Advertisement

ಶಾಲಾ ಪರಿಸರದಲ್ಲಿ ಚಿರತೆ ಹಾವಳಿ, ರಕ್ಷಣೆಗಾಗಿ ಮಕ್ಕಳ ಆಗ್ರಹ

02:40 AM Dec 20, 2018 | Karthik A |

ಸಿದ್ದಾಪುರ: ಅಂಪಾರು ಗ್ರಾಮ ಪಂಚಾಯತ್‌ನ 2018-19ನೇ ಸಾಲಿನ ಮಹಿಳಾ ಹಾಗೂ ಮಕ್ಕಳ ರಕ್ಷಣೆಯ ವಿಶೇಷ ಗ್ರಾಮಸಭೆಯು ಅಂಪಾರು ಸಂಜಯ ಗಾಂಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ವಿದ್ಯಾರ್ಥಿಗಳು ಮರಗಳಿಗೆ ಕೆಂಪು ಹಾಗೂ ಬಿಳಿ ಬಣ್ಣದ ಪಟ್ಟಿ ಕಟ್ಟುವ ಮೂಲಕ ಸಮಸ್ಯೆಗಳು ಹಾಗೂ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದರು. ಮೂಡುಬಗೆ ಸರಕಾರಿ ಶಾಲಾ ಸಮೀಪದಲ್ಲೆ ಅರಣ್ಯ ಪ್ರದೇಶವಿರುವುದರಿಂದ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಶಾಲೆಯಿಂದ ಮನೆಗಳಿಗೆ ಹೋಗುವ ವೇಳೆಯಲ್ಲಿ ಕೂಡ ಚಿರತೆ ಪ್ರತ್ಯಕ್ಷವಾಗುತ್ತಿವೆ. ತಮ್ಮ ರಕ್ಷಣೆಗಾಗಿ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

Advertisement

ಸಮಸ್ಯೆ ಹಾಗೂ ಬೇಡಿಕೆ
ಶಾಲಾ ಸಮಯಕ್ಕೆ ಸರಿಯಾಗಿ ಬರಲು ಬಸ್‌ ವ್ಯವಸ್ಥೆ, ಕಾಲು ಸಂಕ ರಚನೆ, ದಾರಿದೀಪ ಅಳವಡಿಕೆ, ಒಳ ರಸ್ತೆ ಅಭಿವೃದ್ಧಿ, ಶಾಲಾ ಆವರಣಗೋಡೆ ರಚನೆ, ಕುಡಿಯುವ ನೀರು ಇನ್ನಿತ್ಯಾದಿ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಪಂಚಾಯತ್‌ ಉಪಾಧ್ಯಕ್ಷ ಕಿರಣ್‌ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಮಕ್ಕಳ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಕೂಡಲೇ ಸ್ಪಂದಿಸುತ್ತೇವೆ. ಅಭಿವೃದ್ಧಿ ಕಾಮಗಾರಿಗಳು ಸ್ಥಳೀಯಾಡಳಿತದಿಂದ ಗ್ರಾಮ ಮಟ್ಟದಲ್ಲೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಹೆಚ್ಚಿನ ಸಮಸ್ಯೆ ಹಾಗೂ ಬೇಡಿಕೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾ.ಪಂ.ನಿಂದ ಮನವಿ ಕಳುಹಿಸುತ್ತೇವೆ ಎಂದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್‌ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಕೆ. ಅಶೋಕ್‌, ಉದಯ್‌ ಶೆಟ್ಟಿ ಮೂಡುಬಗೆ, ಪ್ರಭಾರ ಅಭಿವೃದ್ಧಿ ಅಧಿಕಾರಿ ಸುಮಾ, ಪೊಲೀಸ್‌ ಇಲಾಖೆಯ ಸಿಂಬದಿ ವಿಟ್ಠಲ್‌, ಕಂದಾಯ ಇಲಾಖೆಯ ಲಕ್ಷ್ಮೀ, ಮಕ್ಕಳ ಮಿತ್ರ ಪ್ರತಿನಿಧಿ ಗಣೇಶ್‌ ಮೊಗವೀರ, ಮಹಿಳಾ ಮಿತ್ರ ಪ್ರತಿನಿಧಿ ರೋಶಿನಿ, ನಮ್ಮ ಭೂಮಿ ಸಂಸ್ಥೆಯ ಉಷಾ, ಅಂಗನವಾಡಿ ಮೇಲ್ವಿಚಾರಕರು, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಕೃಷ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next