Advertisement

Women’s Asia Cup Final: 8ನೇ ಪ್ರಶಸ್ತಿ ಮೇಲೆ ಭಾರತದ ಕಣ್ಣು

10:00 PM Jul 27, 2024 | Team Udayavani |

ಡಂಬುಲ್ಲಾ: ಸತತ 9ನೇ ಬಾರಿಗೆ ಮಹಿಳಾ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಫೈನಲ್‌ಗೇರಿರುವ ಭಾರತ, 8ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಭಾನುವಾರದ ಫೈನಲ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಆತಿಥೇಯ ಶ್ರೀಲಂಕಾವನ್ನು ಎದುರಿಸಲಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.

Advertisement

ಈವರೆಗಿನ ಎಲ್ಲ 9 ಕೂಟಗಳಲ್ಲೂ ಫೈನಲ್‌ಗೆ ಲಗ್ಗೆಯಿರಿಸಿದ್ದು ಭಾರತದ ಸಾಧನೆಗೆ ಸಾಕ್ಷಿ. ಹಿಂದಿನ 8 ಫೈನಲ್‌ಗ‌ಳಲ್ಲಿ ಭಾರತ ಏಳನ್ನು ಗೆದ್ದು ಮೆರೆದಿತ್ತು. ಒಮ್ಮೆ ಬಾಂಗ್ಲಾದೇಶ ವಿರುದ್ಧ ಪರಾಭವಗೊಂಡಿತ್ತು. 2004ರ ಚೊಚ್ಚಲ ಏಷ್ಯಾ ಕಪ್‌ ಭಾರತ-ಶ್ರೀಲಂಕಾ ನಡುವಿನ 5 ಪಂದ್ಯಗಳ ಏಕದಿನ ಸರಣಿಯಾಗಿತ್ತು. ಕೊಲಂಬೊದಲ್ಲಿ ನಡೆದ ಎಲ್ಲ ಪಂದ್ಯಗಳನ್ನೂ ಭಾರತ ಗೆದ್ದು ಚಾಂಪಿಯನ್‌ ಆಗಿತ್ತು.

ಅನಂತರ 2005-06, 2006, 2008 ಮತ್ತು 2022ರಲ್ಲೂ ಭಾರತ-ಶ್ರೀಲಂಕಾ ತಂಡಗಳೇ ಫೈನಲ್‌ನಲ್ಲಿ ಎದುರಾಗಿದ್ದವು. ಎಲ್ಲದರಲ್ಲೂ ಭಾರತವೇ ಜಯಿಸಿ ಕಪ್‌ ಎತ್ತಿತ್ತು. ಸಿಲೆØಟ್‌ನಲ್ಲಿ ನಡೆದ 2022ರ ಫೈನಲ್‌ನಲ್ಲಿ ಭಾರತ 8 ವಿಕೆಟ್‌ಗಳಿಂದ ಲಂಕೆಯನ್ನು ಮಣಿಸಿತ್ತು.

ಈ ಬಾರಿಯೂ ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಆದರೆ ಶ್ರೀಲಂಕಾವನ್ನು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಅದು ಕೂಡ ಸಾಕಷ್ಟು ಶಕ್ತಿಯುತವಾಗಿದೆ. ಇದಕ್ಕಿಂತ ಮಿಗಿಲಾಗಿ ತವರು ನೆಲದಲ್ಲಿ ಆಡುತ್ತಿದೆ. ಹಿಂದಿನೆಲ್ಲ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಂಡು ಮೊದಲ ಸಲ ಲಂಕೆಯನ್ನು ಪಟ್ಟಕ್ಕೇರಿಸುವ ಯೋಜನೆ ಚಾಮರಿ ಅತ್ತಪಟ್ಟು ಬಳಗದ್ದು.

