Advertisement

ನಾಳೆಯಿಂದಲೇ ಕಡಲೇಕಾಯ್‌ ಪರಿಷೆ

11:31 AM Nov 10, 2017 | Team Udayavani |

ಬೆಂಗಳೂರು: ಬಸವನಗುಡಿಯ ದೊಡ್ಡ ಗಣೇಶ, ದೊಡ್ಡ ಬಸವನ ದೇವಾಲಯದ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಕಾರ್ತಿಕ ಸೋಮವಾರದಿಂದ ಮೂರು ದಿನ ನಡೆಯುವ ಕಡಲೆಕಾಯಿ ಪರಿಷೆಗೆ ಸುಮಾರು 600 ವರ್ಷಗಳ ಇತಿಹಾಸವವಿದೆ.

Advertisement

ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಹೊಸೂರು, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್‌, ಪಾವಗಡ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಪರಿಷೆಯಲ್ಲಿ ಭಾಗವಹಿಸುತ್ತಾರೆ.

ದೊಡ್ಡಬಸವನ ದೇವಸ್ಥಾನದ ನಂದಿಗೆ ವಿಶೇಷ ಪೂಜೆ ನಡೆಯುವುದು ಸೋಮವಾರವಾದರೂ ನ.11ರ ಶನಿವಾರದಿಂದಲೇ ಕಡಲೆಕಾಯಿ ಪರಿಷೆ ಆರಂಭವಾಗುತ್ತದೆ. ದೊಡ್ಡ ಬಸನಗುಡಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಈಗಾಗಲೇ ರಾಶಿ ರಾಶಿ ಕಡಲೆಕಾಯಿ ಮೂಡೆಗಳು ಬಂದಿಳಿದಿದ್ದು,

ಮೂರು ಬೀಜದ ಉದ್ದನೆಯ ಕಾಯಿ, ಎರಡು ಬೀಜದ ಗಿಡ್ಡ ಕಾಯಿಗಳು, ಕಡುಗುಲಾಬಿ ಬಣ್ಣದ ಬೀಜ ಹಾಗೂ ತಿಳಿ ಗುಲಾಬಿ ಬಣ್ಣದ ಬೀಜ ಹೀಗೆ ಎಲ್ಲಾ ಮಾದರಿಯ ಕಡಲೆಕಾಯಿ ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ.

ಪರಿಷೆಗಾಗಿ ಕಡಲೆಕಾಯಿ ತಂದಿರುವ ರೈತರು ಹಾಗೂ ವ್ಯಾಪಾರಿಗಳು ಈಗಾಗಲೇ ಮಾರಾಟ ಆರಂಭಿಸಿದ್ದಾರೆ. ಲೀಟರ್‌ ಮಾನದಂಡದಲ್ಲಿ ಕಡಲೆಕಾಯಿ ಗುಣಮಟ್ಟಕ್ಕೆ ತಕ್ಕಂತೆ 25ರೂ. ನಿಂದ 60 ರೂ.ವರೆಗೆ ದರ ನಿಗದಿ ಮಾಡಲಾಗಿದೆ.

Advertisement

ಹರಾಜು ತಂದ ಫ‌ಜೀತಿ: ಬೆಂಗಳೂರಿಗೆ ಪ್ರಸಿದ್ಧಿ ಪಡೆದಿರುವ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಅಪಾರ ಸಂಖ್ಯೆಯ ಜನ ಸೇರುತ್ತಾರೆ. ಕಡಲೆಕಾಯಿ ವ್ಯಾಪಾರಿಗಳು, ತಳ್ಳುಗಾಡಿಗಳ ಭರಾಟೆಯೂ ಜೋರಾಗಿರುತ್ತದೆ. ಸುಂಕ ವಸೂಲಿ ಮಾಡಲು ಕರೆಯಲಾಗಿದ್ದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ 9 ಲಕ್ಷಕ್ಕೆ ಬಿಡ್‌ ಕರೆದಿದ್ದ ವಿನಯ್‌ ಎಂಬ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ.

ಇದರಿಂದ ಫ‌ಜೀತಿಗೆ ಒಳಗಾಗಿರುವ ಮುಜರಾಯಿ ಇಲಾಖೆ ಅಧಿಕಾರಿಗಳು, ಮರು ಹರಾಜು ನಡೆಸಿದ್ದಾರೆ. ಕಳೆದ ವರ್ಷ 2.76 ಲಕ್ಷಕ್ಕೆ ಬಿಡ್‌ ಕೂಗಲಾಗಿತ್ತು. ಈ ವರ್ಷದ ಎರಡನೇ ಬಿಡ್‌ 2 ಲಕ್ಷಕ್ಕೆ ನಿಂತಿದೆ. ದೇವಸ್ಥಾನದ ಆವರಣದಲ್ಲಿ ಚೆಪ್ಪಲಿ ಸ್ಟಾಂಡ್‌, ಎಳನೀರು ಸ್ಟಾಂಡ್‌ ಮತ್ತು ಪೂಜಾ ಸಾಮಗ್ರಿ ಮಾರಾಟಕ್ಕೂ ವಾರ್ಷಿಕ ಗುತ್ತಿಗೆಯನ್ನು ಹರಾಜಿನ ಮೂಲಕವೇ ನೀಡಲಾಗುತ್ತದೆ.

4 ಲಕ್ಷ ಭಕ್ತರು ಸೇರುವ ನಿರೀಕ್ಷೆ: ಈ ಬಾರಿಯ ಕಡಲೆಕಾಯಿ ಪರಿಷೆಗೆ 4 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಲಾಗಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ನಂದಿಗೆ ವಿಶೇಷ ಪೂಜೆ ಆರಂಭವಾಗುತ್ತದೆ.

5 ಮೂಟೆ ಕಡಲೆಕಾಯಿ ಅಭಿಷೇಕ, ಕ್ಷೀರಾಭಿಷೇಕ, ಹೂವಿನ ಅಲಂಕಾರ, ಮಂಗಳಾರತಿಯ ನಂತರ ಪ್ರಸಾದ ವಿತರಣೆ ನಡೆಯುತ್ತದೆ. ಕೇಂದ್ರ ಮತ್ತು ರಾಜ್ಯದ ಸಚಿವರು, ಬಿಬಿಎಂಪಿ ಮಹಾಪೌರರು, ಉಪ ಮಹಾಪೌರರು, ಮಾಜಿ ಮೇಯರ್‌, ಸದಸ್ಯರು, ವಿವಿಧ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರೈತರ ನಂಬಿಕೆಯಂತೆ ಪ್ರತಿ ವರ್ಷ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ವಿವಿಧ ಮೂಲದಿಂದ ದೇವಸ್ಥಾನಕ್ಕೆ ವಾರ್ಷಿಕ 12 ಲಕ್ಷ ಆದಾಯ ಬರುತ್ತದೆ. ಅದನ್ನು ಸಿಬ್ಬಂದಿ ವೇತನಕ್ಕೆ ಸರಿ ಹೊಂದಿಸಲಾಗುತ್ತದೆ. ಕಡಲೆಕಾಯಿ ಪರಿಷೆಯಲ್ಲಿ ನಂದಿಗೆ ವಿಶೇಷ ಪೂಜೆ ನಡೆಯುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಎಸ್‌.ಸುನೀಲ್‌ ಕುಮಾರ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next