ನಿರ್ದೇಶಕ ಎಸ್.ನಾರಾಯಣ್ “ಮನಸು ಮಲ್ಲಿಗೆ’ ಚಿತ್ರದ ಬಳಿಕ ಯಾವ ಚಿತ್ರ ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಈಗ ಸ್ವತಃ ಎಸ್.ನಾರಾಯಣ್ ಅವರೇ ಉತ್ತರಿಸಿದ್ದಾರೆ. ಹೌದು, ನಾರಾಯಣ್ ಈಗ ಹೊಸ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ನಾರಾಯಣ್, ಹೊಸಬರ ಜತೆಯಲ್ಲೇ ಕೆಲಸ ಮಾಡಲು ಹೊರಟಿದ್ದಾರೆ.
ಅವರ ಹೊಸ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಆದರೆ, ಫೆಬ್ರವರಿ 5 ರ ಸೋಮವಾರ ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಅಂದು ಶೀರ್ಷಿಕೆಯ ಕುರಿತ ಸಣ್ಣ ಮಾಹಿತಿಯೊಂದನ್ನ ಹೇಳಲಿದ್ದಾರೆ. ಆ ಮಾಹಿತಿ ಆಧರಿಸಿ, ಒಳ್ಳೆಯ ಶೀರ್ಷಿಕೆ ಕೊಟ್ಟವರಿಗೆ ವಿಶೇಷ ಬಹುಮಾನವನ್ನೂ ಕೊಡಲಿದ್ದಾರೆ ನಾರಾಯಣ್. ಅಂದಹಾಗೆ, ಅವರ ಹೊಸ ಚಿತ್ರಕ್ಕೆ ಹೀರೋ ಯಾರು? ಅದು ಸಸ್ಪೆನ್ಸ್.
ನಾಯಕಿ ಯಾರು? ಅದೂ ಗೌಪ್ಯವಾಗಿದೆ. ಹಾಗಾದರೆ, ಹೊಸಬರ ಜತೆಯಲ್ಲೇ ನಾರಾಯಣ್ ಕೆಲಸ ಮಾಡುತ್ತಿದ್ದಾರೆಯೇ? ನಿಜ, ಆದರೆ, ಹೊಸಬರ ಜತೆಯಲ್ಲಿ ಹಳಬರು ಇರುತ್ತಾರೆ ಎಂಬುದು ನಾರಾಯಣ್ ಮಾತು. ಈ ಚಿತ್ರಕ್ಕೆ ಮೂವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಶೋಕ್ ಶೇಟ್, ಶ್ರೀನಿವಾಸ್ ದೊರೈ ಮತ್ತು ಫರೂಕ್ ಪಾಷಾ ನಿರ್ಮಾಪಕರು.
ಈ ಮೂವರಿಗೂ ಸಿನಿಮಾ ನಿರ್ಮಾಣ ಹೊಸದು. ಚಿತ್ರಕ್ಕೆ ಕಥೆ, ಚಿತರಕಥೆ, ಸಂಭಾಷಣೆ ಎಲ್ಲವೂ ನಾರಾಯಣ್ ಅವರದ್ದೇ. ಎಲ್ಲಾ ಸರಿ, ನಾರಾಯಣ್ ಹೊಸಬರನ್ನಿಟ್ಟುಕೊಂಡು ಯಾವ ಜಾನರ್ ಸಿನಿಮಾ ಮಾಡೋಕೆ ಹೊರಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಕಾಲೇಜ್ ಸ್ಟೋರಿ.
ಈ ಕಾಲೇಜ್ ಸ್ಟೋರಿ, ಬೆಂಗಳೂರು, ಸಕಲೇಶಪುರ, ಹಾಸನ, ಮಂಗಳೂರು, ವಿರಾಜ್‌ಪೇಟೆ ಸೇರಿದಂತೆ ಇತರೆಡೆ ಸಾಗಲಿದೆ. ಕಾಲೇಜ್ ಸ್ಟೋರಿ ಅಲ್ಲೆಲ್ಲಾ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ, ಸಿನಿಮಾದಲ್ಲೇ ಉತ್ತರ ಸಿಗಲಿದೆ ಎಂಬುದು ಅವರ ಮಾತು. ಈ ಚಿತ್ರಕ್ಕೆ ಕೌಶಿಕ್ ಕ್ಯಾಮೆರಾ ಹಿಡಿದರೆ, ಶಿವು ಯಾದವ್ ಸಂಕಲನವಿದೆ. ಸಂಗೀತ ನಿರ್ದೇಶಕರೂ ಇನ್ನು ಪಕ್ಕಾ ಆಗಿಲ್ಲ.