Advertisement
ನಿನ್ನೆ ಫೇಸ್‌ಬುಕ್ ಫೀಡ್ ನೋಡುತ್ತಾ ಇದ್ದಾಗ ವಿಶ್ವಸುಂದರಿ- 2017ಕ್ಕೆ ಸಂಬಂಧಿಸಿದ ಚಿತ್ರವೊಂದು ಕಣ್ಣಿಗೆ ಬಿತ್ತು. ಅದರಲ್ಲಿ 3 ಪ್ರತಿಸ್ಪರ್ಧಿಗಳಿದ್ದರು. ಇವರಲ್ಲಿ ಕೀನ್ಯಾದ ಮೆಗಲಿನ್ ಜೆರೂತೋ ಎನ್ನುವ ಯುವತಿ ಕೂಡ ಇದ್ದಳು. ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾದಂಥ ಸ್ಪರ್ಧೆಗಳ ವಿಚಾರದಲ್ಲಿ ನಾವೆಲ್ಲರೂ ಒಂದು ಪೂರ್ವಗ್ರಹ ಹೊಂದಿದ್ದೇವೆ. ಅದೇನೆಂದರೆ ಇದರ ಸ್ಪರ್ಧಿಗಳೆಲ್ಲ ಬೆಳ್ಳಗೆ, ಉದ್ದಕೆ, ತೆಳ್ಳಗೆ ಇರಲೇಬೇಕು ಎನ್ನುವುದು. ಆದರೆ ಮೆಗಲಿನ್ ಕಪ್ಪಗಿದ್ದಾರೆ ಎನ್ನುವ ಕಾರಣಕ್ಕಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಮೇಲೆ ಕುಹಕವಾಡ ಲಾಯಿತು. ಅವರ ಚಿತ್ರವನ್ನು ಅಣುಕಿಸುತ್ತಾ ಕಮೆಂಟ್ ಮಾಡಲಾ ಯಿತು. ಅವರು ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಲು ಅರ್ಹರೇ ಅಲ್ಲ ಎನ್ನುವ ಧಾಟಿಯಲ್ಲಿತ್ತು ಒಂದು ಪೋಸ್ಟ್(ಒಬ್ಬರು ಕಪ್ಪಗಿರಲು ಅಥವಾ ಬೆಳ್ಳಗಿರುವುದರ ಹಿಂದೆ ಭೌಗೋಳಿಕ ಮತ್ತು ಜೈವಿಕ ಕಾರಣಗಳಿರುತ್ತವೆ. ಸಹಜವಾಗಿಯೇ ಕೀನ್ಯಾದವರಾದ ಮೆಗಲಿನ್ ಅವರ ಬಣ್ಣ ಕಪ್ಪಗಿದೆ.).
Related Articles
Advertisement
ಈ ಸ್ಪರ್ಧೆಗಳನ್ನು ಸಮರ್ಥಿಸಿ ಮಾತನಾಡುವವರು ಒಂದು ಪಾಯಿಂಟ್ ಅನ್ನು ಮುಂದಿಡುತ್ತಾರೆ. “”ನೋಡಿ ಇದರಲ್ಲಿ ಕೇವಲ ಬಾಹ್ಯ ಸೌಂದರ್ಯವಷ್ಟೇ ಅಲ್ಲ, ಇನ್ನೂ ಅನೇಕ ಸಂಗತಿಗಳನ್ನೂ ಮಾನದಂಡವಾಗಿ ಪರಿಗಣಿಸಲಾಗುತ್ತದೆ’ ಎನ್ನುವುದು ಅವರ ವಾದ. ಇದನ್ನೇ ಅವರು “ಬ್ಯೂಟಿ ವಿತ್ ಬ್ರೇನ್’ ಎಂಬ ಹೆಸರಲ್ಲಿ ಬಣ್ಣಿಸುತ್ತಾರೆ. ಆದರೆ ನಿಜಕ್ಕೂ ವಿಶ್ವಸುಂದರಿಯ ಆಯ್ಕೆಯಾಗು ವುದು ಬಾಹ್ಯ ಸೌಂದರ್ಯವನ್ನು ಪರಿಗಣಿಸಿಯೇ ಎನ್ನುವುದು ನಿರ್ವಿವಾದ. ಕೊನೆಯಲ್ಲಿ ನೆಪಕ್ಕೆಂಬಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಇದರಲ್ಲಿ ಬ್ರೇನ್‌ಗೆ ಎಷ್ಟು ಜಾಗ ಸಿಗುತ್ತದೋ, ಬ್ಯೂಟಿ ಎಷ್ಟು ಪರಿಗಣಿತವಾಗುತ್ತದೋ ನೀವೇ ನೋಡಿದ್ದೀರಿ.
