ಹರಿಯಾಣ : ಗಂಡು ಮಕ್ಕಳು ಜನಿಸಲಿಲ್ಲ ಎನ್ನುವ ಹತಾಶೆಯಲ್ಲಿ ತನ್ನ ನಾಲ್ಕು ಪುಟ್ಟ ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ (2020) ನವೆಂಬರ್ ತಿಂಗಳಿನಲ್ಲಿ ಫರ್ಮೀನಾ ಹೆಸರಿನ ಗೃಹಿಣಿ ತನ್ನ ಆರು, ನಾಲ್ಕು, ಮೂರು ಹಾಗೂ ಒಂದು ವರ್ಷದ ಹೆಣ್ಣು ಮಕ್ಕಳನ್ನು ತರಕಾರಿ ಕತ್ತರಿಸುವ ಚಾಕುವಿನಿಂದ ಹತ್ಯೆ ಮಾಡಿದ್ದಳು. ಬಳಿಕ ತಾನೂ ಗಂಟಲನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಊರಲ್ಲಿನ ಅಂತ್ಯಕ್ರಿಯೆಯೊಂದನ್ನು ಮುಗಿಸಿ ಮನೆಗೆ ಮರಳಿದ್ದ ಆಕೆಯ ಪತಿ ಖುರ್ಷಿದ ಘಟನೆ ನೋಡಿ ಬೆಚ್ಚಿ ಬಿದ್ದಿದ್ದ. ಈ ವೇಳೆ ಅಕ್ಕಪಕ್ಕದ ಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಫರ್ಮೀನಾಳನ್ನು ಆಸ್ಪತ್ರೆಗೆ ಸೇರಿಸಿದ್ದು, ಜತೆಗೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಪಚ್ಚನಾಡಿ ತ್ಯಾಜ್ಯ ದುರಂತ; 45 ಮಂದಿ ಸಂತ್ರಸ್ತರಿಗೆ ಮಧ್ಯಾಂತರ ಪರಿಹಾರ
ಕಳೆದ ಸೋಮವಾರ (ಫೆ.8)ದಂದು ಪೂರ್ಣಗುಣಮುಖವಾಗಿ ಆಸ್ಪತ್ರೆಯಿಂದ ಹೊರಬಂದ ಆರೋಪಿ ಫರ್ಮೀಳಾನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕೋರ್ಟ್ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಗಂಡು ಸಂತಾನವಿಲ್ಲದ ಕೊರಗು : ಇನ್ನು ನಾಲ್ಕು ಮಕ್ಕಳ ಹತ್ಯೆಗೆ ಗಂಡು ಸಂತಾನವಿಲ್ಲದ ಕೊರಗು ಕಾರಣ ಎಂದು ಆರೋಪಿ ಫರ್ಮೀಳಾ ಪತಿ ಖುರ್ಷಿದ ಹೇಳಿದ್ದಾನೆ. ನಮಗೆ ಗಂಡು ಮಕ್ಕಳಿಲ್ಲ ಎನ್ನುವ ಹತಾಶೆ ನನ್ನ ಪತ್ನಿಯಲ್ಲಿ ಕಾಡುತ್ತಿತ್ತು. ಇದು ಅವಳನ್ನು ಮಾನಸಿಕ ಖಿನ್ನತೆಗೆ ದೂಡಿತ್ತು. ಇದೇ ಕಾರಣಕ್ಕೆ ಅವಳು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾರೆ.