ಮುಂಬಯಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರ ಅಪರಾಧಿಗಳನ್ನು ನಿರ್ಭಯಾ ತಾಯಿ ಆಶಾ ದೇವಿ ಅವರು ಕ್ಷಮಿಸುವ ದೊಡ್ಡಗುಣವನ್ನು ತೋರಿಸಬೇಕು ಎಂದು ಹೇಳಿಕೆ ನೀಡಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮೇಲೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಕೆಂಡಾಮಂಡಲವಾಗಿದ್ದಾರೆ.
ಇಂದಿರಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ, ಇಂದಿರಾ ಅವರಂತ ತಾಯಂದಿರೇ ಇಂತಹ ಅತ್ಯಾಚಾರಿಗಳು ಮತ್ತು ರಾಕ್ಷಸ ಪ್ರವೃತ್ತಿಯ ಮನುಷ್ಯರಿಗೆ ಜನ್ಮನೀಡುವುದು ಎಂದು ಕಿಡಿಕಾರಿದ್ದಾರೆ.
ಇಷ್ಟು ಮಾತ್ರವಲ್ಲದೇ ಇಂದಿರಾ ಅವರ ಮೇಲೆ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಕಂಗಣಾ, ‘ಈಕೆಯನ್ನು ನಾಲ್ಕು ದಿನಗಳ ಕಾಲ ಆ ಅತ್ಯಾಚಾರಿಗಳಿರುವ ಕೋಣೆಯಲ್ಲಿ ಇರಿಸಬೇಕು. ಅತ್ಯಾಚಾರಿಗಳ ಮೇಲೆ ಕರುಣೆ ತೋರಿಸುವ ಇಂತವರನ್ನು ಮಹಿಳೆಯರೆಂದು ಹೇಗೆ ಕರೆಯುವುದು? ಇಂತಹ ಮಹಿಳೆಯರೇ ರಾಕ್ಷಸ ಪ್ರವೃತ್ತಿಯ ವ್ಯಕ್ತಿಗಳಿಗೆ ಜನ್ಮ ನೀಡುವುದು. ಅತ್ಯಾಚಾರಿ ಮತ್ತು ಕೊಲೆಗಡುಕರ ಮೇಲೆ ಕರುಣೆಯ ಮಳೆ ಸುರಿಸುವ ಈಕೆ ಅವರಿಗೆ ಜನ್ಮ ನೀಡಿದವರ ಹಾಗೆ ಮಾತನಾಡುತ್ತಾರೆ…’ ಎಂದು ಕಂಗಣಾ ಕಟು ಶಬ್ದಗಳಿಂದ ಇಂದಿರಾ ಜೈಸಿಂಗ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಅತ್ಯಾಚಾರದ ವಿಚಾರದಲ್ಲಿ ಸಮಾಜದಲ್ಲಿ ಭಯ ಹುಟ್ಟಬೇಕಾದರೆ ಅತ್ಯಾಚಾರಿ ಅಪರಾಧಿಗಳನ್ನು ಬಹಿರಂಗವಾಗಿಯೇ ಗಲ್ಲಿಗೇರಿಸಬೇಕು ಎಂಬ ಸಲಹೆಯನ್ನೂ ಸಹ ಕಂಗನಾ ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಇಂತವರ ಸಾವಿನಿಂದ ಸಮಾಜಕ್ಕೆ ಒಂದು ಬಲವಾದ ಸಂದೇಶ ಹೋಗಲಿಲ್ಲವೆಂದಾದರೆ ಘೋರ ಶಿಕ್ಷೆ ಅನ್ನುವುದಕ್ಕೆ ಯಾವ ಅರ್ಥವಿದೆ? ಹಾಗಾಗಿ ಅತ್ಯಾಚಾರದ ಅಪರಾಧಿಗಳನ್ನು ಗುಪ್ತವಾಗಿ ಗಲ್ಲಿಗೇರಿಸಲೇಬಾರದು ಎಂಬುದು ಈ ಬಾಲಿವುಡ್ ನಟಿಯ ವಾದವಾಗಿದೆ.
‘ಆಶಾ ದೇವಿ ಅವರ ನೋವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬಲ್ಲೆವು. ಆದರೆ ತನ್ನ ಪತಿಯ ಸಾವಿಗೆ ಕಾರಣಳಾದ ನಳಿನಿಯನ್ನು ಕ್ಷಮಿಸಿದ ಸೋನಿಯಾ ಗಾಂಧಿ ಅವರ ನಿರ್ಧಾರ ಆಶಾ ದೇವಿ ಅವರಿಗೆ ಮಾದರಿಯಾಗಬೇಕು. ನಳಿನಿಗೆ ಮರಣದಂಡನೆ ಶಿಕ್ಷೆ ಬೇಡ ಎಂದು ಅವರು ಹೇಳಿದ್ದರು. ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ, ಆದರೆ ಮರಣದಂಡನೆಗೆ ನಮ್ಮ ವಿರೋಧವಿದೆ’ ಎಂದು ಇಂದಿರಾ ಜೈಸಿಂಗ್ ಅವರು ಟ್ವೀಟ್ ಮಾಡಿದ್ದರು.