Advertisement

ಹಾಲುಂಡ ತವರು…

07:26 PM Oct 07, 2020 | Suhan S |

ಗೃಹಿಣಿಯರ ಅಚ್ಚುಮೆಚ್ಚಿನ ತಾಣ ಯಾವುದು ಗೊತ್ತೇ? ಆಕೆಯ ತವರು ಮನೆ! ಒಂದು ಐಷಾರಾಮಿ ಹೋಟೆಲ, ಪಿಕ್ನಿಕ್‌ಗೆಂದೇ ಸೃಷ್ಟಿಯಾದ ಊರು, ಯಾವುದೋ ಸುಂದರ ಬನ ಅಥವಾ ಒಂದು ಪ್ರೇಕ್ಷಣೀಯ ಸ್ಥಳದಲ್ಲಿ ಕಾಣದಂಥ ಖುಷಿ ಮತ್ತು ಪುಳಕವನ್ನು ಆಕೆ ತವರು ಮನೆಯಲ್ಲಿ ಅನುಭವಿಸುತ್ತಾಳೆ. ತವರೂರು ಅಂದಾಕ್ಷಣ ಕಣ್ತುಂಬಿಕೊಳ್ಳದ ಹೆಣ್ಣುಮಕ್ಕಳೇ ಇಲ್ಲವೇನೋ…

Advertisement

ಹಿಂದಿನ ರಾತ್ರಿಯಿಂದಲೇ ನಾಳೆಯ ತಿಂಡಿಗೇನು ಎಂಬ ಚಿಂತೆ. ಬೆಳಿಗ್ಗೆ ಎದ್ದ ಕೂಡಲೇ ತಿಂಡಿಯ ತಯಾರಿ. ಪ್ರತಿಯೊಮ್ಮೆ ಅಡುಗೆಮನೆಗೆ ಬಂದಾಗಲೂ ಆಕೆ ಇನ್ನಿಲ್ಲದ ಕಾಳಜಿಯಿಂದಲೇ ಕೆಲಸಕ್ಕೆ ನಿಲ್ಲುತ್ತಾಳೆ. ಎಷ್ಟೇ ಮುತುವರ್ಜಿ ವಹಿಸಿ ಮಾಡಿದರೂ ಅದು ಎಲ್ಲರಿಗೂ ಇಷ್ಟವಾಗುತ್ತದೆ ಅನ್ನಲು ಆಗುವುದಿಲ್ಲ. ಮಕ್ಕಳಿಗೆ ಇಷ್ಟವಾದರೆ ಗಂಡನಿಗೆ ಇಷ್ಟವಾಗದು. ಅಪ್ಪನಿಗೆ ರುಚಿ ಅನಿಸಿದ್ದು ಮಕ್ಕಳಿಗೆಒಪ್ಪಿಗೆಯಾಗದು. ಅಪ್ಪ- ಮಕ್ಕಳು ಒಪ್ಪಿದ್ದು, ಮನೆಯಲ್ಲಿರುವ ಹಿರಿಯರಿಗೆ ಕಹಿ ಅನ್ನಿಸಬಹುದು. ಇಂತಹ ರಗಳೆಗಳಿಂದಲೇ “ಅವಳ’ ಪಾಲಿನ ದಿನ ಆರಂಭವಾಗುತ್ತದೆ. ಆನಂತರ ಮಧ್ಯಾಹ್ನದ ಅಡುಗೆ, ಸಂಜೆ ಬಾಯಾಡಿಸುವುದಕ್ಕೆ ಒಂದಿಷ್ಟು ತಿಂಡಿ, ರಾತ್ರಿಯ ಊಟ, ಮನೆಕೆಲಸಗಳು… ಹೀಗೆ, ಪುರುಸೊತ್ತೇ ಸಿಗದಂತೆ ಅವಳಿಗೆ ಒಂದರಹಿಂದೊಂದು ಕೆಲಸಗಳು ಬಂದುಬಿಡುತ್ತವೆ. ಈ ಮಧ್ಯೆ ನನಗೇನು ಬೇಕಿತ್ತು, ನನ್ನಿಷ್ಟದ್ದು ಯಾವುದು ಎನ್ನುವುದೂ ಆಕೆಗೆ ಮರೆತು ಹೋಗಿರುತ್ತದೆ.

