ಬಾಂಗ್ಲಾದೇಶ: ಶ್ರೀಲಂಕಾವನ್ನು ಮಣಿಸಿ ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೋಘ ಆರಂಭ ಪಡೆದಿರುವ ಭಾರತ ಸೋಮವಾರ ಅನನುಭವಿ ಮಲೇಷ್ಯಾವನ್ನು ಎದುರಿಸಲಿದೆ. ಬೃಹತ್ ಗೆಲುವಿನ ನಿರೀಕ್ಷೆಯಲ್ಲಿದೆ.
ಮುಖ್ಯವಾಗಿ ಭಾರತ ತಂಡ ಬ್ಯಾಟಿಂಗ್ ಅಭ್ಯಾಸಕ್ಕಾಗಿ ಈ ಪಂದ್ಯ ವನ್ನು ಬಳಸಿಕೊಳ್ಳಬೇಕಿದೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿದರೆ ಲಾಭ.
ಭಾರತದ ಬ್ಯಾಟಿಂಗ್ ವಿಭಾಗದ ಮುಖ್ಯ ಸಮಸ್ಯೆಯೆಂದರೆ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಅವರ ಕಳಪೆ ಫಾರ್ಮ್. 18 ವರ್ಷದ ಶಫಾಲಿ ಕಳೆದ ವರ್ಷದ ಮಾರ್ಚ್ ಬಳಿಕ ಟಿ20ಯಲ್ಲಿ ಒಂದೂ ಅರ್ಧ ಶತಕ ಬಾರಿಸಿಲ್ಲ.
ಆದರೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಂದೆರಡು ಗಮನಾರ್ಹ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಂತೂ ಶಫಾಲಿ ಅವರದು ಘೋರ ವೈಫಲ್ಯ. 4 ಪಂದ್ಯಗಳಲ್ಲಿ ಒಂದಂಕಿ ಗಳಿಕೆಗೆ ಔಟಾಗಿದ್ದರು. ಒಟ್ಟಾರೆ, 3 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವದ ಹೊರತಾಗಿಯೂ ಶಫಾಲಿಗೆ ಇನ್ನೂ ಸ್ಥಿರವಾದ ಬ್ಯಾಟಿಂಗ್ ಸಾಧ್ಯವಾಗದಿರುವುದು ವಿಪರ್ಯಾಸ.
ಪರಿಸ್ಥಿತಿ ಹೀಗಿರುವಾಗ ಅತ್ಯಂತ ದುರ್ಬಲ ಬೌಲಿಂಗ್ ಪಡೆಯನ್ನು ಹೊಂದಿರುವ ಮಲೇಷ್ಯಾ ವಿರುದ್ಧ ಶಫಾಲಿ ವರ್ಮ ಮಿಂಚದೇ ಹೋದರೆ ಅದಕ್ಕಿಂತ ಬ್ಯಾಟಿಂಗ್ ದುರಂತ ಇನ್ನೊಂದಿಲ್ಲ.