ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾರತಿನಗರ ನಿವಾಸಿ ಸುಧಾ (37) ಮೃತ ದುರ್ದೈವಿ.
ಠಾಣೆ ವ್ಯಾಪ್ತಿಯ ಕಸ್ತೂರ ಬಾ ರಸ್ತೆಯ ಎಚ್.ಪಿ.ಪೆಟ್ರೋಲ್ ಬಂಕ್ ಹತ್ತಿರ ಸೋಮವಾರ ಬೆಳಗ್ಗೆ8.30ರ ಸುಮಾರಿಗೆ ಸುಧಾ ಮಗಳನ್ನು ಖಾಸಗಿ ಶಾಲೆಗೆ ಬಿಟ್ಟು ಎಂ.ಜಿ.ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಕ್ವೀನ್ಸ್ ಜಂಕ್ಷನ್ ಕಡೆಗೆ ವೇಗವಾಗಿ ಹಿಂದಿನಿಂದ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಈ ವೇಳೆ ಕೆಳಗೆ ಬಿದ್ದ ಸುಧಾಮೇಲೆ ಕ್ಯಾಂಟರ್ ಹರಿದು ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರಿಶೀಲಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ದೃಢ ಪಡಿಸಿದ್ದಾರೆ. ಘಟನೆ ಸಂಬಂಧ ಕ್ಯಾಂಟರ್ ಚಾಲಕ ಸೈಯದ್ ಅಲ್ಲಾ(51) ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಜಿನ್ ಆಯಿಲ್ ಸೋರಿಕೆಯಿಂದ ಅವಘಡ :ಮಹಿಳೆ ಚಲಿಸುವ ರಸ್ತೆ ಮೇಲೆ ವಾಹನವೊಂದರ
ಎಂಜಿನ್ ಆಯಿಲ್ ಸೋರಿಕೆಯಾಗಿತ್ತು. ಈವೇಳೆ ಹೋಗುವಾಗ ಆಯ ತಪ್ಪಿ ಸುಧಾ ಕೆಳಗೆಬಿದ್ದಿದ್ದಾರೆ ಎಂದು ಹೇಳಲಾಗಿದೆ. ಅದೇ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಹರಿದು ಸುಧಾ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.