Advertisement

ಸೂಕ್ತ ನಿರ್ವಹಣೆಯಿಲ್ಲದೆ ರುದ್ರಭೂಮಿ ದುಸ್ಥಿತಿ

12:52 AM May 08, 2019 | Lakshmi GovindaRaj |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬರುವ ನಗರದ ಹಲವು ರುದ್ರಭೂಮಿಗಳು ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿ ಹೋಗಿವೆ. ಅದರಲ್ಲಿ ದೀಪಾಂಜಲಿ ನಗರ ವಾರ್ಡ್‌ನ ಆವಲಹಳ್ಳಿಯ ವಿನೋಭಾ ಕಾಲೋನಿಯಲ್ಲಿರುವ ಹರಿಜನ ರುದ್ರಭೂಮಿ ಸ್ಥಿತಿ ಕೂಡ ಇದಕ್ಕೆ ಹೊರತಲ್ಲ.

Advertisement

ರುದ್ರಭೂಮಿಯೊಳಗೆ ಗಿಡಗಂಟೆಗಳು ಬೆಳೆದು ನಿಂತಿದೆ. ಶವ ಸಂಸ್ಕಾರಕ್ಕೆ ಜನರು ಸ್ಮಶಾನದ ಒಳಗೆ ಹೆಜ್ಜೆಯಿರಿಸಲಾಗದ ದುಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆ ಹಾದು ಹೋಗುವ ಬದಿಯಲ್ಲೇ ರುದ್ರಭೂಮಿ ತಲೆ ಎತ್ತಿದಿದ್ದು, ಕೊಳಚೆ ನೀರು ಮಳೆ ಬಂದಾಗ ಸ್ಮಶಾನದೊಳಗೆ ಪ್ರವೇಶ ಮಾಡುವುದರಿಂದ ರುದ್ರಭೂಮಿಯಲ್ಲಿ ಮಲಿನತೆ ತಾಂಡವಾಡುತ್ತಿದೆ.

ನಿರ್ವಹಣೆಗೆ ಸಿಬ್ಬಂದಿ ಕೊರತೆ: ರುದ್ರಭೂಮಿ ನಿರ್ವಹಣೆಗಾಗಿ ಪಾಲಿಕೆ ವತಿಯಿಂದ ಕಟ್ಟಡ ಕಟ್ಟಲಾಗಿದೆ. ಆದರೆ, ಆ ಕಟ್ಟಡದೊಳಗೆ ಕಾರ್ಯ ನಿರ್ವಹಿಸಲು ಭದ್ರತಾ ಸಿಬ್ಬಂದಿಗಳೇ ಇಲ್ಲದಿರುವುದರಿಂದ ಬಾಗಿಲು, ಕಿಟಕಿಗಳು ಇಲ್ಲದೆ ಪಾಳು ಬಿದ್ದಿದೆ. ಕಟ್ಟಡ ಕೂಡ ದುರಸ್ಥಿಗೊಂಡಿದ್ದು ಹೀಗಾಗಿ, ಬೀದಿ ನಾಯಿಗಳ ದರ್ಬಾರು ಅಲ್ಲಿ ಶುರುವಾಗಿದೆ.

ಕೆಲವು ಸ್ಥಳೀಯರು ರಾತ್ರಿ ವೇಳೆ ಘನ ತಾಜ್ಯಗಳನ್ನು ಕಟ್ಟಡ ಸಮೀಪ ಹಾಕುತ್ತಿದ್ದು, ಇಡೀ ಕಟ್ಟಡ ದುರ್ನಾತದಿಂದ ಮುಳುಗಿ ಹೋಗಿದೆ. ಮಹಾಲಯ ಅಮವಾಸ್ಯೆಯ ದಿನದಂದು ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸಲು ಆ ಕಟ್ಟಡದೊಳಗೆ ಕಾಲಿಟ್ಟು ಹೋಗಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಷ ಜಂತುಗಳ ಭಯ: ರುದ್ರಭೂಮಿಯೊಳಗೆ ಪ್ರವೇಶ ಮಾಡಿದರೆ ಯಾವುದೇ ಒಂದು ಕಾಡಿನೊಳಗೆ ತೆರಳಿದಂತೆ ಭಾಸವಾಗುತ್ತಿದೆ. ಸೂಕ್ತವಾದ ನಿರ್ವಹಣೆಯಿಲ್ಲದೆ ಹಿನ್ನೆಲೆಯಲ್ಲಿ ಗಿಡಗಂಟೆಗಳು, ಸ್ಮಶಾನದ ಕಾಂಪೌಂಡ್‌ಗಳಿಗಿಂತಲೂ ಆಳೆತ್ತರ ಬೆಳೆದು ನಿಂತಿದ್ದು, ಹಾವು, ಚೇಳು ಸೇರಿದಂತೆ ಕೆಲವು ವಿಷ ಜಂತುಗಳು ಅದರೊಳಗೆ ಸೇರಿ ಕೊಂಡಿವೆ.

