ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ಭೋಜೇಶು ಮಾತ, ಶಯನೇಶು ರಂಭ, ಕ್ಷಮಯೇಶು ಧರಿತ್ರಿ, ರೂಪೇಶು ಲಕ್ಷ್ಮೀ… ಆಹಾ ಎಂದೆಂದಿಗೂ ಸ್ಮತಿಪಟಲದಲ್ಲಿ ಅಚ್ಚಳಿಯದ ಸಾಲುಗಳಿವು. ಭಾರತೀಯ ಸಂಸ್ಕೃತಿ ಅತೀ ಎತ್ತರದ ಸ್ಥಾನದಲ್ಲಿ ಹೆಣ್ಣನ್ನು ಬಿಂಬಿಸಿದೆ. ಪೂಜನೀಯ ಭಾವದಲ್ಲಿ ಪೂಜಿಸಿದೆ. ಒಬ್ಬ ಮಹಿಳೆ ಕೇವಲ ಸೇವೆ ಮಾಡುವ ದಾಸಿಯಲ್ಲ. ಆದರೂ ಆಕೆ ತನ್ನ ಮನೆ ಗಂಡ, ಮಕ್ಕಳು ಎಂದು ಸಂಬಳವಿಲ್ಲದೆ ದುಡಿಯುತ್ತಾಳೆ.
ಹೆಣ್ಣು ಜಗದ ಕಣ್ಣು ಎನ್ನುವ ಮಾತಿದೆ. ಸೃಷ್ಟಿಯ ಅದಮ್ಯ ಶಕ್ತಿಯಾದ ಹೆಣ್ಣು ಮಗಳಾಗಿ, ಸಹೋದರಿಯಾಗಿ, ಮಡದಿಯಾಗಿ, ಸೊಸೆಯಾಗಿ, ತಾಯಿಯಾಗಿ ಹೀಗೆ ಜೀವನದ ವಿವಿಧ ಮಜಲುಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ತಾಯಿ, ತಂಗಿ, ಹೆಂಡತಿಯ ಪಾತ್ರದಲ್ಲಿ ಎಲ್ಲರ ಬದುಕಿನಲ್ಲೂ ಬೆರೆತು ಹೋಗಿದ್ದಾಳೆ.
ತನ್ನೊಡಲ ನೋವ ಯಾರ ಬಳಿಯೂ ಹೇಳಿಕೊಳ್ಳದೇ, ಸದಾ ತನ್ನವರಿಗಾಗಿ ಶ್ರಮಿಸುವ ಈ ಪರಿಯೇ ಹೆಣ್ಣಿಗೆ ತ್ಯಾಗಮಯಿ, ಸಹನಾಮೂರ್ತಿ ಎಂಬ ಬಿರುದು ಬರಲು ಕಾರಣವಾಗಿದೆಯೇನೋ. ಈಗಲೂ ಅದೆಷ್ಟೋ ಮಹಿಳೆಯರು ಅಡುಗೆ ಮನೆಯಲ್ಲಿಯೇ ತಮ್ಮ ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆ ಕೇವಲ ಅಡುಗೆ ಮನೆಗೆ ಸೀಮಿತವಲ್ಲ ಎನ್ನುವುದು ಅಷ್ಟೇ ಸತ್ಯ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಜೀವನಶೈಲಿಯಲ್ಲಿ ತನ್ನವರಿಗಾಗಿ ಪ್ರೀತಿಯ ಕೈ ತುತ್ತು ನೀಡುತ್ತಾ ಇಡೀ ಕುಟುಂಬಕ್ಕೆ ಮಮತೆಯ ಹೂ ಮಳೆ ಸುರಿಸುವ ಹೆಣ್ಣು ಈ ಸೃಷ್ಟಿಯ ಅದ್ಭುತ ಶಕ್ತಿ ಎಂದರೆ ತಪ್ಪಾಗಲಾರದು.
