Advertisement

ಮಹಿಳೆ ಘನತೆಗೆ ಫುಲೆ ಜೀವನ ಮುಡಿಪು

11:30 AM Jan 09, 2019 | |

ಆಳಂದ: ಹೆಣ್ಣು ಮಕ್ಕಳು ಮನೆಯೊಳಗಿರಬೇಕಾದ ಕಾಲವೊಂದಿತ್ತು. ಆಕೆ ಅದರಾಚೆಗೆ ಹೋದರೆ ಅವಮಾನಿಸುವ ಕಾಲದಲ್ಲಿ ಎಲ್ಲ ರೀತಿಯ ಪ್ರತಿರೋಧಗಳ ನಡುವೆಯೂ ಮಹಿಳೆಯರಿಗೆ ಶಿಕ್ಷಣ ನೀಡಿ, ಅವರನ್ನು ಪುರುಷರಂತೆ ಸಮಾಜದಲ್ಲಿ ಘನತೆಯಿಂದ ಬಾಳುವಂತೆ ಮಾಡಲು ಅಕ್ಕ ಸಾವಿತ್ರಿ ಫುಲೆ ತಮ್ಮ ಇಡೀ ಜೀವನ ಮುಡುಪಾಗಿಟ್ಟರು ಎಂದು ಹೋರಾಟಗಾರ್ತಿ ಕೆ. ನೀಲಾ ಹೇಳಿದರು.

Advertisement

ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಅಂಗವಾಗಿ ನಡೆದ ಸಮಾರಂಭ ಉದ್ಧೇಶಿಸಿ ಅವರು ಮಾತನಾಡಿದರು.

ನಾವು ಇಂದು ಎಷ್ಟೇ ಮುಂದುವರಿದ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಹೆಣ್ಣುಗಂಡಿನ ಅಡಿಯಾಳು ಎನ್ನುವ ಪರಿಕಲ್ಪನೆಯಲ್ಲಿದ್ದೇವೆ. ಹೀಗಿರುವಾಗ ಸುಮಾರು 150 ವರ್ಷಗಳ ಹಿಂದೆ ಯಾವ ರೀತಿಯ ವ್ಯವಸ್ಥೆಯಿತ್ತು ಎಂಬುದನ್ನು ನಾವು ಊಹಿಸಿಕೊಳ್ಳಬಹುದಾಗಿದೆ ಎಂದರು.

ಕ್ಲಿಷ್ಟಕರ ಸಮಾಜದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ ಮಹಿಳೆಯರ ಶಿಕ್ಷಣಕ್ಕೆ ಸಾಕಷ್ಟು ಶ್ರಮಿಸಿದರು. ಸಾವಿತ್ರಿಬಾಯಿ ಫುಲೆ ಅವರ ಈ ಕಾರ್ಯದಲ್ಲಿ ಜ್ಯೋತಿಬಾ ಫುಲೆ ಕೊಡುಗೆ ಮರೆಯಲಾಗದು. ಸಾವಿತ್ರಿಬಾಯಿಗೆ ಶಿಕ್ಷಣಕೊಡಿಸಿ ಅವರನ್ನು ಶಿಕ್ಷಕಿಯನ್ನಾಗಿ ಮಾಡಿದ್ದು ಜ್ಯೋತಿಬಾ ಫುಲೆ. ಅವರೊಂದಿಗೆ ಅವರ ಸಹೋದರಿ ಸುಗುಣಬಾಯಿ ಅವರ ಸೇವೆಯನ್ನು ಮರೆಯಲಾಗದು ಎಂದು ಹೇಳಿದರು.

ದೀನ, ದಲಿತ ಹಾಗೂ ಹಿಂದುಳಿದ ಮಹಿಳೆಯರಿಗೆ ಶಿಕ್ಷಣ ನೀಡುತ್ತಿದ್ದ ಅವರ ಕಾರ್ಯಕ್ಕೆ ಮೇಲ್ವರ್ಗದವರಿಂದ ಅನೇಕ ಅಡೆತಡೆಗಳು ಬಂದವು. ಅವರನ್ನು ಮನೆಯಿಂದ ಹೊರಹಾಕಲಾಯಿತು. ಇಂತಹ ಸಂದರ್ಭದಲ್ಲಿ ಶೇಕ್‌ ಫಾತಿಮಾ ಹಾಗೂ ಕುಟುಂಬದವರು ಅವರಿಗೆ ಆಶ್ರಯ ನೀಡಿ ಸತ್ಯಶೋಧನೆ ಸಮಾಜದ ಮೂಲಕ ಮಹಿಳಾ ಶಿಕ್ಷಣ ಸಮಾನತೆ ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸತ್ಯಶೋಧನಾ ಸಮಾಜದ ಮೂಲಕ ಇಂಗ್ಲಿಷ್‌ ಶಿಕ್ಷಣ ನೀಡುವ ಮೂಲಕ ಮತ್ತು ಬ್ರಿಟಿಷ್‌ ಕಾನೂನನ್ನು ಬಳಸಿಕೊಂಡು ಅಸಮಾನತೆ ಮತ್ತು ಶೋಷಣೆಯ ಪ್ರತೀಕವಾದ ಮನು ವ್ಯವಸ್ಥೆ ಬದಲಾವಣೆಗಾಗಿ ತಮ್ಮ ಜೀವನವಿಡಿ ಹೋರಾಟ ನಡೆಸಿದರು. ಕೊನೆಗೆ ಪ್ಲೇಗ್‌ ಮಹಾಮಾರಿಗೆ ತುತ್ತಾಗಿ ಕೊನೆಯುಸಿರೆಳೆದರು ಎಂದು ಹೇಳಿದರು.

Advertisement

ಸಹ ಕುಲಪತಿ ಪ್ರೊ| ಜಿ.ಆರ್‌. ನಾಯಕ, ಕುಲಸಚಿವ ಪ್ರೊ| ಮುಸ್ತಾಕ್‌ ಅಹ್ಮದ್‌ ಐ. ಪಟೇಲ್‌, ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಪ್ರೊ| ಬಿ.ಆರ್‌. ಕೆರೂರ್‌, ವಿತ್ತಾಧಿಕಾರಿ ಶಿವಾನಂದಂ, ಎಲ್ಲ ನಿಕಾಯಗಳ ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ಕುಮಾರಿ ಕದಂಬಿನಿ ನಿರೂಪಿಸಿದರು. ಕುಮಾರಿ ಅಲಕ ಬಿ.ಜಿ. ಸ್ವಾಗತಿಸಿದರು, ಕುಮಾರಿ ಸೀಮಾ ಶಾಸ್ತ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next