ಸಂತೆಮರಹಳ್ಳಿ: ಅಸ್ಪೃಶ್ಯತೆ ಸವರ್ಣೀಯ ರಿಗೆ ಅಂಟಿಕೊಂಡಿರುವ ಜಾಡ್ಯವಾಗಿದೆ. ಆದರೆ, ಇದರ ನೋವುಣ್ಣುತ್ತಿರುವುದು ತಳ ಸಮುದಾಯಗಳು. ದಲಿತರು ಎಂದಿಗೂ ಅಸ್ಪೃಶ್ಯತೆ ಆಚರಿಸುತ್ತಿಲ್ಲ. ಇವರೇ ನಿಜವಾದ ಭಾರತೀಯರು ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮದಡಿ ಹಮ್ಮಿಕೊಂಡಿದ್ದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ಜಾತಿ ಮನುಷ್ಯನ ಸೃಷ್ಟಿಯಾಗಿದೆ. ಹೆಣ್ಣು ಗಂಡೆಂಬುವುದೂ ಜಾತಿಯಲ್ಲ, ಅದು ಪ್ರಬೇಧ ಮಾತ್ರ. ಜಾತಿಯ ಹುಳುಕಿನಿಂದ ದೇಹ ಹಾಗೂ ಮನಸ್ಸು ಹಾಳಾಗುತ್ತದೆ. ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ಸ್ವಲ್ಪ ಮಟ್ಟಿಗಾದರೂ ಅಸ್ಪೃಶ್ಯತೆ ತೊಲಗಿದೆ. ಮುಂದಿನ 30 ವರ್ಷಗಳಲ್ಲಿ ಇದು ದೇಶದಿಂದ ಮರೆಯಾಗಲಿದೆ.
ಹೀಗಾಗಲು ಎಲ್ಲಾ ಸಮುದಾಯದವರೂ ತಾಳ್ಮೆ, ಐಕ್ಯತೆ, ಸಹನೆಯಿಂದ ಇರಬೇಕು. ಇದೊಂದು ಮಾನಸಿಕ ರೋಗವಾಗಿದ್ದು, ಇದನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು. ಈ ಕಾರ್ಯಕ್ರಮದಡಿ ಬೀದಿ ನಾಟಕಗಳನ್ನು ಜನನಿಬಿಡ ಪ್ರದೇಶಗಳಲ್ಲಿ ಹಾಗೂ ಸವರ್ಣೀಯರ ಬೀದಿಯಲ್ಲಿ ನಡೆಸಬೇಕು ಎಂದು ಸಲಹೆ ನೀಡಿದರು.
ವಿಚಾರವಾದಿ ಡಾ. ಕೃಷ್ಣಮೂರ್ತಿ ಚಮರಂ ಮಾತನಾಡಿ, ಅಸ್ಪೃಶ್ಯತೆ ಹೋಗ ಲಾಡಿಸಲು ಸವರ್ಣೀಯರೇ ಹೋರಾಟ ಮಾಡಬೇಕು. ಆಗ ಮಾತ್ರ ಇದರ ಮೂಲ ಬೇರುಗಳನ್ನು ಕೀಳಲು ಸಾಧ್ಯ. ಶಾಸ್ತ್ರ ಪುರಾಣಗಳು, ಜಾತೀಯತೆಯ ಪ್ರತಿಬಿಂಬಕ ಗಳಾಗಿವೆ. ಮನಸ್ಸಿನಿಂದ ಇದನ್ನು ಸುಟ್ಟು ನಾಗರಿಕ ಸಮಾಜಲಕ್ಕೆ ಲಗ್ಗೆ ಇಡುವ ಅನಿವಾರ್ಯತೆ ಇದೆ ಎಂದರು.
ಜಿಪಂ ಉಪಾಧ್ಯಕ್ಷ ಜೆ. ಯೋಗೇಶ್, ಸದಸ್ಯೆ ಉಮಾವತಿ, ತಾಪಂ ಅಧ್ಯಕ್ಷ ನಿರಂಜನ್, ಬಾಬು ಜಗಜೀವನರಾಂ ಸೇವಾ ಸಮಿತಿಯ ಮರಪ್ಪ, ತಾಪಂ ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ಭಾಗ್ಯ, ಪಲ್ಲವಿ, ಪುಟ್ಟು, ವೆಂಕಟೇಶ್, ನಂಜುಂಡಯ್ಯ, ನಾಗರಾಜು, ಸಿದ್ದರಾಜು ಡಿ.ರೇವಣ್ಣ ತಹಶೀಲ್ದಾರ್ ವರ್ಷ ಒಡೆಯರ್, ಇಒ ರಾಜು ಇದ್ದರು.