ಇದೀಗ ಆಧುನಿಕತೆಯ ಸ್ಪರ್ಷ ಎಲ್ಲೆಡೆ ವಿಸ್ತರಿಸಿರುವುದರಿಂದ ಮಹಿಳೆಯರು ಮನೆಗೆಲಸ ನಿರ್ವಹಿಸುವುದರೊಂದಿಗೆ ಹೊರಗಿನ ಪ್ರಪಂಚದಲ್ಲೂ ಪುರುಷನಷ್ಟೇ ಸರಿಸಮನಾಗಿ ದುಡಿಯುತ್ತಿದಾರೆ. ಗಂಡ, ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಾ, ವೃತ್ತಿ ಜೀವನದಲ್ಲೂ ವಿವಿಧ ಸವಾಲುಗಳನ್ನು ಎದುರಿಸುತ್ತಾ, ಸಮಸ್ಯೆಗಳಿಗೆ ಅನುಗುಣವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ,ನಾನು ನನ್ನದು ಎನ್ನುವ ಸ್ವಾರ್ಥವಿಲ್ಲದೆ ತನ್ನವರ ಏಳಿಗೆಗೆ ಬದುಕುವ ಶಿರೋಮಣಿಯರಿಗೆ ಸರಿಸಮನಾದ ಶಕ್ತಿ ಇದೆಯೇ?
ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮರಂತಹ ವೀರ ವನಿತೆಯರಿಂದ ಹಿಡಿದು ಬಚೇಂದ್ರಿ ಪಾಲ್, ಮೇರಿ ಕೋಂ ರಂತಹ ಸಾಹಸಿ ಮಹಿಳೆಯರು, ಇನ್ಫೋಸಿಸ್‌ನಂತಹ ಬೃಹತ್ ಐಟಿ ಕಂಪೆನಿಯ ಸಂಸ್ಥಾಪಕಿ ಸುಧಾ ಮೂರ್ತಿ ಹಾಗೂ ದೇಶದ ಪ್ರಮುಖ ಸೌಂದರ್ಯ ಮತ್ತು ಕ್ಷೇಮ ಇ-ಕಾಮರ್ಸ್ ಫ್ಲಾಟ್‌ಫಾರ್ಮ್ Nykaa ದ ಸ್ಥಾಪಕರಾದ ಫಲ್ಗುಣಿ ನಾಯರ್ ಮುಂತಾದ ಮಹಿಳಾ ಮಣಿಗಳು ದೇಶದ ಕೀರ್ತಿ ಪತಾಕೆಯನ್ನು ಜಗದಗಲಕ್ಕೂ ವಿಸ್ತರಿಸಿರುವುದು ಈ ಮಣ್ಣಿನ ಸಾಧನೆಯ ಕಿರೀಟಕ್ಕೆ ಗರಿಯಾಗಿದೆ.
ಬದುಕಿನ ದಾರಿಯಲ್ಲಿ ಎಷ್ಟೇ ನೋವುಂಡರೂ ಅಳುವನ್ನು ಮರೆಮಾಚಿ, ನಗು ಮೊಗ ಚೆಲ್ಲುವ ಹೆಣ್ಣು ತುಚ್ಚ ಮನಸ್ಥಿತಿಯುಳ್ಳ ಒಂದಷ್ಟು ಮೃಗೀಯ ಗುಣವುಳ್ಳ ಮನುಷ್ಯರಿಗೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ. ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾಳ ಅತ್ಯಾಚಾರ ಕೃತ್ಯ, ಇಂದಿಗೂ ಪ್ರಶ್ನಾತೀತವಾಗಿಯೇ ಉಳಿದಿರುವ ನಮ್ಮದೇ ಮಣ್ಣಿನ ಮುಗ್ಧ ಮಗಳು ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಇತ್ತೀಚಿಗಷ್ಟೇ ಮಂಗಳೂರಿನ ಮೂವರು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಈ ಸಮಾಜದ ಕ್ರೂರ ವರ್ಗದ ಅಟ್ಟಹಾಸದ ಪರಮಾವಧಿಗೆ ಸಾಕ್ಷಿಯಾಗಿದೆ.
ಕುವೆಂಪುರವರು ಹೇಳುವಂತೆ ಹೆಣ್ಣು ಕೇವಲ ಮಾನುಷಿಯಲ್ಲ ಅಬಲೆಯೂ ಅಲ್ಲ, ಅವಳೊಂದು ಮಹಾಶಕ್ತಿ. ನೋವ ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ. ಬದುಕಿನ ಎಲ್ಲ ಹಂತದಲ್ಲೂ ಜೊತೆಯಾಗಿ ನಿಲ್ಲುವ ಚೈತನ್ಯದ ಚಿಲುಮೆಗೆ ಸ್ತ್ರೀ ಎಂದರೆ ಅಷ್ಟೇ ಸಾಕೇ.
–
ಧೃತಿ. ಬಿ. ಗೌಡ
ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