ಕಾಕಾಮಿಗಹಾರ (ಜಪಾನ್): ವನಿತಾ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕೊರಿಯಾ ವಿರುದ್ಧ ದಿಟ್ಟ ಹೋರಾಟ ನೀಡಿದ ಭಾರತ 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಅರ್ಧ ಗಂಟೆಯ ಆಟದೊಳಗಾಗಿ 2 ಗೋಲು ಸಿಡಿಸಿದ ಕೊರಿಯಾ ಮುಂದೆ ಗೆಲುವಿನ ಎಲ್ಲ ಸಾಧ್ಯತೆ ಇತ್ತು. ಆದರೆ ಕೊನೆಯ 2 ಕ್ವಾರ್ಟರ್‌ಗಳಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು. ಕೊರಿಯಾ ಮೇಲೆ ಸವಾರಿ ಮಾಡಿ ಪಂದ್ಯವನ್ನು ಸಮಬಲಕ್ಕೆ ತಂದಿತು.
ಯೂಜಿನ್ ಲೀ 15ನೇ ನಿಮಿಷದಲ್ಲಿ ಹಾಗೂ ಜಿಯೋನ್ ಚೊಯ್ 30ನೇ ನಿಮಿಷದಲ್ಲಿ ಗೋಲು ಬಾರಿಸಿ ಕೊರಿಯಾವನ್ನು ಮುಂದಕ್ಕೆ ಓಡಿಸಿದರು. 43ನೇ ನಿಮಿಷದ ತನಕ ಕೊರಿಯಾ ಈ ಮುನ್ನಡೆಯನ್ನು ಕಾಯ್ದುಕೊಂಡು ಬಂತು. ಆಗ ದೀಪಿಕಾ ಸೊರೆಂಗ್ ಭಾರತದ ಪರ ಗೋಲಿನ ಖಾತೆ ತೆರೆದರು. 54ನೇ ನಿಮಿಷದಲ್ಲಿ ದೀಪಿಕಾ ದ್ವಿತೀಯ ಗೋಲು ಹೊಡೆದರು.
ಡ್ರಾ ಫಲಿತಾಂಶದಿಂದ ಭಾರತ “ಎ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಉಜ್ಬೆಕಿಸ್ಥಾನ ವನ್ನು 22-0 ಹಾಗೂ ಮಲೇಷ್ಯಾವನ್ನು 2-1 ಅಂತರದಿಂದ ಮಣಿಸಿತ್ತು. ಗುರುವಾರದ 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು ಎದುರಿಸಲಿದೆ.