ಮೈಸೂರು: ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಹೆಣ್ಣು ಮಕ್ಕಳು ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಟಿ.ಬಿ.ನಾಗರಾಜ್‌ಗೆ ಹೆಣ್ಣು ಮಗಳು ಎದುರಾಳಿಯಾಗಿರುವುದು ಭಯ ಮೂಡಿಸಿರಬಹುದು. ಅದಕ್ಕಾಗಿ ಪದ್ಮಾವತಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ನನಗ್ಯಾವ ಲೆಕ್ಕ ಎಂಬ ಎಂಟಿಬಿ ಹೇಳಿಕೆ ಖಂಡನೀಯ. ಹೆಣ್ಣು ಮಕ್ಕಳು ಅಡುಗೆ ಮನೆ, ಮಕ್ಕಳನ್ನು ನೋಡಿಕೊಂಡು, ಮನೆಯ ಕಸ ಮುಸುರೆ ಎತ್ತಲು ಸೀಮಿತ ಎನಿಸಿರಬಹುದು ಎಂದರು.
ಸಮಾಜದಲ್ಲಿ ಶೇ.50 ಮಹಿಳೆಯರಿದ್ದು, ನಾವೂ ದೇಶವನ್ನು ಮುನ್ನಡೆಸುತ್ತಾ ಬಂದಿದ್ದೇವೆ. ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬುದನ್ನು ಇಂದಿರಾಗಾಂಧಿ ತೋರಿಸಿದ್ದಾರೆ. ಜಯಲಲಿತಾ, ಶೀಲಾ ದೀಕ್ಷಿತ್, ಮಾಯಾವತಿ ಅವರು ರಾಜ್ಯ ಆಳಲಿಲ್ವಾ. ಬಿಜೆಪಿಯ ನಿರ್ಮಲಾ ಸೀತಾರಾಮನ್ ಹೆಣ್ಣು ಮಗಳಲ್ವಾ. ಮೋದಿ ಸರ್ಕಾರದಲ್ಲಿ ಹಿಂದಿನ ಅವಧಿಯಲ್ಲಿ ರಕ್ಷಣಾ ಇಲಾಖೆ, ಈಗ ಹಣಕಾಸು ಖಾತೆಯ ಜವಾಬ್ದಾರಿ ಕೊಟ್ಟಿಲ್ಲವೇ.
ನಿಮ್ಮದೇ ಪಕ್ಷದಲ್ಲಿ ಹೆಣ್ಣು ಮಗಳಿಗೆ ಅಧಿಕಾರ ಕೊಟ್ಟು ಆಕೆಯನ್ನು ಅಪಮಾನಿಸುತ್ತಿದ್ದೀರಾ. ಬಿಜೆಪಿಯಲ್ಲಿ ಹೆಣ್ಣು ಮಕ್ಕಳು ಶಾಸಕರು, ಮಂತ್ರಿ ಆಗಿರಲಿಲ್ಲವೇ? ಮಂಡ್ಯದ ಸ್ವಾಭಿಮಾನಿ ಜನ ಹೆಣ್ಣು ಮಗಳು ಸುಮಲತಾ ಅವರ ಕೈ ಹಿಡಿಯಲಿಲ್ಲವೇ ಎಂದ ಅವರು, ಮೋದಿ ಅವರ ಬೇಟಿ ಬಚಾವೋ-ಬೇಟಿ ಪಡಾವೋ ಘೋಷಣೆಗೆ ನಿಮ್ಮ ಹೇಳಿಕೆ ಅಪಮಾನ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದರು. ಸಂವಿಧಾನ, ಮಹಿಳಾ ವಿರೋಧಿ ಬೇಜವಾಬ್ದಾರಿ ಹೇಳಿಕೆಯನ್ನು ಎಂಟಿಬಿ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಜನ ತೀರ್ಪು ಕೊಡ್ತಾರೆ: ಉಪ ಚುನಾವಣೆಯಲ್ಲಿ ಅನರ್ಹರು ಬೇಕಾ. ಸ್ವಾಭಿಮಾನಿಗಳು ಬೇಕಾ ಎಂಬುದನ್ನು ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಅನರ್ಹತೆ, ಜನತಾ ನ್ಯಾಯಾಲಯ ಎತ್ತಿಹಿಡಿಯುತ್ತೆ ಎಂಬ ವಿಶ್ವಾಸವಿದೆ ಎಂದರು. ಆಡಳಿತ ಪಕ್ಷದವರು ಅಧಿಕಾರಿ ವರ್ಗವನ್ನು ಕೈಗೊಂಬೆ ಮಾಡಿಕೊಂಡು ಉಪ ಚುನಾವಣೆ ನಡೆಸುತ್ತಿದ್ದಾರೆ. ಇಷ್ಟು ವರ್ಷದಿಂದ ರಾಜಕೀಯದಲ್ಲಿರುವ ಎಚ್.ವಿಶ್ವನಾಥ್, ಉಪ ಚುನಾವಣೆ ವೇಳೆ ಹುಣಸೂರನ್ನು ಹೊಸ ಜಿಲ್ಲೆ ಮಾಡುವ ಬಗ್ಗೆ ಮಾತನಾಡುತ್ತಾರೆ.
ಒಂದೂವರೆ ವರ್ಷ ಶಾಸಕರಾಗಿ ಕ್ಷೇತ್ರದತ್ತ ತಿರುಗಿ ನೋಡದವರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಅವರ ಹೇಳಿಕೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ, ನಗರ ಉಪಾಧ್ಯಕ್ಷೆ ಸುಜಾತಾರಾವ್, ರಾಣಿ ಸುದ್ದಿಗೋಷ್ಠಿಯಲ್ಲಿದ್ದರು.