ಬೆಂಗಳೂರು: ಬಿಎಂಟಿಸಿ ನೀಡುತ್ತಿರುವ ನೃಪತುಂಗ ಪ್ರಶಸ್ತಿ ಮಾದರಿಯಲ್ಲೇ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ಕೋಟಿ ರೂ. ಅನುದಾನ ನೀಡುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ “ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಒಂದು ಉತ್ಕೃಷ್ಟ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆಯ ಎಲ್ಲ ವಿಭಾಗಗಳನ್ನು ಒಟ್ಟಾಗಿ ಸೇರಿಸಿ ಎರಡು ಕೋಟಿ ಅನುದಾನ ನೀಡುವ ಮೂಲಕ ಮುಂದಿನ ವರ್ಷವೇ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ದಲಿತರ ಹಾಗೂ ಶೋಷಿತರು, ಮುಖದಲ್ಲಿ ನಗು ಹೊಂದಿದ್ದರೂ, ಮನದೊಳಗೆ ಅಪಾರ ನೋವು ಹೊಂದಿರುತ್ತಾರೆ. ಇಂತಹ ನೋವುಗಳಿಗೆ ದನಿಯಾಗುವ ಕೆಲಸಕ್ಕೆ ಸಾಹಿತಿಗಳು ಮುಂದಾಗಬೇಕು. ಪ್ರಶಸ್ತಿಗಳು ಸಂತಸದ ಜತೆಗೆ ಜವಾಬ್ದಾರಿ ಹೆಚ್ಚಿಸುತ್ತವೆ. ಆ ನಿಟ್ಟಿನಲ್ಲಿ ಇನ್ನಷ್ಟು ಜನಪರ ಸಾಹಿತ್ಯ ರಚನೆಗೆ ಮುಂದಾಗುತ್ತೇನೆ. ಈಗಾಗಲೇ ಊರುಕೇರಿ ಭಾಗ-3 ಸಿದ್ಧವಾಗಿದ್ದು, ಇದೇ ಸೆ.9ರಂದು ಬಿಡುಗಡೆಯಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಯುವ ಸಾಹಿತಿಗಳಾದ ಎಂ.ಎನ್.ನಂದೀಶ್, ಬಿ.ಇ.ಶಿವರಾಜ, ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್.ಗುಡಗುಡಿ, ಗಣಪತಿ ಗೋ.ಚಲವಾದಿಗೆ ಅವರಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿಮರ್ಶಕ ಎಸ್.ಆರ್.ವಿಜಯ್ ಶಂಕರ್, ಕಸಾಪ ಅಧ್ಯಕ್ಷ ಮನು ಬಳಿಗಾರ್, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಎನ್.ಪ್ರಕಾಶ್ ಗೌಡ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಉಪಸ್ಥಿತರಿದ್ದರು.
ಕನ್ನಡಿಗರೇ ಅಲ್ಪಸಂಖ್ಯಾತರು: ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡಿಗರೇ ಆದ ಅನೇಕರು ತಮ್ಮ ಪ್ರತಿಷ್ಠೆಗಾಗಿ ಇಂಗ್ಲಿಷ್ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರು ಆಂಗ್ಲ ಮತ್ತು ಕನ್ನಡವನ್ನು ಬೆರೆಸಿ ಕಲಬೆರಕೆ ಕನ್ನಡ ಮಾತನಾಡುತ್ತಿದ್ದಾರೆ. ಇನ್ನಾದರೂ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಹೆಚ್ಚು ಕನ್ನಡ ಬಳಸಬೇಕು ಹಾಗೂ ಇತರರಿಗೂ ಕನ್ನಡ ಕಲಿಸಿ ಬಳಸುವಂತೆ ಪ್ರೋತ್ಸಾಹಿಸಬೇಕು ಎಂದು ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.