ಬೆಂಗಳೂರು: ಕೆಲದಿನಗಳ ಹಿಂದೆ ಎಚ್‌ಬಿಆರ್ ಲೇಔಟ್‌ನ ಪಾಳುಬಿದ್ದ ಕಟ್ಟಡದ ಶೌಚಗೃಹದಲ್ಲಿ ಅಪರಿಚಿತ ಮಹಿಳೆಯ ಶವದ ಮೂಲ ಪತ್ತೆಹಚ್ಚಿರುವ ಬಾಣಸವಾಡಿ ಠಾಣೆ ಪೊಲೀಸರು, ಮಹಿಳೆಯನ್ನು ಕೊಲೆಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಥಣಿಸಂದ್ರದ ನಿವಾಸಿ ನಳಿನಿ ಮೇರಿ (46) ಕೊಲೆಯಾದ ಮಹಿಳೆ. ಆಕೆಯ ಪ್ರಿಯಕರ ರಮೇಶ್ ಮೇ 31ರಂದು ನಳಿನಿಯನ್ನು ಶೌಚಗೃಹದಲ್ಲಿ ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 31ರಂದು ಬೆಳಗ್ಗೆ 9 ಗಂಟೆಗೆ ಕಾಚರಕನಹಳ್ಳಿಯಲ್ಲಿ ಕೆಲಸ ಹುಡುಕಿಕೊಂಡು ಬರುವುದಾಗಿ ಹೇಳಿ ತೆರಳಿದ್ದ ನಳಿನಿ ಕೆಲ ದಿನ ಕಳೆದರೂ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ತಾಯಿ ನಾಪತ್ತೆ ಬಗ್ಗೆ ಅವರ ಪುತ್ರ ಹೆಣ್ಣೂರು ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಜೂ.11ರ ಮಧ್ಯಾಹ್ನ ಎಚ್‌ಬಿಆರ್ ಲೇಔಟ್‌ನ ಪಾಳುಬಿದ್ದ ಶೌಚಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆಯಾಗಿತ್ತು. ಈ ಕುರಿತು ತನಿಖೆ ಚುರುಕುಗೊಳಿಸಿದ ಬಾಣಸವಾಡಿ ಠಾಣೆ ಪೊಲೀಸರು ನಾಪತ್ತೆಯಾಗಿದ್ದ ನಳಿನಿ ಎಂಬುದನ್ನು ಪತ್ತೆಹಚ್ಚಿದ್ದರು. ಜತೆಗೆ, ಆಕೆಯ ಜತೆ ರಮೇಶ್ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದರು.
ಅನುಮಾನದ ಮೇರೆಗೆ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ನಳಿನಿ ಜತೆ ಉತ್ತಮ ಒಡನಾಟ ಹೊಂದಿದ್ದೆ. ಆದರೆ, ಆಕೆ ಬೇರೆಯವರ ಜತೆ ಒಡನಾಟ ಹೊಂದಿದ್ದಳು. ಈ ನನ್ನ ಗಮನಕ್ಕೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಆಕೆಯನ್ನು ಎಚ್‌ಬಿಆರ್ ಲೇಔಟ್‌ನ ಪಾಳುಬಿದ್ದ ಕಟ್ಟಡದ ಶೌಚಗೃಹಕ್ಕೆ ಕರೆಸಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.