ಎಂಥಲ್ಲೋ ಬೇಸರ, ದಿನವಿಡೀ ದುಡಿದ ಸುಸ್ತು, ತಲೆಚಿಟ್ಟು ಹಿಡಿಸುವ ಅವಿರತ ಕೆಲಸಗಳು, ಈಬಗೆಯ ಏಕತಾನತೆಯಿಂದ ತಪ್ಪಿಸ್ಕೊಳ್ಳಬೇಕು  ಎನ್ನಿಸಿದಾಗ ಆಕೆಗೆ ಥಟ್ಟನೆ ನೆನಪಾಗುವುದೇ ತವರು! ಅಣ್ಣ-ತಮ್ಮ/ ಅಪ್ಪ-ಅಮ್ಮ, ಅತ್ತಿಗೆ ಅಥವಾ ಹುಟ್ಟೂರಿನಲ್ಲಿರುವ ನೆರೆಮನೆಯ ಆಪ್ತರಿಂದ ಒಂದು ಫೋನ್‌ ಕಾಲ್‌ ಬಂದರೂ ಸಾಕು; ಯಾವುದೋ ಊರಲ್ಲಿ ಗಂಡ- ಮಕ್ಕಳ ಜೊತೆಗಿರುವ ಗೃಹಿಣಿಯ ಮುಖ ಅರಳುತ್ತದೆ. ಅಕಸ್ಮಾತ್‌, ಹುಟ್ಟಿದೂರಿಗೆ ಹೋಗುವ ಅವಕಾಶ ದೊರೆತರೆ, ಆಕೆ ತಕ್ಷಣವೇ ಹೊರಟು ನಿಲ್ಲುತ್ತಾಳೆ. ತವರೂರಿನಲ್ಲಿ ಇದ್ದಷ್ಟು ದಿನ ಆಕೆಗೆ ಜಗತ್ತಿನ ಪರಿವೆ ಇರುವುದಿಲ್ಲ. ಹುಟ್ಟಿ ಬೆಳೆದ ಊರು, ಎಷ್ಟು ಬೆಳೆದರೂ ಅಮ್ಮನ ಬೆಚ್ಚನೆಯ ನೋಟದಲ್ಲಿ ಮಗುವಾಗಿಯೇಉಳಿಯುವ ಭಾವ, ಮತ್ತವಳ ಹಾರೈಕೆ,ಅಣ್ಣತಮ್ಮಂದಿರ ಮಮತೆ, ಕಣ್ಣು ಹೊರಳಿಸಿದಲ್ಲೆಲ್ಲಾ ಕಾಣುವ ಪರಿಚಿತ ಮುಖಗಳು, ಸ್ನೇಹಿತರನ್ನು ಭೇಟಿಯಾಗುವ ಸಂಭ್ರಮ, ಮತ್ತವರ ಕುಶಲೋಪರಿ ಕೇಳುವುದರಲ್ಲಿಯೇ ವಾರ ಕಳೆದಿರುವುದು ಗೊತ್ತಾಗುವುದಿಲ್ಲ. ಹೀಗಾಗಿಯೇ ಅಲ್ಲವೇ ಹೆಣ್ಣುಮಕ್ಕಳ ಅಂತರಾಳ ಅರಿತಂತೆ ಕೆ.ಎಸ್‌. ನರಸಿಂಹಸ್ವಾಮಿಯವರು ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ಎನ್ನುತ್ತೆನ್ನುತ್ತಲೇ ಗಂಡನಿಗೆ ಪೂಸಿ ಹೊಡೆಯುವ ಕವಿತೆ ಕಟ್ಟಿ, ಆಗಿನ ಕಾಲಕ್ಕೆ ಚಿತ್ರದುರ್ಗದಿಂದ ಮೈಸೂರಿಗೆ ಇಲ್ಲದ ರೈಲನ್ನು ತಮ್ಮ ಕವಿತೆಯಲ್ಲಿಯೇ ಬಿಟ್ಟಿದ್ದು!?

ಹೆಣ್ಣು ಮಕ್ಕಳಿಗೆ ತವರೆಂದರೆ ಅದೇನೋ ತವಕ. ಅದರಲ್ಲೂ ದೂರದೂರಿಗೆ ಕೊಟ್ಟ ಹೆಣ್ಣುಮಕ್ಕಳ ತವರಿನ ಹಂಬಲಿಕೆ ಹೇಳತೀರದು. ಶಾಲೆ- ಕಾಲೇಜು ಕಲಿಯುತ್ತಿರುವ ಮಕ್ಕಳಿಗೆ ಸಾಲಾಗಿ ರಜೆ ಸಿಗಲಿ, ಆ ನೆಪದಲ್ಲಿ ತವರಿಗೆ ಹೋಗಲು ಒಂದು ಅವಕಾಶ ತಾನಾಗಿ ಒದಗಿ ಬರಲಿ ಎಂದು ಹೆಚ್ಚಿನ ಗೃಹಿಣಿಯರು ಚಾತಕ ಪಕ್ಷಿಯಂತೆ ಕಾಯುವುದುಂಟು. ತಾವು ಓದಿದ, ಆಡಿದ, ನಲಿದಾಡಿದ ಜಾಗಗಳನ್ನು ಮಕ್ಕಳಿಗೆ ತೋರಿಸಿ, ತಮಗೆ ಖುಷಿ, ಬೆರಗು ಮತ್ತು ಬೆಳಕನ್ನು ಕಾಣಿಸಿದ ವ್ಯಕ್ತಿ, ವಸ್ತು -ವಿಶೇಷವನ್ನು ಮಕ್ಕಳ ಮುಂದೆ ಮತ್ತೂಮ್ಮೆ ತೆರೆದಿಟ್ಟು, ಅವರಲ್ಲಿ ಮೂಡುವ ಅಚ್ಚರಿಗಳನ್ನು ಮತ್ತು ಅವರ ಕಣ್ಣಿನಲ್ಲಿ ತಾವು ಚಿಕ್ಕವರಾಗಿ ಅಲ್ಲೆಲ್ಲಾ ಹರಿದಾಡಿದಂತೆ ಕಲ್ಪಿಸಿಕೊಳ್ಳುವುದನ್ನು ನೆನೆಯುವುದಕ್ಕೆ ಅದೇನೋ ಹಿತ.

ಬಾಲ್ಯದಲ್ಲಿ ತಮ್ಮನ್ನು ಎತ್ತಿ ಆಡಿಸಿದ ಹಿರಿಯರು, ಈಗಲೂ ತಮ್ಮನ್ನು ಕಂಡ ಕೂಡಲೇಸಹಜಾತಿ ಸಹಜವಾಗಿ ಮೊದಲು ಕರೆಯುತ್ತಿದ್ದಂತೆಯೇ ಗೊಂಬೆ, ಪುಟ್ಟಿ, ಹುಡುಗಿ ಅಂತ ಅವರು ಕರೆಯುವುದನ್ನು ಕೇಳಿ ಮುಸಿಮುಸಿ ನಗುವ ಮಕ್ಕಳ ಮುಂದೆ ತುಸು ನಾಚಿಕೆ. ಮಕ್ಕಳಿಗೆ ಗದರುವಾಗಲ್ಲೆಲ್ಲಾ ಅಡ್ಡ ಬರುವ ಅಮ್ಮ, ತಮ್ಮ ಬಾಲ್ಯದ ತುಂಟಾಟಗಳ ನೆನಪಿನ ಬುತ್ತಿ ಬಿಚ್ಚಿ ಕುಳಿತಳೆಂದರೆ ಕೇಳುವುದಕ್ಕೆ ಇನ್ನಿಲ್ಲದ ಆಸೆ. ಮಕ್ಕಳಿಗೆ ತಮ್ಮ ಬಾಲ್ಯದ ಪುಂಡಾಟಗಳು ಗೊತ್ತಾಗಿ, ಅವರು ತಮ್ಮನ್ನು ಛೇಡಿಸುವುದಕ್ಕೆ ಹೊಸ ಅಸOಉಗಳು ಸಿಕ್ಕವಲ್ಲ ಎಂಬ ಹುಸಿಕೋಪ..

Advertisement

ಮಕ್ಕಳನ್ನು ಅಜ್ಜಿಯ ಮಡಿಲಿಗೆ ಒಗಾಯಿಸಿ, ಮಕ್ಕಳು, ಮದುವೆ, ಗಂಡ… ಇದೆಲ್ಲಾ ಆದದ್ದೇ ಸುಳ್ಳೆಂಬಂತೆ ಮತ್ತದೇ ಹರೆಯಕ್ಕೆ ಜಿಗಿದಂತಹ ನಿರಾಳತೆ. ಅಂದು ಗೆಳತಿಯರ ಕೈಕೈಹಿಡಿದು ಶಾಲೆಗೆ, ಪೇಟೆಗೆ ಓಡಾಡಿದ್ದ ರಸ್ತೆಗಳ ತುಂಬಾ ಹರಡಿಕೊಂಡ ಸವಿ ನೆನಪುಗಳನ್ನು, ಮುಗಟಛಿ ನಗುವನ್ನು ಹೆಕ್ಕುತ್ತಾ ನಡೆಯುವಾಗ ಮನಸಿಗೆ ಅವ್ಯಕ್ತ ಉಮ್ಮಳಿಕೆ. ತವರು ಮನೆ ಸೇರಿದ ಹೆಣ್ಣು ಮಕ್ಕಳು, ಅಲ್ಲಿ ಅಮ್ಮನ ಕೈ ಸ್ಪರ್ಶ ಮಾತ್ರದಿಂದಲೇ ಮತ್ತಷ್ಟು ರುಚಿ ಹೆಚ್ಚಿಸಿಕೊಳ್ಳುವ ತಿಂಡಿ ತಿಂದು,

