Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌ 2021: ಯಾರೂ ಫೇವರಿಟ್‌ ಅಲ್ಲ: ಮಿಥಾಲಿ ರಾಜ್‌

08:18 AM May 05, 2020 | Sriram |

ಹೊಸದಿಲ್ಲಿ: ಮುಂದಿನ ವರ್ಷ ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆ ಯಲಿರುವ ವನಿತಾ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಯಾವ ತಂಡವೂ ಫೇವರಿಟ್‌ ಆಗಿ ಗೋಚರಿಸುತ್ತಿಲ್ಲ ಎಂದು ಭಾರತದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಸದ್ಯ ಕ್ರೀಡಾ ಜಗತ್ತು ಕೋವಿಡ್ 19 ದಿಂದ ಲಾಕ್‌ಡೌನ್‌ ಆಗಿದೆ. ಜಿಮ್‌ ಅಭ್ಯಾಸವನ್ನೂ ನಿಷೇಧಿಸಲಾಗಿದೆ. ಹೀಗಾಗಿ 2021ರ ವಿಶ್ವಕಪ್‌ ಹೆಚ್ಚು ಮುಕ್ತವಾಗಿದೆ. ಇಲ್ಲಿ ಯಾವುದೂ ನೆಚ್ಚಿನ ತಂಡವಲ್ಲ’ ಎಂದು ಮಿಥಾಲಿ ರಾಜ್‌ ಇನ್‌ಸ್ಟಾಗ್ರಾಮ್‌ ಲೈವ್‌ ಕಾರ್ಯಕ್ರಮವೊಂದರಲ್ಲಿ ಹೇಳಿದರು.

“ಸದ್ಯ ನಾವೆಲ್ಲ ವಿರಾಮದಲ್ಲಿದ್ದರೂ ಕೋಚ್‌ ಡಬ್ಲ್ಯು.ವಿ. ರಾಮನ್‌ ಸರ್‌ ಅವರ ನಿರಂತರ ಸಂಪರ್ಕದಲ್ಲಿದ್ದೇವೆ. ಒಳಾಂಗಣದಲ್ಲಿ ತರಬೇತಿ ನಡೆಸಲು ಅವರಿಂದ ಮಾರ್ಗದರ್ಶನ ಲಭಿಸುತ್ತಿದೆ. ಆದರೆ ಪೂರ್ಣ ಸಿದ್ಧತೆ ನಡೆಸಲು ಹೊರಾಂಗಣ ಕ್ರೀಡಾಂಗಣದಲ್ಲೇ ಅಭ್ಯಾಸ ಅವಕಾಶ ಲಭಿಸಬೇಕಿದೆ’ ಎಂದು ಮಿಥಾಲಿ ರಾಜ್‌ ಹೇಳಿದರು.

ಏಕದಿನ ಕ್ರಿಕೆಟಿನತ್ತ ಹೆಚ್ಚಿನ ಗಮನ ನೀಡುವ ಸಲುವಾಗಿ 34ರ ಮಿಥಾಲಿ ರಾಜ್‌ ಈಗಾಗಲೇ ಟಿ20 ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. 2021ರ ವಿಶ್ವಕಪ್‌ ಅವರ ಗುರಿ ಆಗಿದೆ.”ನನ್ನ ಈ ವಯಸ್ಸಿನಲ್ಲಿ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಆದರೆ ಬ್ಯಾಟಿಂಗ್‌ ಬಗ್ಗೆ ನನಗೆ ಚಿಂತೆ ಇಲ್ಲ. ನನ್ನಲ್ಲಿ ಇನ್ನೂ ಬ್ಯಾಟಿಂಗ್‌ ಉಳಿದಿದೆ. ಉತ್ತಮ ಲಯವನ್ನೂ ಹೊಂದಿದ್ದೇನೆ…’ ಎಂದರು.

ಮಗನೊಂದಿಗೆ ಅಭ್ಯಾಸ
ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದಿರುವ ಮಿಥಾಲಿ ರಾಜ್‌ ಅವರ ಕ್ರಿಕೆಟ್‌ ಅಭ್ಯಾಸಕ್ಕೆ ನೆರವಾಗುವವರು ಯಾರು ಗೊತ್ತೆ? ಮಗ ಮತ್ತು ಮನೆಯ ವಾಚ್‌ಮನ್‌!

Advertisement

“ಮಗ ಮತ್ತು ವಾಚ್‌ಮನ್‌ ಜತೆ ನಾನು ಟೆನಿಸ್‌ ಬಾಲ್‌ ಅಭ್ಯಾಸ ನಡೆಸುತ್ತೇನೆ. ಅವರು ನನಗೆ ಬೌಲಿಂಗ್‌ ಮಾಡುತ್ತಾರೆ. ಕೆಲವೊಮ್ಮೆ ಅವರಿಗೆ ನಾನು ಬೌಲಿಂಗ್‌ ಮಾಡುತ್ತೇನೆ. ಒಟ್ಟಾರೆ ನನ್ನ ಕ್ರಿಕೆಟ್‌ ಚಟುವಟಿಕೆ ನಿಂತಿಲ್ಲ’ ಎಂದು ಏಕದಿನ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್‌ ದಾಖಲೆ ಬರೆದಿರುವ ಮಿಥಾಲಿ ರಾಜ್‌ ಹೇಳಿದರು.

ಭಾರತ ತಂಡದ ಬಗ್ಗೆ ಮಾತಾಡಿದ ಮಿಥಾಲಿ, ಇದು 2017ರ ವಿಶ್ವಕಪ್‌ನಲ್ಲಿ ಇಂಗ್ಲೆಂಡಿಗೆ ಸೋತ ತಂಡಕ್ಕಿಂತಲೂ ಬಲಿಷ್ಠವಾಗಿದೆ ಎಂದರು. ಭಾರತ ತಂಡವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next