ಗಮನಿಸಬೇಕಾದ ಸಂಗತಿಯೆಂದರೆ, ಒಂದೆಡೆ ಮಹಿಳೆಯರು ಬಣ್ಣ, ಶರೀರ, ಎತ್ತರದ ಆಧಾರದಲ್ಲಿ ತಮ್ಮ ವ್ಯಕ್ತಿತ್ವವನ್ನು ನಿರ್ಧ ರಿಸಬಾರದು, ತಾವು ಹೇಗಿದ್ದೇವೋ ಅದರಲ್ಲೇ ಖುಷಿಯಾಗಿದ್ದೇವೆ ಎಂದು ಹೋರಾಟ ಮಾಡುತ್ತಿದ್ದಾರೆ. ಸೌಂದರ್ಯದ ಅರ್ಥವೇನು? ಎಲ್ಲರೂ ಏಂಜಲೀನಾ ಜೋಲಿ ಅಥವಾ ಐಶ್ವರ್ಯ ರೈ ಆಗಿರಬೇಕೆಂದೇನು? ಎಂಬ ಪ್ರಶ್ನೆ ಎದುರಿಡುತ್ತಿದ್ದಾರೆ. ಎಲ್ಲ ರಿಗೂ ಹೀಗೆ ಆಗಲು ಸಾಧ್ಯವೇ ಇಲ್ಲ. ನಿಮಗೆ ಯಾರಾದರೂ ತೆಳ್ಳಗೆ ಆಗಲು, ಬೆಳ್ಳಗೆ ಆಗಲು ಹೇಳುತ್ತಾರೆಂದರೆ, ನಿಮ್ಮ ಎತ್ತರವನ್ನು ಅಣುಕಿಸುತ್ತಾರೆಂದರೆ ಬಹುಶಃ ಆಗ ನಿಮ್ಮ ಮನಸ್ಸಿನಲ್ಲೂ ಒಂದು ವಾಕ್ಯ ಧ್ವನಿಸಲಾರಂಭಿಸುತ್ತದೇನೋ- “ಇಟ್ಸ್ ಮೈ ಬಾಡಿ'(ಇದು ನನ್ನ ದೇಹ). ಮಹಿಳೆಯರನ್ನು ಭೋಗದ ವಸ್ತುವಿನಂತೆ, ಬಾಹ್ಯ ಸೌಂದರ್ಯದ ಗೊಂಬೆಗಳಂತೆ ತೋರಿಸುವುದನ್ನು ವಿರೋಧಿಸುತ್ತಾ ಇಂದು ಯಾವ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನುವು ದನ್ನು ನೋಡಿದ್ದೇವೆ. ಆದರೆ ಇವೆಲ್ಲದರ ನಡುವೆಯೇ ಮಿಸ್ ವರ್ಲ್ಡ್ ಮತ್ತು ಮಿಸ್ ಯೂನಿವರ್ಸ್‌ನಂಥ ವೇದಿಕೆಗಳು ಈ ಚರ್ಚೆಗಳನ್ನೆಲ್ಲ ಅಣಕಿಸುತ್ತಾ ವಿಜ್ರಂಭಿಸುತ್ತಿವೆ. ಈ ಕಾಂಟೆಸ್ಟ್ ಗಳು ಪುರುಷವಾದಿ ಸಮಾಜದಿಂದ ರೂಪಿತವಾದ ನಾರಿತ್ವದ ಪರಿಭಾಷೆಯನ್ನೇ ಮತ್ತಷ್ಟು ವಿಸ್ತರಿಸುತ್ತಿದೆಯಷ್ಟೆ.
