ನವದೆಹಲಿ: ನಾವು ಯಾವಾಗಲೂ ದೀರ್ಘ ಪ್ರಯಾಣಕ್ಕಾಗಿ ರೈಲನ್ನೇ ಹೆಚ್ಚು ಇಷ್ಟಪಡುತ್ತೇವೆ. ಅದರ ಜೊತೆಗೆ ರೈಲು ಪ್ರಯಾಣದಲ್ಲಿ ಅತೀ ರೋಮಾಂಚನಾಕಾರಿ ಭಾಗವೆಂದರೆ ತಿನ್ನಲು ಸಿಗುವ ಆಯಾ ಪ್ರದೇಶದ ತಿಂಡಿ, ತಿನಿಸುಗಳು. ಆದರೆ ಇತ್ತೀಚೆಗೆ ಐಆರ್ ಸಿಟಿಸಿಯ ಕಳಪೆ ಗುಣಮಟ್ಟದ ಆಹಾರದಿಂದಾಗಿ ಮನೆಯಿಂದಲೂ ತಿಂಡಿ, ಊಟವನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಭಾರತೀಯ ರೈಲ್ವೆಯಲ್ಲಿ ನೀಡಿರುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರು ಟ್ವೀಟರ್ ನಲ್ಲಿ ಶೇರ್ ಮಾಡಿರುವುದು ವೈರಲ್ ಆಗಿದೆ.
ಇದನ್ನೂ ಓದಿ:ಬಿಲಿಯನ್ ಡಾಲರ್ ಟ್ವಿಟರ್ ಸಂಸ್ಥೆಗೆ ಈ ನಾಯಿಯೇ ಸಿಇಒ.! : ಎಲಾನ್ ಮಸ್ಕ್ ಟ್ವೀಟ್ ವೈರಲ್
ಇತ್ತೀಚೆಗೆ ಐಆರ್ ಸಿಟಿಸಿಯಲ್ಲಿ ಪ್ರಯಾಣಿಸಿದ್ದ ಭೂಮಿಕಾ ಎಂಬವರು, ಟ್ವೀಟರ್ ನಲ್ಲಿ ಅರ್ಧ ತಿಂದ ದಾಲ್, ಸಬ್ಜಿ, ರೊಟ್ಟಿ ಮತ್ತು ಅನ್ನದ ಫೋಟೋವನ್ನು ಶೇರ್ ಮಾಡಿದ್ದು, “ಐಆರ್ ಸಿಟಿಸಿ ಅಧಿಕಾರಿಗಳೇ ನೀವು ಎಂದಾದರೂ ನಿಮ್ಮ ರೈಲ್ವೆ ಆಹಾರದ ರುಚಿ ನೋಡಿದ್ದೀರಾ? ನಿಮ್ಮ ಹೆಂಡತಿ, ಮಕ್ಕಳಿಗೆ ಇಂತಹ ಕೆಟ್ಟ ಗುಣಮಟ್ಟದ ಆಹಾರ ನೀಡುತ್ತೀರಾ? ಇದು ಕೈದಿಗಳಿಗೆ ನೀಡುವ ಆಹಾರದಂತಿದೆ. ದಿನದಿಂದ ದಿನಕ್ಕೆ ಟಿಕೆಟ್ ಬೆಲೆ ಹೆಚ್ಚಿಸುತ್ತೀರಿ, ಆದರೆ ನಿಮ್ಮ ಪ್ರಯಾಣಿಕರಿಗೆ ಮಾತ್ರ ಕಳಪೆ ಗುಣಮಟ್ಟದ ಊಟ ನೀಡುತ್ತೀರಿ” ಎಂದು ದೂರಿದ್ದಾರೆ.
ಈ ಪೋಸ್ಟ್ ಯಾವುದೇ ಐಆರ್ ಸಿಟಿಸಿ ಸಿಬಂದಿಯನ್ನು ಗುರಿಯಾಗಿರಿಸಿ ಬರೆದಿಲ್ಲ, ಇದು ಆಹಾರ ತಯಾರಿಸುವ ಸಿಬ್ಬಂದಿಯ ತಪ್ಪಲ್ಲ. ಅವರು ನಮಗೆ ಐಆರ್ ಸಿಟಿಸಿ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಆಹಾರ ಸಿಬ್ಬಂದಿ ನಮ್ಮ ಹಣವನ್ನು ಮರುಪಾವತಿಸಲು ಮುಂದಾಗಿದ್ದರು, ಆದರೆ ಅದು ಅವರ ತಪ್ಪಲ್ಲ ಎಂದು ಭೂಮಿಕಾ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಈ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಇಂತಹ ಸಂದರ್ಭಗಳನ್ನು ತಪ್ಪಿಸಲು ಮನೆಯಿಂದ ಊಟ ಕೊಂಡೊಯ್ಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಟ್ವೀಟರ್ ಬಳಕೆದಾರ, ರೈಲ್ವೆ ಆಹಾರ ಸೇವೆ ತುಂಬಾ ಕೆಟ್ಟದ್ದಾಗಿದೆ. ವೆಬ್ ಸೈಟ್ ತುಂಬಾ ಕಳಪೆ ಮಟ್ಟದ್ದಾಗಿದೆ. ಶುಲ್ಕ ದುಬಾರಿಯಾದರೂ ಕೂಡಾ ಗುಣಮಟ್ಟ ಮಾತ್ರ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.