ನೊರೆಗೆದರಿದ ಕಾಫಿಯನ್ನು ಸೊರಸೊರ ಕುಡಿಯುತ್ತಾ ಅಕ್ಕಪಕ್ಕದವರೊಂದಿಗೆ ಹರಟುತ್ತಲೋ, ಪುಸ್ತಕ ಹಿಡಿದೋ ಅಥವಾ ಅಪರೂಪಕ್ಕೆ ಸಿಗುವ ಇಂತಹ ಏಕಾಂತವನ್ನು ಅನುಭವಿಸುತ್ತಾ ಕುಳಿತರೆಂದರೆ, ಸ್ವರ್ಗವೆನ್ನುವುದು ನಮ್ಮ ಮಗ್ಗುಲ್ಲಲೇ ಬಿದ್ದಿದೆ ಅನ್ನುವಂಥ ಸಂಭ್ರಮದ ಜೊತೆಗೇ ದಿನಗಳನ್ನು ಕಳೆಯುತ್ತಾರೆ. ಇಂತಹ ಸುಖ ತವರಲ್ಲಲ್ಲದೇ ಮತ್ತೆಲ್ಲಿ ಸಿಗುವುದಕ್ಕೆ ಸಾಧ್ಯ? ಅದಕ್ಕಾಗಿಯೇ ಅಲ್ಲವಾ, ಹೆಣ್ಣುಮಕ್ಕಳು ತವರೆಂದರೆ ಅಷ್ಟೆಲ್ಲಾ ಹಪಹಪಿಸುವುದು?

ತೌರುಮನೇಲಿಕೊಟ್ಟಿದ್ದು… : ಹುಟ್ಟಿದಊರಲ್ಲಿಯೇ ಉಳಿದುಬಿಡುವವರು ಗಂಡು ಮಕ್ಕಳು. ತಮ್ಮ ಮನೆಯಬಗ್ಗೆ ಗಂಡು ಮಕ್ಕಳು ಕಂಪ್ಲೇಂಟ್‌ ಮಾಡಬಹುದು. ಏನೇನೊಕೊರತೆಗಳನ್ನು ತೋರಬಹುದು. ಆದರೆ,ಅದೇ ಮನೆಯಿಂದ ಮತ್ತೂಂದು ಮನೆಗೆಬೆಳಕಾಗಲು ಹೋಗುವ ಹೆಣ್ಣುಮಕ್ಕಳು, ತವರು ಮನೆಯನ್ನು ಎಂಥಾ ಸಂದರ್ಭದಲ್ಲೂ ಬಿಟ್ಟು ಕೊಡುವುದಿಲ್ಲ. ಅವರ ಪಾಲಿಗೆ ತವರೆಂಬುದೇ ಸ್ವರ್ಗ. ಅದುಭರವಸೆಯ ತಂಗುದಾಣ. ತವರು ಮನೆ ಗುಡಿಸಲಿನ ಹಾಗಿದ್ದರೂ, ಹೆತ್ತವರು ಅಥವಾ ಅಣ್ಣ-ತಮ್ಮಂದಿರು ಕೊಡುವುದು ಕಡಿಮೆಬೆಲೆಯ ವಸ್ತುವೇ ಆಗಿದ್ದರೂ, ಅದನ್ನು ಬಹಳ ಜೋಪಾನದಿಂದ ಇಟ್ಟುಕೊಳ್ಳುತ್ತಾರೆ. ಮಾತಿಗೊಮ್ಮೆ, ಇದು ನಮ್ಮ ತೌರುಮನೆಯಲ್ಲಿ ಕೊಟ್ಟಿದ್ದು ಅನ್ನುತ್ತಾ ಅಭಿಮಾನ ಮೆರೆಯುತ್ತಾರೆ…

 

– ಕವಿತಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next