ಮೈಸೂರು: ಹಿಂದೂ ಧರ್ಮ ಇಲ್ಲದಿದ್ದರೆ ಭಾರತ ಏನಾಗುತ್ತಿತ್ತು ಎಂಬುದನ್ನು ಊಹಿಸಿ ಕೊಳ್ಳಲೂ ಸಾಧ್ಯವಿಲ್ಲ ಎಂದು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿ ಗಳವರ ಜಾತ್ರಾ ಮಹೋತ್ಸವದಲ್ಲಿ ಮಂಗಳ ವಾರ ಭಜನಾ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮದ ಬಗ್ಗೆ ಅನೇಕರು ಟೀಕೆ ಟಿಪ್ಪಣಿ ಮಾಡಬಹುದು. ಆದರೆ, ಹಿಂದೂ ಧರ್ಮ ಇಲ್ಲದಿದ್ದರೆ ಭಾರತದ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಪ್ರ
ತಿ ವರ್ಷ ಜಾತ್ರಾ ಮಹೋತ್ಸವದ ಮೂಲಕ ಸುತ್ತೂರು ಶ್ರೀಗಳು ಜನ ಸಮು ದಾಯಕ್ಕೆ ತನ್ನ ಇತಿಹಾಸ, ಪರಂಪರೆಯನ್ನು ತಿಳಿಸುತ್ತಾ ಒಳ್ಳೆಯವರಾಗಿ ಎಂದು ಅರಿವು ಮೂಡಿಸುತ್ತಾ ಬಂದಿದ್ದಾರೆ. ಜನರನ್ನು ಪ್ರಜ್ಞಾವಂತರನ್ನಾಗಿಸುವ ನಿಟ್ಟಿನಲ್ಲಿ ಶ್ರೀಮಠದ ಕೊಡುಗೆ ಅಪಾರ. ಶ್ರೀಮಠದ ಬೆಳೆವಣಿಗೆಗೆ ಎಲ್ಲಾ ಸರ್ಕಾರಗಳೂ ಸಹಕಾರ ನೀಡುತ್ತಾ ಬಂದಿವೆ ಎಂದರು.
ಆಹಾರದಲ್ಲಿ ಭಾರತ ಸಮೃದ್ಧಿ: 60ರ ದಶಕದಲ್ಲಿ ಭಾರತದಲ್ಲಿ ಆಹಾರಕ್ಕೆ ಹಾಹಾಕಾರ ಇತ್ತು. ಆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆಲ್ಲಾ ಅಮೆರಿಕದ ಗೋಧಿ ನುಚ್ಚಿನ ಉಪ್ಪಿಟ್ಟು, ಹಾಲಿನ ಪುಡಿಯ ಹಾಲನ್ನು ಕೊಡಲಾಗುತ್ತಿತ್ತು. ದೇಶದ ಜನತೆಗೆ ಎರಡು ಹೊತ್ತಿನ ಊಟ ಕೂಡ ಸಿಗುತ್ತಿರಲಿಲ್ಲ. ಇಂದಿಗೂ ಅನೇಕ ಹಿರಿಯರು ಆ ಕಾಲದಲ್ಲಿ ಅಮೆರಿಕದಿಂದ ಕೆಂಪು ಜೋಳ ತಂದು ನಮ್ಮನ್ನು ಸಾಕಿದ್ದು ಇಂದಿರಾಗಾಂಧಿ ಎಂದು ನೆನಪಿಸಿಕೊಳ್ಳುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿದ್ದ ಭಾರತ ಕೇವಲ 20 ವರ್ಷಗಳಲ್ಲಿ, 80ರ ದಶಕದ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಆಹಾರ ಸ್ವಾವಲಂಬನೆ ಸಾಧಿಸಿತು. ಇವತ್ತು ಭಾರತ ಸಕ್ಕರೆ, ಅಕ್ಕಿ, ಹಣ್ಣು, ತರಕಾರಿಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸಮೃದ್ಧವಾಗಿದೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ಹೇಳುವಂತಾಗಿರುವುದು ದೇಶದ ಬಹುದೊಡ್ಡ ಸಾಧನೆ ಎಂದರು.
ಕೃಷಿ ಸಾಧನೆ: ಕೃಷಿ ಕ್ಷೇತ್ರದಲ್ಲಿ ಇಂತಹ ಮಹತ್ತರ ಸಾಧನೆಯಾದ ಬಳಿಕ ಇವತ್ತು ದೇಶದಲ್ಲಿ ಯಾರೊಬ್ಬರೂ ಎರಡು ಹೊತ್ತು ಊಟವಿಲ್ಲದೆ ಮಲಗುತ್ತಿಲ್ಲ. ಹಸಿವಿನಿಂದ ಯಾರು ಸಾಯುತ್ತಿಲ್ಲ. ಭಾರತದ ರೈತರು, ಕೃಷಿ ವಿಜ್ಞಾನಿಗಳು ಈ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಭೈರತಿ ಬಸವರಾಜು, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ವಾಸು, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ನಾಗಲಕ್ಷ್ಮೀ ಚೌಧರಿ ಉಪಸ್ಥಿತರಿದ್ದರು.
ಆನಂದಪುರಂನ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಸೊರಬ ತಾಲೂಕು ಜಡೆ ಶ್ರೀ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಮೈಸೂರು ಮಹಾ ನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಚಾಮರಾಜ ನಗರ ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಚಾಮರಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ, ಬೆಂಗಳೂರಿನ ಮುಸ್ಲಿಂ ಧರ್ಮಗುರು ಅಲ್ಲಾಜ್ ಬಾಬಾ ಉಪಸ್ಥಿತರಿದ್ದರು.