾ (ಶ್ರೀಲಂಕಾ): ಬಲಿಷ್ಠ ಭಾರತೀಯ ತಂಡವು ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ರವಿವಾರದ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಅಮೋಘ ಜಯ ದಾಖಲಿಸುವ ಮೂಲಕ ಭಾರತ ಸೆಮಿಫೈನಲಿಗೇರುವ ವಿಶ್ವಾಸದಲ್ಲಿದೆ.

Advertisement

ಹಾಲಿ ಚಾಂಪಿಯನ್‌ ಆಗಿರುವ ಭಾರತ ಈ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮೊದಲ ಪಂದ್ಯದಲ್ಲಿ ಪ್ರತಿಸ್ಪರ್ಧಿ ಪಾಕಿಸ್ಥಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಭಾರತ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ಅವರ ಅಮೋಘ ಆಟಕ್ಕೆ ತಡೆಯೊಡ್ಡಲು ಯುಎಇ ಏನಾದರೂ ಪವಾಡ ಮಾಡಬೇಕಾಗಿದೆ.

ಸದ್ಯ ಎರಡಂಕ ಹೊಂದಿರುವ ಭಾರತ ಉತ್ತಮ ರನ್‌ಧಾರಣೆಯನ್ನು ಹೊಂದಿದೆ. ಯುಎಇ ವಿರುದ್ಧ ಗೆದ್ದರೆ ನಾಲ್ಕಂಕ ಪಡೆಯಲಿರುವ ಭಾರತ ಉತ್ತಮ ರನ್‌ಧಾರಣೆಯೊಂದಿಗೆ ಮುಂದಿನ ಸುತ್ತಿಗೇರಲಿದೆ. ಭಾರತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ದೀಪ್ತಿ ಶರ್ಮ, ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌ ಅವರಲ್ಲದೇ ರಾಧಾ ಯಾದವ್‌ ಉತ್ತಮ ರೀತಿಯಲ್ಲಿ ದಾಳಿ ಸಂಘಟಿಸಬಲ್ಲರು. ಬ್ಯಾಟಿಂಗ್‌ನಲ್ಲಿ ಆರಂಭಿಕರಾದ ಶಫಾಲಿ ಶರ್ಮ ಮತ್ತು ಸ್ಮತಿ ಮ ಂಧನಾ ಉತ್ತಮ ಆರಂಭ ಒದಗಿಸಬಲ್ಲರು.

ಏಷ್ಯಾ ಕಪ್‌ ಕೂಟವು ಭಾರತೀಯರ ಪಾಲಿಗೆ ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ. ಪುರುಷರಂತೆ ವನಿತೆಯರೂ ಕೂಡ ಈ ಬಾರಿ ವಿಶ್ವಕಪ್‌ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಉತ್ತಮ ಸಾಧನೆಗೈದರೆ ಆಟಗಾರರು ಅದೇ ಮನಸ್ಥಿತಿಯೊಂದಿಗೆ ವಿಶ್ವಕಪ್‌ನಲ್ಲೂ ಹೋರಾಡಲು ಸಹಕಾರಿಯಾಗಲಿದೆ.

ಅನನುಭವಿ ಯುಎಇ ತಂಡ ಮೊದಲ ಪಂದ್ಯದಲ್ಲಿ ನೇಪಾಲ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿದೆ. ಭಾರತ ವಿರುದ್ಧ ಸೋತರೆ ಅದು ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ.

Advertisement

ದಿನದ ಎರಡನೇ ಪಂದ್ಯದಲ್ಲಿ ನೇಪಾಲ ತಂಡವು ಪಾಕಿಸ್ಥಾನವನ್ನು ಎದುರಿಸಲಿದೆ. ಯುಎಇ ವಿರುದ್ಧ ಗೆದ್ದಿರುವ ನೇಪಾಲ ಬಳಿ ಸದ್ಯ ಎರಡಂಕಯಿದೆ. ನೇಪಾಲವನ್ನು ಮಣಿಸುವ ವಿಶ್ವಾಸವನ್ನು ಪಾಕಿಸ್ಥಾನ ತಂಡ ಹೊಂದಿದೆ.

ಪಂದ್ಯ ಆರಂಭ: ಮ.2ಕ್ಕೆ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ (ಟೀವಿ), ಡಿಸ್ನಿ ಹಾಟ್‌ಸ್ಟಾರ್‌ (ಆ್ಯಪ್‌).

Advertisement

Udayavani is now on Telegram. Click here to join our channel and stay updated with the latest news.

Next