Advertisement

ನಾಪತ್ತೆಯಾಗಿದ್ದ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಮೃತದೇಹ ನದಿಯಲ್ಲಿ ಪತ್ತೆ

12:04 AM Apr 01, 2024 | Team Udayavani |

ಬೆಳ್ತಂಗಡಿ/ಪುಂಜಾಲಕಟ್ಟೆ: ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಅಮಾrಡಿ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರ ಮೃತದೇಹವು ಮಾ. 31ರಂದು ಧರ್ಮಸ್ಥಳದಿಂದ ಪಟ್ರಮೆಗೆ ಹೋಗುವ ದಾರಿಯ ಪಟ್ರಮೆ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ, ಸುಮಾರು 6 ವರ್ಷಗಳಿಂದ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀನಾರಾಯಣ ಕೆ. (52) ಅವರು, ಮಾ. 27 ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದವರು ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ, ಈ ಬಗ್ಗೆ ಮನೆಯವರು ಅಮ್ಟಾಡಿ ಪಂಚಾಯತ್‌ನಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿ ಹೋಗಿರುವುದಾಗಿ ತಿಳಿಸಿದ್ದರು. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಬರುತ್ತಿತ್ತು. ಲೋಕಸಭೆ ಚುನಾವಣೆಗೆ ಸಂಬಂಧಿಸಿ ಎಸ್‌ಎಸ್‌ ತಂಡದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ಅವರ ಮನೆಯವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಬೈಕ್‌ ಪತ್ತೆಯಾಗಿತ್ತು
ಮಾ. 31ರಂದು ನಾಪತ್ತೆಯಾಗಿ ನಾಲ್ಕು ದಿನಗಳ ಬಳಿಕ ಅವರ ಮೃತದೇಹ ಪಟ್ರಮೆ ಹೊಳೆಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ಮರುದಿನ ಪಟ್ರಮೆ ಸೇತುವೆ ಬಳಿ ಅವರ ಬೈಕ್‌ ದೊರಕಿತ್ತು. ಬೈಕ್‌ ದೊರೆತ ಬಳಿಕ ಇಲ್ಲಿ ಅವರಿಗಾಗಿ ಹುಡುಕಾಟ ನಡೆಯುತ್ತಿತ್ತು ರವಿವಾರ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಅವರ ಬೈಕ್‌ ಪತ್ತೆಯಾದ ಸ್ಥಳದ ಸಮೀಪವೇ ಮೃತದೇಹ ಪತ್ತೆಯಾಗಿದ್ದು ಇದರ ಆಧಾರದಲ್ಲಿ ಶವ ಲಕ್ಷ್ಮೀನಾರಾಯಣ ಅವರದೆಂದು ಗುರುತಿಸಲಾಗಿದೆ.

ಲಕ್ಷ್ಮೀನಾರಾಯಣ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅನುಮಾನಿಸಲಾಗಿದೆ. ಈ ಹಿಂದೆಯೂ ಅವರು ನಾಪತ್ತೆಯಾಗಿ ಪೊಲೀಸರ ಶೋಧದ ಬಳಿಕ ಪತ್ತೆಯಾಗಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣ ತಂಡದವರು ಶವವನ್ನು ಮೇಲೆತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next