Advertisement

ನಮ್ಮ ಬಳಿಯೇ ಇರು ದೇವರೇ…

12:50 AM Jan 22, 2019 | Harsha Rao |

ತುಮಕೂರು: ನಮ್ಮ ಹತ್ತಿರವೇ ಇರು ದೇವರೇ, ನಾವು ನಿಮ್ಮನ್ನು ಬಿಟ್ಟು ಬಾಳಲಾರೆವು, ಕಣ್ಣೀರಿನ ಸಮಯದಲ್ಲಿ ತಾಯಿಯಾಗಿ¨ªೆ, ಕತ್ತಲೆಯ ಸಮಯದಲ್ಲಿ ಬೆಳಕಾಗಿದ್ದೆ, ನಮ್ಮ ಬಳಿಯೇ ಇರು ಓ ದೇವರೇ…
ಅರವತ್ತು ಅಂಧ ವಿದ್ಯಾರ್ಥಿಗಳು ಉತ್ಛ ಕಂಠದಲ್ಲಿ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಗೆ ಮೊರೆಯಿಟ್ಟ ಪರಿಯಿದು. 

Advertisement

ತಂದೆ, ತಾಯಿ ಪೋಷಕರಿಂದ ದೂರವಾಗಿದ್ದ ಅಂಧ ಮಕ್ಕಳಿಗೆ ಗುರುವಾಗಿ, ತಾಯಿಯಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ಕೇಳಿದೊಡನೆ ಅಂಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ತಾಯಿ ಕಳೆದುಕೊಂಡ ತಬ್ಬಲಿಗಳಂತೆ ಕಣ್ಣೀರು ಹಾಕಿ ಹಾಕಿ ಅಶ್ರುತರ್ಪಣ ಸಲ್ಲಿಸಿದರು.

ಶಾಲಾ ಆವರಣದಲ್ಲಿ ಸ್ವಾಮೀಜಿಗಳಿಗೆ ಇಷ್ಟವಾದ ಪಂಚಾಕ್ಷರಿ ಮಂತ್ರ ಪಠಿಸಿ ವಚನಗಳನ್ನು ಹೇಳಿದರು. ಶಾಲಾ ಶಿಕ್ಷಕರು ಅಂಧ ಮಕ್ಕಳಿಗೆ ದೇವರ ಬಳಿ ಸ್ವಾಮೀಜಿ ತೆರಳಿ¨ªಾರೆ ಎಂದು ಸಾಂತ್ವನ ಹೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. 

ಸಾಮಾನ್ಯರಂತೆ ಅಂಧ ಮಕ್ಕಳಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆಂಬ ಸ್ವಾಮೀಜಿ ಅವರ ಇಚ್ಛೆಯಂತೆ 1978 ರಲ್ಲಿ ಅಂಧ ಮಕ್ಕಳ ಶಾಲೆ ಆರಂಭಿಸಲಾಗಿತ್ತು. ಶಾಲೆಯ ಮೊದಲ ಬ್ಯಾಚ್‌ನಲ್ಲಿದ್ದ 8 ವಿದ್ಯಾರ್ಥಿಗಳು ಇಂದು ಉದ್ಯೋಗಸ್ಥರಾಗುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ನಾನು ದೈಹಿಕ ಶಿಕ್ಷಕನಾಗಿ ಇಲ್ಲಿಯೇ ವೃತ್ತಿ ಮುಂದುವರಿಸಿದ್ದು, ಸ್ವಾಮೀಜಿ ನನಗೆ ತಾಯಿಯಾಗಿ ಅನ್ನ ನೀಡಿದ್ದರು. ಜತೆಗೆ ಬದಕು ಕಟ್ಟಿಕೊಳ್ಳಲು ನೆರವಾದರು ಎಂದು ವೀರಭದ್ರಯ್ಯ ನೆನಪು ಹಂಚಿಕೊಂಡರು. 