Advertisement

ಇತ್ತೀಚಿನ ದಿನಗಳಲ್ಲಿ ಬಿಸಿಲು ಅಧಿಕವಾಗಿರುವ ಹಿನ್ನೆಲೆಯಲ್ಲಿ ರುದ್ರಭೂಮಿಯ ಒಳಗಿರುವ ಹಾಳು, ಚೇಳುಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ನೆರೆ ಹೊರೆಯವರು ಅವುಗಳು ಎಲ್ಲಿ ನಮ್ಮ ಮನೆ ಸೇರುತ್ತವೆಯೋ ಎಂಬ ಭಯದಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದು ವಿನೋಭಾ ಕಾಲೋನಿಯ ನಿವಾಸಿ ಲಕ್ಷ್ಮಮ್ಮ ದೂರಿದರು.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಆವಲಹಳ್ಳಿಯ ವಿನೋಭಾ ಕಾಲೋನಿ ಕೆಲ ನಿವಾಸಿಗಳು, ಎಲ್ಲಾ ಋತುಗಳಲ್ಲೂ ಹಾವು, ಚೇಳುಗಳು ಸೇರಿದಂತೆ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿದ್ದು, ಭಯ ಕಾಡುತ್ತಿದೆ ಎಂದು ದೂರಿದರು. ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಒತ್ತುವರಿ ಆರೋಪ: ರುದ್ರಭೂಮಿಯ ಎರಡು ಕಡೆಗಳಲ್ಲಿ ಪ್ರವೇಶ ದ್ವಾರಗಳಿವೆ. ಭದ್ರತಾ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ ಪ್ರವೇಶ ದ್ವಾರದ ಕಾಂಪೌಂಡ್‌ ನಿರ್ವಹಣೆ ಇಲ್ಲದೆ ಉರುಳಿ ಬಿದ್ದಿದೆ. ಮತ್ತೂಂದು ಕಡೆಯಿರುವ ಪ್ರವೇಶ ದ್ವಾರದ ಗೇಟ್‌ಗೆ ಬೀಗ ಜಡಿಯಲಾಗಿದೆ.

ಜತೆಗೆ ಸ್ಥಳೀಯ ನಿವಾಸಿಗರು ಕೂಡ ರುದ್ರಭೂಮಿಯೊಳಗೆ ರಾತ್ರಿ ವೇಳೆ ಘನ ತಾಜ್ಯವನ್ನು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಡೀ ಸ್ಮಶಾನ ತಾಜ್ಯ ವಸ್ತುಗಳಿಂದಲೇ ತುಂಬಿ ಹೋಗಿದ್ದು, ದುರ್ವಾಸನೆ ಮೂಗಿಗೆ ನಾರುತ್ತಿದೆ. ಈ ಹಿಂದೆ ಸ್ಥಳೀಯರೆ ಸುಮಾರು 5 ಎಕರೆ ಭೂಮಿಯನ್ನು ರುದ್ರಭೂಮಿಗಾಗಿ ನೀಡಿದ್ದರು. ಆದರೆ, ಈಗಾಗಲೇ ಸ್ಮಶಾನದ ಜಾಗ 2 ಎಕರೆಗೆ ಸೀಮಿತವಾಗಿದ್ದು ಜಾಗ ಒತ್ತುವರಿಯಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಬೇರೆ ಪ್ರದೇಶದವರು ಈ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುತ್ತಾರೆ ಎಂದು ರುದ್ರಭೂಮಿ ಗೇಟ್‌ಗೆ ಸ್ಥಳಿಯರೇ ಬೀಗ ಹಾಕಿದ್ದಾರೆ. ರುದ್ರಭೂಮಿ ನಿರ್ವಹಣೆ ಸಂಬಂಧ ಹಲವು ಬಾರಿ ಪ್ರಯತ್ನ ನಡೆಸಿದರೂ ಸ್ಥಳೀಯರು ಸಹಕರಿಸುತ್ತಿಲ್ಲ.
-ಅನುಪಮಾ ಧರ್ಮಪಾಲ್‌, ದೀಪಾಂಜಲಿ ನಗರ ಪಾಲಿಕೆ ಸದಸ್ಯೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next