Advertisement

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗೆ ಹಾನಿ ಸಂಭವ

10:29 PM Jun 12, 2020 | Sriram |

ಕೋಟ: ಮುಂಗಾರು ಮಳೆ ಆರಂಭ ವಾದರೂ ಚರಂಡಿ ನಿರ್ವಹಣೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೋಟ-ಗೋಳಿಯಂಗಡಿ, ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯ ಹಲವು ಕಡೆಗಳಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿದು ಹಾನಿಯಾಗುತ್ತಿದೆ. ಆದ್ದರಿಂದ ಆದಷ್ಟು ಶೀಘ್ರ ರಸ್ತೆಯ ನಿರ್ವಹಣೆಯ ಕುರಿತು ಪಿಡಬ್ಲ್ಯುಡಿ ಇಲಾಖೆ ಗಮನಹರಿಸಬೇಕಿದೆ.

Advertisement

ಪ್ರತಿ ವರ್ಷ ಸಮಸ್ಯೆ
ಈ ಜಿಲ್ಲಾ ಮುಖ್ಯ ರಸ್ತೆಯ ಹಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಪ್ರತೀ ವರ್ಷ ಸಮಸ್ಯೆ ಮರುಕಳಿಸುತ್ತಿದೆ. ಇಲ್ಲಿನ ಸಾಹೇಬ್ರಕಟ್ಟೆ ಮೆಸ್ಕಾಂ ಕಚೇರಿ ಎದುರು, ವಡ್ಡರ್ಸೆ, ಬನ್ನಾಡಿ, ಯಡ್ತಾಡಿ, ಬಾರ್ಕೂರು, ಶಿರಿಯಾರ, ಬಿಲ್ಲಾಡಿ, ಶಿರೂರುಮೂಕೈ ಮುಂತಾದ ಸ್ಥಳಗಳು ಖಾಯಂ ಸಮಸ್ಯೆಯ ತಾಣಗಳಾಗಿವೆ.

ಹೂಳೆತ್ತಿ ಸ್ವಚ್ಛಗೊಳಿಸಿದರೆ ಉತ್ತಮ
ಪ್ರತಿ ಬಾರಿ ಮಳೆಗಾಲದಲ್ಲಿ ಕೇವಲ ಚರಂಡಿಯ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವುದು ಹೊರತುಪಡಿಸಿದರೆ ಹೂಳೆತ್ತುವ ಕೆಲಸ ಆಗಿಲ್ಲ. ಹೀಗಾಗಿ ತ್ಯಾಜ್ಯ ಗಳಿಂದ ಚರಂಡಿ ಮುಚ್ಚಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಆದ್ದರಿಂದ ಹೂಳೆತ್ತಿ ಚರಂಡಿ ಸ್ವಚ್ಛಗೊಳಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

200 ಮೀಟರ್‌ನಷ್ಟು ಸ್ವಚ್ಛ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಗೆ ಬರುವ ಕೋಟ ಮೂಕೈಯಿಂದ ಬೆಟ್ಲಕ್ಕಿ ಹಡೋಲು ತನಕ ಸುಮಾರು 200ಮೀನಷ್ಟು ದೂರ ರಸ್ತೆಯ ಎಡ ಭಾಗದ ಚರಂಡಿಯನ್ನು ಪಟ್ಟಣ ಪಂಚಾಯತ್‌ ವತಿಯಿಂದ ಸ್ವಚ್ಛಗೊಳಿಸಲಾಗಿದೆ. ಆದರೆ ಇಲ್ಲಿ ಅದನ್ನು ಹೊರತುಪಡಿಸಿ ಎರಡು ಕಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರಿನ ಹರಿವಿಗೆ ಸಮಸ್ಯೆ ಇದೆ.

ತ್ಯಾಜ್ಯ ವಿಲೇವಾರಿಗೆ ಕ್ರಮ ಅಗತ್ಯ
ಕೋಟದ ಬೆಟ್ಲಕ್ಕಿ ಹಡೋಲಿನ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಹೀಗಾಗಿ ಮಳೆ ನೀರಿನ ಜತೆ ತ್ಯಾಜ್ಯದ ನೀರು ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ಮಾರ್ಪಡುವ ಸಾಧ್ಯತೆ ಇದೆ. ಆದ್ದರಿಂದ ಈ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿಗೊಳಿಸಿ ಸ್ವಚ್ಛಗೊಳಿಸುವ
ಅಗತ್ಯವಿದೆ.

Advertisement

ಕಾಮಗಾರಿಗೆ ಸೂಚನೆ
ಕೋಟ-ಗೋಳಿಯಂಗಡಿ ಹಾಗೂ ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ನೀರು ನಿಲ್ಲುವ ಕುರಿತು ಸ್ಥಳೀಯರು ಈಗಾಗಲೇ ದೂರು ನೀಡಿದ್ದಾರೆ.ಇದರ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳುವಂತೆ ಆ ಭಾಗದ ಎಂಜಿನಿಯರ್‌ಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
-ಜಗದೀಶ್‌ ಭಟ್‌, ಎ.ಇ.ಇ.ಪಿ.ಡಬ್ಲ್ಯು.ಡಿ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next