ಅಧಿಕಾರಯುತ ಪ್ರದರ್ಶನ:

Advertisement

ಭಾರತ ಈ ಕೂಟದುದ್ದಕ್ಕೂ ಅಧಿಕಾರಯುತ ಪ್ರದರ್ಶನ ನೀಡುತ್ತ ಬಂದಿದೆ. ಲೀಗ್‌ ಹಂತದಲ್ಲಿ ಪಾಕಿಸ್ಥಾವನ್ನು 7 ವಿಕೆಟ್‌ಗಳಿಂದ, ಯುಎಇಯನ್ನು 78 ರನ್ನುಗಳಿಂದ, ನೇಪಾಲವನ್ನು 82 ರನ್ನುಗಳಿಂದ ಮಣಿಸಿ ಮೆರೆದಾಡಿದೆ. ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್‌ ಪಂದ್ಯವಂತೂ ಏಕಪಕ್ಷೀಯವಾಗಿತ್ತು. ಇಲ್ಲಿ ಕೌರ್‌ ಪಡೆ 10 ವಿಕೆಟ್‌ ಜಯಭೇರಿ ಮೊಳಗಿಸಿತು. ಮಂಧನಾ, ಶಫಾಲಿ ಸಾಹಸದಿಂದಾಗಿ ಉಳಿದವರ ಬ್ಯಾಟಿಂಗ್‌ ಫಾರ್ಮ್ ಹೇಗೆ ಎಂಬುದನ್ನು ಅರಿಯಲು ಸೂಕ್ತ ಅವಕಾಶ ಲಭಿಸಿಲ್ಲ. ಆದರೂ ಹರ್ಮನ್‌ಪ್ರೀತ್‌, ರಿಚಾ ಸಿಕ್ಕಿದ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.

ಹರ್ಮನ್‌ಪ್ರೀತ್‌ 3 ಪಂದ್ಯಗಳಲ್ಲಿ 2 ಸಲವಷ್ಟೇ ಬ್ಯಾಟಿಂಗ್‌ ಪಡೆದಿದ್ದು, ಒಂದರಲ್ಲಿ 66 ರನ್‌ ಹೊಡೆದಿದ್ದಾರೆ. ಜೆಮಿಮಾ 3 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹಾಗೆಯೇ ಡಿ.ಹೇಮಲತಾ ಕೂಡ. ನೇಪಾಳ ವಿರುದ್ಧ ಇನಿಂಗ್ಸ್‌ ಆರಂಭಿಸಿದ ವೇಳೆ 40 ಪ್ಲಸ್‌ ರನ್‌ ಹೊಡೆದಿದ್ದರು.

ಆರಂಭಿಕರಾದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ 140 ಪ್ಲಸ್‌ ಸ್ಟ್ರೈಕ್‌ರೇಟ್‌ನಲ್ಲಿ ನೂರಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮ, ರೇಣುಕಾ ಸಿಂಗ್‌ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ದೀಪ್ತಿ ಸರ್ವಾಧಿಕ 9 ವಿಕೆಟ್‌, ರೇಣುಕಾ 7 ವಿಕೆಟ್‌ ಉಡಾಯಿಸಿದ್ದಾರೆ. ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ ಕೂಡ ಪರಿಣಾಮ ಬೀರುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್‌ ಸ್ಥಾನಕ್ಕೆ ಬಂದ ತನುಜಾ ಕನ್ವರ್‌ ರನ್‌ ನಿಯಂತ್ರಿಸುವಲ್ಲಿ ಭರಪೂರ ಯಶಸ್ಸು ಕಂಡಿದ್ದಾರೆ.

