Advertisement

ವನಿತಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌: 4,669 ಕೋಟಿ ರೂ.ಗೆ 5 ತಂಡಗಳ ಹರಾಜು

11:22 PM Jan 25, 2023 | Team Udayavani |

ಹೊಸದಿಲ್ಲಿ: ಆರಂಭಿಕ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ 5 ಫ್ರಾಂಚೈಸಿಗಳು ಭರ್ಜರಿ ಮೊತ್ತಕ್ಕೆ ಹರಾಜಾಗಿವೆ. ಇದರ ಒಟ್ಟು ಮೊತ್ತ 4,669 ಕೋಟಿ ರೂ. ಎಂಬುದಾಗಿ ಬಿಸಿಸಿಐ ಕಾರ್ಯ ದರ್ಶಿ ಜಯ್‌ ಶಾ ಬುಧವಾರ ಟ್ವಿಟರ್‌ನಲ್ಲಿ ಪ್ರಕಟಿಸಿದರು.

Advertisement

ಇದು 2008ರಲ್ಲಿ ನಡೆದ ಪುರುಷರ ಐಪಿಎಲ್‌ ಫ್ರಾಂಚೈಸಿಗಳ ಬಿಡ್‌ ಮೊತ್ತಕ್ಕಿಂತಲೂ ಅಧಿಕ ಎಂಬುದು ವಿಶೇಷ.

2008ರಲ್ಲಿ ಪುರುಷರ 8 ಐಪಿಎಲ್‌ ಫ್ರಾಂಚೈಸಿಗಳು ಒಟ್ಟು 723.59 ಕೋಟಿ ರೂ.ಗೆ
ಹರಾಜಾಗಿದ್ದವು. ಹೀಗಾಗಿ ವನಿತೆಯರ ಐದೇ ತಂಡಗಳು ಇಷ್ಟೊಂದು ಮೊತ್ತ ಗಳಿಸಿದ್ದು ಉತ್ತಮ ಬೆಳವಣಿಗೆಯಾಗಿದೆ.

“ಇಂದು ಕ್ರಿಕೆಟ್‌ ಪಾಲಿನ ಚಾರಿತ್ರಿಕ ದಿನ. ಉದ್ಘಾಟನ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಹರಾಜಿನಲ್ಲಿ ನೂತನ ದಾಖಲೆ ನಿರ್ಮಾಣಗೊಂಡಿದೆ. ಇದು 2008ರ ಪುರುಷರ ಐಪಿಎಲ್‌ ಬಿಡ್ಡಿಂಗ್‌ ದಾಖಲೆಯನ್ನು ಮುರಿದಿದೆ. ಒಟ್ಟು 4,669.99 ಕೋಟಿ ರೂ. ಮೊತ್ತಕ್ಕೆ 5 ವನಿತಾ ಫ್ರಾಂಚೈಸಿಗಳು ಹರಾಜಾಗಿವೆ’ ಎಂದು ಜೈ ಶಾ ಮಾಹಿತಿ ನೀಡಿದರು.

ವನಿತಾ ಐಪಿಎಲ್‌ ಎಂದೇ ಗುರುತಿಸ ಲ್ಪಡುವ “ವನಿತಾ ಪ್ರೀಮಿಯರ್‌ ಲೀಗ್‌’ನ 5 ಫ್ರಾಂಚೈಸಿಗಳು ಅಹ್ಮದಾಬಾದ್‌, ಮುಂಬಯಿ, ಬೆಂಗಳೂರು, ಹೊಸದಿಲ್ಲಿ ಮತ್ತು ಲಕ್ನೋ ನಗರಗಳನ್ನು ಪ್ರತಿನಿಧಿಸುತ್ತವೆ.

Advertisement

ಬೆಂಗಳೂರು ತಂಡ ಆರ್‌ಸಿಬಿ ತೆಕ್ಕೆಗೆ
ಬೆಂಗಳೂರು ಮೂಲದ ತಂಡ ಆರ್‌ಸಿಬಿ ತೆಕ್ಕೆಗೆ ಬಿತ್ತು. ಇದನ್ನು ಖರೀದಿಸಿದ ತಂಡ ರಾಯಲ್‌ ಚಾಲೆಂಜರ್ ನ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌. ಮೊತ್ತ 901 ಕೋಟಿ ರೂ. ಹೊಸದಿಲ್ಲಿ ಫ್ರಾಂಚೈಸಿಯನ್ನು ಜೆಎಸ್‌ಡಬ್ಲ್ಯು ಜಿಎಂಆರ್‌ ಕ್ರಿಕೆಟ್‌ ಪ್ರೈವೇಟ್‌ ಲಿಮಿಟೆಡ್‌ 810 ಕೋಟಿ ರೂ.ಗೆ ಖರೀದಿಸಿತು. ಲಕ್ನೋ ಫ್ರಾಂಚೈಸಿ ಕ್ಯಾಪ್ರಿ ಗ್ಲೋಬಲ್‌ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪಾಲಾಯಿತು. ಅದು ಬಿಡ್‌ ಮಾಡಿದ ಮೊತ್ತ 757 ಕೋಟಿ ರೂ.

