ಚೆನ್ನೈ: ಧನುಷ್ ಅಭಿನಯದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬುಧವಾರ(ಜ.3 ರಂದು) ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಇದೇ ಕಾರ್ಯಕ್ರಮದ ವೇಳೆ ನಿರೂಪಕಿಗೆ ಕಿರುಕುಳ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದ ಕಲಾವಿದರು ಹಾಗೂ ಧನುಷ್ ಅವರ ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಇಬ್ಬರು ಯುವತಿಯರ ಸುತ್ತ ಕೆಲ ಫ್ಯಾನ್ಸ್ ಹಾಗೂ ಜನ ಸುತ್ತುವರೆದಿದ್ದಾರೆ. ಇದರಲ್ಲಿ ಒಬ್ಬರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಐಶ್ವರ್ಯಾ ರಘುಪತಿ ಕೂಡ ಇದ್ದರು.
ಐಶ್ವರ್ಯಾ ರಘುಪತಿ ಅವರಿಗೆ ಯುವಕನೊಬ್ಬ ಮೈ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಈ ಕಾರಣದಿಂದ ಐಶ್ವರ್ಯಾ ಆಕ್ರೋಶಗೊಂಡು ಕಿರುಕುಳ ನೀಡಿದಾತನ ಕಾಲರ್ ಹಿಡಿದು, ಕ್ಷಮೆ ಕೇಳುವಂತೆ ಮಾಡಿದ್ದಾರೆ. ಇದಲ್ಲದೆ ಆತ ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಕಾಲಿಗೆ ಬಿದ್ದು ಕ್ಷಮೆ ಕೇಳಿದ ಬಳಿಕ ಪರಾರಿ ಆಗಲು ಯತ್ನಿಸಿದ್ದಾನೆ. ಆದರೆ ಐಶ್ವರ್ಯಾ ಆತನ ಕಾಲರ್ ಹಿಡಿದು ಕಪಾಳಕ್ಕೆ ಬಾರಿಸಿದ್ದಾರೆ.
ಈ ಘಟನೆಯ ಬಗ್ಗೆ ನಿರೂಪಕಿ ಐಶ್ವರ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. “ಗುಂಪಿನ ನಡುವೆ ಒಬ್ಬಾತ ನನಗೆ ಕಿರುಕುಳ ನೀಡಿದ. ಆತನನ್ನು ತಕ್ಷಣ ಹಿಡಿದು ಬಾರಿಸುವವರೆಗೂ ನಾನು ಬಿಡಲಿಲ್ಲ. ಆತ ಓಡಲು ಯತ್ನಿಸಿದ, ನಾನು ಆತನ ಬೆನ್ನಟ್ಟಿದೆ. ಆತನಿಗೆ ಹೆಣ್ಣಿನ ಅಂಗಾಂಗವನ್ನು ಹಿಡಿಯುವ ತಾಕತ್ತು ಇದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆತನ ಮೇಲೆ ಕೂಗಾಡಿ ಹಲ್ಲೆ ನಡೆಸಿದೆ” ಎಂದು ಬರೆದುಕೊಂಡಿದ್ದಾರೆ.
“ನನ್ನ ಸುತ್ತಲೂ ಒಳ್ಳೆಯ ಜನರಿದ್ದಾರೆ ಮತ್ತು ಜಗತ್ತಿನಲ್ಲಿ ಸಾಕಷ್ಟು ರೀತಿಯ ಮತ್ತು ಗೌರವಾನ್ವಿತ ಮನುಷ್ಯರಿದ್ದಾರೆಂದು ನನಗೆ ತಿಳಿದಿದೆ. ಆದರೆ ಈ ಕೆಲವು ಪ್ರತಿಶತ ರಾಕ್ಷಸರ ಸುತ್ತಲೂ ಇರಲು ನಾನು ತುಂಬಾ ಹೆದರುತ್ತೇನೆ!” ಎಂದು ಅವರು ಬರೆದುಕೊಂಡಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ʼಕ್ಯಾಪ್ಟನ್ ಮಿಲ್ಲರ್ʼ ತಂಡಕ್ಕೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಪ್ರೀ ಟಿಕೆಟ್ ಗಳ ಜಾಗ್ರತೆವಹಿಸಿ, ಜನ ಕಮ್ಮಿಯಿದ್ದರೆ ಇಂಥ ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಬೇಡಿ ಎಂದು ಕೆಲವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಅರುಣ್ ಮಾಥೇಶ್ವರನ್ ನಿರ್ದೇಶನದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಪ್ರಿಯಾಂಕಾ ಅರುಲ್ ಮೋಹನ್, ಶಿವ ರಾಜ್‌ಕುಮಾರ್, ಸಂದೀಪ್ ಕಿಶನ್, ಜಾನ್ ಕೊಕ್ಕೆನ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಜ.12 ರಂದು ಸಿನಿಮಾ ತೆರೆ ಕಾಣಲಿದೆ.