ಸೌಂದರ್ಯದ ಬಜಾರು, ಖರೀದಿದಾರರುಜಗತ್ತೀಗ ಸೌಂದರ್ಯದ ಬಜಾರು ಮತ್ತು ನಾವೆಲ್ಲರೂ ಅದರ ಗ್ರಾಹಕರು. ಮಾನುಷಿ ಚಿಲ್ಲರ್ ವಿಶ್ವಸುಂದರಿ ಕಿರೀಟ ಗಳಿಸಿದ ಮೇಲೆ ಅದೆಷ್ಟು ಯುವತಿಯರು, ಹುಡುಗಿಯರು ಆಕೆಯಂತಾಗ ಬೇಕೆಂದು ಪ್ರಯತ್ನಿಸುತ್ತಿದ್ದಾರೋ ತಿಳಿಯದು. ಒಬ್ಬರಿಗೆ ಮಾನುಷಿಯಂಥ ಹೈಟ್ ಬೇಕಿದ್ದರೆ, ಇನ್ನೊಬ್ಬರಿಗೆ ಆಕೆಯಂಥ ಸ್ಮೈಲ್ ಬೇಕು. ಆದರೆ ಎಚ್ಚರಿಕೆಯಿಂದಿರಿ, ನಮ್ಮ ಸುತ್ತಲಣ ಮಾರು ಕಟ್ಟೆ ಲೋಕವಿದೆಯಲ್ಲ, ಇದು ಭಿನ್ನ ಭಿನ್ನ ಪ್ಯಾಕಿಂಗ್‌ಗಳಲ್ಲಿ ವರ್ಣಭೇದ ಮತ್ತು ಅಸಮಾನತೆಯನ್ನು ಮಾರುತ್ತಿದೆ. ಸೌಂದ ರ್ಯದ ಮಾರುಕಟ್ಟೆ ಅತ್ಯಂತ ಬೃಹತ್ತಾದದ್ದು. ನಾವೆಲ್ಲ ಒಂದಲ್ಲಾ ಒಂದು ರೀತಿ ಇದರ ಖರೀದಿದಾರರಾಗಿ ಬದಲಾಗಿಬಿಟ್ಟಿದ್ದೇವೆ. (ನನ್ನ ವಿಷಯಕ್ಕೇ ಬರುವುದಾದರೆ ಕಳೆದ ವರ್ಷದವರೆಗೂ ನಾನು ಫೇರ್‌ನೆಸ್ ಕ್ರೀಮ್ ಖರೀದಿ ಮಾಡುತ್ತಿದೆ.) ಮಹಿಳೆಯರ ಬದುಕನ್ನು ಈ ಮಾರುಕಟ್ಟೆ ವ್ಯವಸ್ಥೆ ಬಾಲ್ಯದಿಂದಲೇ ಆಕ್ರಮಿಸಿ ಬಿಡುತ್ತದೆ. ಇದರಲ್ಲಿ ಅದರದ್ದಷ್ಟೇ ತಪ್ಪಿಲ್ಲ. ಇದರಲ್ಲಿ ನಮ್ಮ ಸಮಾಜವೂ ತಪ್ಪಿತಸ್ಥವೇ. ಒಬ್ಬ ಹುಡುಗಿಯ ದೇಹಕ್ಕೆ ಏನಾದರೂ ಆಯಿತೆಂದುಕೊಳ್ಳಿ. ಕೂಡಲೇ ಎಲ್ಲರಿಂದಲೂ ಎದುರಾಗುವ ಪ್ರಶ್ನೆಯೊಂದೇ-ಅರೆ ಈಗ ಇವಳ ಮದುವೆ ಹೇಗಾಗುತ್ತೆ? ಹುಡುಗನೊಬ್ಬ ತನ್ನ ಮಡದಿ ಐಶ್ವರ್ಯ ರೈ ರೀತಿ ಕಾಣಬೇಕು ಎಂದು ಬಯಸುವುದೇಕೆ? ಏಕೆಂದರೆ ಇಡೀ ಜಗತ್ತು ಆಕೆಯನ್ನು ವಿಶ್ವಸುಂದರಿ ಎಂದು ಒಪ್ಪಿಕೊಂಡುಬಿಟ್ಟಿದೆ. ಆಕೆ ಉಳಿದ ಯುವತಿಯರಿಗೆ ಒಂದು ಉಪಮೆಯಾಗಿಬಿಟ್ಟಿದ್ದಾಳೆ. ಒಮ್ಮೆ ಗಮನವಿಟ್ಟು ನೋಡಿ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಧು-ವರರ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಇರುವ ಬೇಡಿಕೆಯೇನು? “ಹುಡುಗಿ ಬೆಳ್ಳಗಿರಬೇಕು’ ಎಂದೇ ತಾನೆ? ನಮ್ಮ ಸಮಾಜದಲ್ಲಿ ಮಹಿಳೆಯ ಬಯೋಡೇಟಾದಲ್ಲಿ “ಬಣ್ಣ’ ಎಂಬ ಪ್ರತ್ಯೇಕ ಕಾಲಂ ಕೂಡ ಇರುತ್ತದೆ! ಇಂಥ ಬಣ್ಣದ ಬೇಡಿಕೆಗಳು ಜಾಹೀರಾತುಗಳಿಂದ ಮಾಯವಾಗುವುದಕ್ಕೆ ಸಮಯವಂತೂ ಹಿಡಿಯಲಿದೆ. ಮಾನುಷಿಯ ಗೆಲುವನ್ನು ಹಬ್ಬದಂತೆ ಆಚರಿಸಲಾಯಿತು. ಇದಷ್ಟೇ ಅಲ್ಲ, ಇದು ನಮ್ಮ ದೇಶಕ್ಕೆ ಗರ್ವ ತರುವ ವಿಚಾರ ಎಂದು ಅದಕ್ಕೆ ರಾಷ್ಟ್ರವಾದಿ ಆ್ಯಂಗಲ್ ಕೂಡ ಕೊಡಲಾಯಿತು. ಎಲ್ಲಿಯವರೆಗೂ ವರ್ಣಭೇಧ ಮತ್ತು ಅಸಮಾನತೆಯನ್ನು ನಮ್ಮಲ್ಲಿ ಸಂಭ್ರಮಿಸಲಾಗುತ್ತದೋ ಅಲ್ಲಿಯವರೆಗೂ ಉದಾರ ಮತ್ತು ಪ್ರಗತಿಶೀಲ ರಾಷ್ಟ್ರವಾಗಲು ಭಾರತಕ್ಕೆ ಸಾಧ್ಯವಾಗುವುದಿಲ್ಲ. ಸೌಂದರ್ಯ ಮಾರುಕಟ್ಟೆಯ ವಿಷಯ ಪಕ್ಕಕ್ಕಿಡಿ, ಒಬ್ಬ ನಾಗರಿಕರಾಗಿ ನಾವು ಉದಾರ, ಸಮಾನ, ನ್ಯಾಯೋಚಿತ ಮತ್ತು ಪ್ರಗತಿಶೀಲ ವ್ಯಕ್ತಿಗಳಾಗುವ ರಾಗುವ ನಿಟ್ಟಿನಲ್ಲಿ ಮುಂದಡಿ ಇಡಲೇಬೇಕಾಗಿದೆ. ಮಾನುಷಿಯನ್ನು “ಭಾರತದ ಮಗಳು’ ಎಂಬ ಉಪಮೆಯಿಂದ ಪ್ರತ್ಯೇಕಿಸಿ ಆಕೆಯನ್ನು “ಒಬ್ಬ ಮಹಿಳೆ’ ಎಂಬ ರೂಪದಲ್ಲಿ ನೋಡುವ ಜರೂರತ್ತಿದೆ. ಗೀತಿಕಾ, ಪತ್ರಕರ್ತೆ