ವಿಶ್ವದ 2ನೇ ಶ್ರೀಮಂತ ಟಿ20 ಲೀಗ್‌!
2008ರಲ್ಲಿ ಐಪಿಎಲ್‌ ಉದ್ಘಾಟನ ಕೂಟ ನಡೆಯಿತು. ಆಗ ಪುರುಷರ ತಂಡಗಳನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಮಾಡಿದ್ದ ಬಿಡ್‌ಗಿಂತ ಗರಿಷ್ಠ ಮೊತ್ತ, ಕೇವಲ 5 ಮಹಿಳಾ ಐಪಿಎಲ್‌ ತಂಡಗಳನ್ನು ಖರೀದಿಸಲು ಫ್ರಾಂಚೈಸಿಗಳು ವ್ಯಯಿಸಿವೆ. ಇದೊಂದು ದಾಖಲೆ.

ಪಂದ್ಯಗಳನ್ನು ನೇರಪ್ರಸಾರ ಮಾಡಲು ವಯಾಕಾಮ್‌ 18ಗೆ ಹಕ್ಕು ನೀಡಿ, ಅದರಿಂದ 951 ಕೋಟಿ ರೂ. ಗಳಿಸಲಾಗಿದೆ. ಅಲ್ಲಿಗೆ ಕೂಟದ ಆರಂಭಕ್ಕೂ ಮುನ್ನವೇ ಬಿಸಿಸಿಐ 5650.99 ಕೋಟಿ ರೂ. ಗಳಿಸಿದೆ.

ಇಷ್ಟರ ಮೂಲಕವೇ ಈ ಮಹಿಳಾ ಲೀಗ್‌ ವಿಶ್ವದ ಟಿ20 ಲೀಗ್‌ಗಳಲ್ಲೇ 2ನೇ ಶ್ರೀಮಂತ ಕೂಟವೆನಿಸಿಕೊಂಡಿದೆ. ಅರ್ಥಾತ್‌, ನಮ್ಮದೇ ಐಪಿಎಲ್‌ ಬಿಟ್ಟರೆ ಇದಕ್ಕೇ ಅನಂತರದ ಸ್ಥಾನ. ಬಿಗ್‌ ಬಾಶ್‌, ದಿ ಹಂಡ್ರೆಡ್‌ ಅಥವಾ ಇತರ ಯಾವುದೇ ಪುರುಷರ ಕೂಟಗಳು ಈ ಸಂಖ್ಯೆಗೆ ಹತ್ತಿರ ಕೂಡ ಇಲ್ಲ!

ಪಂದ್ಯದ ಲೆಕ್ಕಾಚಾರ
ಒಟ್ಟು 22 ಪಂದ್ಯಗಳು ನಡೆಯಲಿವೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. 2 ಮತ್ತು 3ನೇ ಸ್ಥಾನಿ ತಂಡಗಳು ಫೈನಲ್‌ಗೇರಲು ಒಂದು ಪಂದ್ಯವಾಡಲಿವೆ.

ಅಹ್ಮದಾಬಾದ್‌ಗೆ ದಾಖಲೆ ಮೊತ್ತ
ಇಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ತಂಡ ಅಹ್ಮದಾಬಾದ್‌ ಮೂಲದ್ದು. ಇದನ್ನು ಅದಾನಿ ನ್ಪೋರ್ಟ್‌ಲೈನ್‌ ಪ್ರೈವೇಟ್‌ ಲಿಮಿಟೆಡ್‌ 1,289 ಕೋಟಿ ರೂ.ಗೆ ಖರೀದಿಸಿತು. ಅನಂತರದ ಸರದಿ ಮುಂಬಯಿ ಫ್ರಾಂಚೈಸಿಯದ್ದು. ಇದನ್ನು ಇಂಡಿಯಾವಿನ್‌ ನ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ 912.99 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next