Advertisement

Madhya Pradesh; ಲಿವ್‌ ಇನ್‌ ಸಂಗಾತಿಗೂ ಜೀವನಾಂಶ: ಹೈಕೋರ್ಟ್‌

12:52 AM Apr 07, 2024 | Team Udayavani |

ಭೋಪಾಲ: ಲಿವ್‌ ಇನ್‌ (ಸಹ ಜೀವನ) ಸಂಬಂಧದಲ್ಲಿದ್ದು, ಬಳಿಕ ಪ್ರತ್ಯೇಕವಾದರೆ ಮಹಿಳೆಯು ಪುರುಷನಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದೆ.

Advertisement

ಮದುವೆಯಾಗದಿದ್ದರೂ ದೀರ್ಘ‌ ಅಥವಾ ಪರಿಗಣಿಸಬಹುದಾದ ಅವಧಿಯವರೆಗೂ ಇಬ್ಬರು ಸಹ ಜೀವನ ನಡೆಸಿ, ಬಳಿಕ ಪ್ರತ್ಯೇಕವಾದರೆ ಆಗ ಮಹಿಳೆಯು ತನ್ನ ಲಿವ್‌ ಇನ್‌ ಸಂಗಾತಿಯಿಂದ ಜೀವನಾಂಶವನ್ನು ಪಡೆದುಕೊಳ್ಳಬಹುದು ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಮೂಲಕ ಸಹ ಜೀವನ ಸಂಬಂಧದಲ್ಲಿರುವ ಮಹಿಳೆಯರ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಈ ಹಿಂದೆ ಕೆಳ ಹಂತದ ನ್ಯಾಯಾಲಯ ಸಹ ಜೀವನ ವ್ಯವಸ್ಥೆಯಿಂದ ಪ್ರತ್ಯೇಕಗೊಂಡ ಮಹಿಳೆಗೆ ತಿಂಗಳಿಗೆ 1,500 ರೂ. ಜೀವನಾಂಶ ನೀಡುವಂತೆ ಸೂಚಿಸಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಶೈಲೇಶ್‌ ಬೋಪೆc ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ಬರೂ ಪರಿಗಣಿಸಬಹುದಾದ ಅವಧಿಗೆ ಸಹ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ಸಾಕ್ಷ್ಯಗಳಿದ್ದರೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ.

ಅರ್ಜಿದಾರ ಶೈಲೇಶ್‌ ಬೋಪೆc ಮತ್ತು ಆತನ ಸಂಗಾತಿ ಅನಿತಾ ಬೋಪೆc ಅವರು ಪತಿ-ಪತ್ನಿಯಂತೆ ಸಹ ಜೀವನ ನಡೆಸುತ್ತಿದ್ದರು. ಅಲ್ಲದೆ, ಅವರಿಬ್ಬರೂ ಮಗುವನ್ನೂ ಪಡೆದಿದ್ದಾರೆ. ಅವರಿಗೆ ಮಗು ಹುಟ್ಟಿರುವ ಸಂಗತಿಗೆ ಹೆಚ್ಚಿನ ಒತ್ತು ಕೊಟ್ಟು ಹೈಕೋರ್ಟ್‌ ಈ ತೀರ್ಪು ನೀಡಿದೆ.

ಇದೇ ಮೊದಲ ಪ್ರಕರಣ ಅಲ್ಲ
ಲಿವ್‌ ಇನ್‌ ಸಂಬಂಧದ ಕುರಿತಾಗಿ ಉತ್ತರಾಖಂಡ ಹೊರತುಪಡಿಸಿ ದೇಶದಲ್ಲಿ ಇನ್ನೂ ಸ್ಪಷ್ಟವಾದ ಕಾನೂನುಗಳಿಲ್ಲವಾದರೂ 2010ರಲ್ಲಿ ಇಂಥದ್ದೇ ಪ್ರಕರಣವೊಂದರಲ್ಲಿ ಕೇರಳ ಹೈಕೋರ್ಟ್‌ ಜೀವನಾಂಶಕ್ಕೆ ಆದೇಶಿಸಿತ್ತು. ಆ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲೂ ಚರ್ಚೆಯಾಗಿತ್ತು. 2023ರಲ್ಲಿ ಗುಜರಾತ್‌ ಹೈಕೋರ್ಟ್‌ ಇದೇ ರೀತಿಯ ಪ್ರಕರಣವೊಂದರಲ್ಲಿ ಜೀವನಾಂಶಕ್ಕೆ ಸೂಚಿಸಿತ್ತು. ಉತ್ತರಾಖಂಡ ಸರಕಾರವು ಜಾರಿ ಮಾಡಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆಯಲ್ಲಿ, “ಲಿವ್‌ ಇನ್‌ ಸಂಬಂಧದ ನೋಂದಣಿ ಕಡ್ಡಾಯ’ ಎಂಬ ಅಂಶವನ್ನು ಸೇರ್ಪಡೆಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next