ಕಾಬೂಲ್: ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜೆಕ್ರುಲ್ಲಾ ಹಾಶಮಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಉಗ್ರರಿಂದ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಯ ಮುಂದುವರೆದಿದೆ. ಇದೀಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸಯ್ಯದ್ ಜೆಕ್ರುಲ್ಲಾ ಹಾಶಮಿ ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ. ಮಹತ್ವದ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳಿಗೆ ವಹಿಸಿದರೆ ಅವರ ಕುತ್ತಿಗೆ ಮೇಲೆ ಹೆಚ್ಚಿನ ಭಾರವನ್ನು ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕಷ್ಟೇ ಎಂದು ಹೇಳಿದ್ದಾರೆ.
ಅಫ್ಘಾನ್ ಸರ್ಕಾರದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಮಹಿಳಾ ಪ್ರತಿಭಟನಾಕಾರರು ಅಫ್ಘಾನಿಸ್ತಾನದಲ್ಲಿ ಎಲ್ಲ ಮಹಿಳೆಯರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ಹೊಸ ಮಧ್ಯಂತರ ಸರ್ಕಾರವನ್ನು ವಿರೋಧಿಸುತ್ತಿರುವ ಅಫ್ಘಾನ್ ಮಹಿಳೆಯರು ತಾಲಿಬಾನ್‌ನಿಂದ ದೂರ ಓಡಿಸಲ್ಪಟ್ಟರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತಾಲಿಬಾನ್ ಭಿನ್ನಮತವನ್ನು ಹತ್ತಿಕ್ಕುವಲ್ಲಿ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಚಾಟಿ ಮತ್ತು ಲಾಠಿಗಳನ್ನು ಪ್ರಯೋಗ ಮಾಡಲಾಗಿದೆ ಎಂದು ವರಿಯಾಗಿದೆ.
1996 ರಿಂದ 2001ರವರೆಗೆ ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿರಲಿಲ್ಲ. ಯುವತಿಯರು ಶಾಲೆಗೆ ಹೋಗಲು ಸಾಧ್ಯವಿರಲಿಲ್ಲ. ಮಹಿಳೆಯರು ತಮ್ಮ ಮನೆಯಿಂದ ಹೊರಗೆ ಹೋಗಲು ಬಯಸಿದರೆ ಮುಖವನ್ನು ಮುಚ್ಚಿಕೊಳ್ಳಬೇಕಾಗಿತ್ತು. ಈಗಾಗಲೇ ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರದ ಹುಮ್ಮಸ್ಸಿನಲ್ಲಿರುವ ತಾಲಿಬಾನ್ ನಾಯಕರು ಆಳ್ವಿಕೆ ನಡೆಸಲು ಸಜ್ಜಾಗಿದ್ದಾರೆ. ಶರಿಯಾ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದರಿಂದ ಭೀತಿಯಲ್ಲಿರುವ ಅಫ್ಘಾನ್ ಪ್ರಜೆಗಳು ದೇಶಬಿಟ್ಟು ತೆರಳಲು ಪ್ರಯತ್ನಿಸುತ್ತಿದ್ದಾರೆ.