ಚಾಮರಿ ಅಮೋಘ ಫಾರ್ಮ್:

ಭಾರತ ಒಂದು ತಂಡವಾಗಿ ಯಶಸ್ಸು ಕಾಣುತ್ತ ಬಂದರೆ, ಶ್ರೀಲಂಕಾ ಮಾತ್ರ ಏಕವ್ಯಕ್ತಿಯನ್ನೇ ಅವಲಂಬಿಸಿದೆ. ಅದು ಬೇರೆ ಯಾರೂ ಅಲ್ಲ, ನಾಯಕಿ ಚಾಮರಿ ಅತ್ತಪಟ್ಟು. ಒಂದು ಶತಕ ಸೇರಿದಂತೆ 243 ರನ್‌ ಪೇರಿಸಿದ ಚಾಮರಿ ಅಮೋಘ ಫಾರ್ಮ್ನಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದವರ್ಯಾರೂ ನೂರರ ಗಡಿ ತಲುಪಿಲ್ಲ. 91 ರನ್‌ ಮಾಡಿದ ರಶ್ಮಿ ಗುಣರತ್ನೆ ಅವರದೇ ಹೆಚ್ಚಿನ ಗಳಿಕೆ. ಸೆಮಿಫೈನಲ್‌ನಲ್ಲಿ ಪಾಕ್‌ ವಿರುದ್ಧ ಚಾಮರಿ ಬ್ಯಾಟಿಂಗ್‌ ವಿಸ್ತರಿಸದೆ ಹೋಗಿದ್ದರೆ ಲಂಕಾ ಫೈನಲ್‌ನಲ್ಲಿ ಇರುತ್ತಿರಲಿಲ್ಲ!

ಲಂಕೆಯ ಬೌಲಿಂಗ್‌ ಕೂಡ ಒಬ್ಬರನ್ನೇ ಅವಲಂಬಿಸಿದೆ. ಆಫ್ ಸ್ಪಿನ್ನರ್‌ ಕವಿಶಾ ದಿಲ್ಹಾರಿ ಅತ್ಯಧಿಕ 7 ವಿಕೆಟ್‌ ಉಡಾಯಿಸಿದರೆ, ಉಳಿದವರು ಪರಿಣಾಮ ಬೀರುವಲ್ಲಿ ವಿಫ‌ಲರಾಗಿದ್ದಾರೆ. ದ್ವೀಪರಾಷ್ಟ್ರ ತಂಡ ಸಾಂ ಕ ಪ್ರದರ್ಶನ ನೀಡಿದರಷ್ಟೇ ಮೇಲುಗೈ ಸಾಧಿಸೀತು.

ಅಂಕಣ ಗುಟ್ಟು:

ಹಗಲುರಾತ್ರಿ ಪಂದ್ಯದ ವೇಳೆ ಈ ಅಂಕಣ 2ನೇ ಬ್ಯಾಟಿಂಗ್‌ ಮಾಡುವವರಿಗೆ ಬೆಂಬಲ ನೀಡುತ್ತದೆ. ನಿಧಾನಕ್ಕೆ ಚೆಂಡು ಬ್ಯಾಟ್‌ಗೆ ನೇರವಾಗಿ ಬರಲು ಆರಂಭವಾಗುತ್ತದೆ. ಅಂಕಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ.

ಸಂಭಾವ್ಯ ತಂಡಗಳು:

ಭಾರತ: ಶಫಾಲಿ, ಸ್ಮತಿ, ಉಮಾ, ಹರ್ಮನ್‌, ಜೆಮಿಮಾ, ರಿಚಾ, ದೀಪ್ತಿ, ಪೂಜಾ, ರಾಧಾ, ತನುಜಾ, ರೇಣುಕಾ

ಶ್ರೀಲಂಕಾ: ವಿಷ್ಮಿ, ಚಾಮರಿ, ಹರ್ಷಿತಾ, ಕವಿಶಾ, ನಿಲಕ್ಷಿಕಾ, ಅನುಷ್ಕಾ, ಹಾಸಿನಿ, ಸುಗಂದಿಕಾ, ಅಚಿನಿ, ಇನೋಶಿ, ಉದೇಶಿಕಾ

ಆರಂಭ: ರಾತ್ರಿ 7.00

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next