ಸ್ವಾಮೀಜಿಗೆ ವಿಶೇಷ ಪ್ರೀತಿ: ಶಿವಕುಮಾರ ಸ್ವಾಮೀಜಿಗಳಿಗೆ ಅಂಧ ಶಾಲೆಯ ಮಕ್ಕಳೆಂದರೆ ವಿಶೇಷ ಪ್ರೀತಿಯಿತ್ತು. ಮಠದ ಆವರಣದಲ್ಲಿ ಪ್ರತಿದಿನ ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆ ವೇಳೆ ಅಂಧ ಮಕ್ಕಳನ್ನು ತಮ್ಮ ಸನಿಹವೇ ಕೂರಿಸಿಕೊಳ್ಳುತ್ತಿದ್ದರು. ಸ್ವಾಮೀಜಿಗಳಿಗೆ ಹಳೇಮಠ ಹಾಗೂ ಅಂಧ ವಿದ್ಯಾರ್ಥಿಗಳ ಶಾಲೆ ಎಂದರೆ ಹೆಚ್ಚು ಆಪ್ತ. ತಮಗೆ ಮಕ್ಕಳ ಜತೆ ಬೆರೆಯಬೇಕು ಎನಿಸಿದಾಗೆಲ್ಲಾ ಶಾಲೆಗೆ ಬಂದು ಮಕ್ಕಳ ಹಾಡುಗಳನ್ನು ಆಲಿಸುತ್ತಿದ್ದರು ಎಂದು ಶಿಕ್ಷಕಿ ಭಾಗ್ಯ ಕಂಬನಿ ಮಿಡಿದರು. 

Advertisement

ಹಾಡು ಹೇಳಿದ ಬಳಿಕ ತುಂಬಾ ಚೆನ್ನಾಗಿ ಹಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮಕ್ಕಳನ್ನು ಹುರಿದುಂಬಿಸುತ್ತಿದ್ದರು. ಆ ಮೂಲಕ ವಿಶೇಷ ಚೇತನ ಮಕ್ಕಳೊಂದಿಗೆ ಸ್ವಾಮೀಜಿ ಸಹ ಮಗುವಾಗಿ ಬಿಡುತ್ತಿದ್ದರು. 2016ರಲ್ಲಿ ಈ ಶಾಲೆಗೆ ಕೊನೆಯ ಭೇಟಿ ನೀಡಿದ್ದು, ಬಳಿಕ ಆರೋಗ್ಯ ಸಮಸ್ಯೆಯಿಂದ ಹೆಚ್ಚಾಗಿ ಆಗಮಿಸುತ್ತಿರಲಿಲ್ಲ. ಇತ್ತೀಚೆಗೆ ಶಾಲಾ ಆವರಣದಲ್ಲಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿ ಕೆಲಹೊತ್ತು ಮಕ್ಕಳನ್ನು ಕಣ್ತುಂಬಿಕೊಂಡಿದ್ದರು ಎಂದು ಸ್ಮರಿಸಿದರು. 

ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿರುವ ಸುದ್ದಿ ಮಕ್ಕಳಿಗೂ ಗೊತ್ತಾಗಿತ್ತು. ಹೀಗಾಗಿಯೇ ಇತ್ತೀಚೆಗೆ ಯಾವುದೇ ಆ್ಯಂಬುಲೆನ್ಸ್‌ ಸದ್ದು ಕೇಳಿದರೂ, ಸ್ವಾಮೀಜಿಗೆ ಆರೋಗ್ಯ ಚೆನ್ನಾಗಿಲ್ಲ ಅಲ್ವಾ ಅದಕ್ಕೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ ಎಂದು ಕೇಳುತ್ತಿದ್ದರು. ಜ.19ರಂದು ಮಕ್ಕಳೆಲ್ಲರೂ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು ಎಂದು ವಿವರಿಸಿದರು. 

– ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next