ದೆಹಲಿ: ಮೆಟ್ರೋ ರೈಲಿಗೆ ಸೀರೆ ಸಿಲುಕಿದ ಪರಿಣಾಮ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಶನಿವಾರ (ಡಿ.16 ರಂದು) ಮೃತಪಟ್ಟಿದ್ದಾರೆ.
ಘಟನೆ ವಿವರ: ಡಿ.14 ರಂದು ದೆಹಲಿಯ ಇಂದರ್ಲೋಕ್ ನಿಲ್ದಾಣದಲ್ಲಿ ಮೆಟ್ರೋ ರೈಲಿನಲ್ಲಿ 35 ವರ್ಷದ ಮಹಿಳೆ ಪ್ರಯಾಣ ಬೆಳೆಸಿದ್ದರು. ಪಶ್ಚಿಮ ದೆಹಲಿಯ ನಂಗ್ಲೋಯ್ನಿಂದ ಮೋಹನ್ ನಗರಕ್ಕೆ ಹೋಗುವಾಗ ರೈಲಿನ ಬಾಗಿಲಿನ ನಡುವೆ ಮಹಿಳೆಯ ಸೀರೆ ಸಿಲುಕಿಕೊಂಡಿದೆ. ಪರಿಣಾಮ ಮಹಿಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಹಿಳೆಯ ಪತಿ ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರು ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ ಎಂದು ಮಹಿಳೆಯ ಸಂಬಂಧಿ ವಿಕ್ಕಿ ʼಪಿಟಿಐʼಗೆ ತಿಳಿಸಿದ್ದಾರೆ.
ಈ ಘಟನೆಯ ಕುರಿತು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್ಎಸ್) ತನಿಖೆ ನಡೆಸಲಿದ್ದಾರೆ ಎಂದು ದೆಹಲಿ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಳ್ ಹೇಳಿದ್ದಾರೆ.
ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಅಗತ್ಯವಿದ್ದರೆ, ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.