ಮೊದಲೆಲ್ಲ ಈ ಸೆಲ್ಫಿ ಎಂಬ ಕಾನ್ಸೆಪ್ಟ್ ಯಾವಾಗ ಶುರುವಾಯಿತೋ ಆಗ ನನಗದು ಅಷ್ಟೊಂದು ಹಿಡಿಸಲೇ ಇಲ್ಲ. ಅದೊಂಥರ ಹುಚ್ಚು ಕಲ್ಪನೆ ಎಂದು ಅಂದುಕೊಂಡಿದ್ದೆ. ನಾನು ಅದೆಷ್ಟೋ ಬಾರಿ ಅಂದುಕೊಂಡದ್ದೂ ಇದೆ, ಗೆಳತಿಯರ ಬಳಿ ಹೇಳಿಕೊಂಡಿದ್ದೂ ಇದೆ, “ಅದೇನದು ಸೆಲ್ಫಿ ಅಂತೆ, ನಮ್ಮ ಫೋಟೋ ನಾವೇ ತೆಗೆದುಕೊಳ್ಳೋದಂತೆ. ಹುಚ್ಚಲ್ವಾ ‘ ಅಂತ. ಆದರೆ ಕ್ರಮೇಣ ಸೆಲ್ಫಿ ಎಂದರೆ ನನಗೂ ಇಷ್ಟವಾಗಲೂ ಶುರುವಾಯಿತು. ನಾನು ಸೆಲ್ಫಿ ತೆಗೆಯೋಕೆ ಪ್ರಾರಂಭಿಸಿ ಬಿಟ್ಟೆ. ಶುರುವಾದದ್ದು ನಿಲ್ಲಿಸಲೇ ಇಲ್ಲ. ಏನಾದ್ರೂ ವಿಶೇಷವಾದದ್ದು ಕಂಡರೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳದೆ ಹಿಂದೆ ಬರುವವಳೇ ಅಲ್ಲ. ನಿಜ ಹೇಳಬೇಕಾದರೆ ನನಗೆ ಈ ಸೆಲ್ಫಿ ಹುಚ್ಚು ಹಿಡಿಸಿದ್ದೇ ನನ್ನಮ್ಮ ಎಂದರೆ ಯಾರೂ ನಂಬಲಿಕ್ಕಿಲ್ಲ.
ಇತ್ತೀಚಿಗಂತೂ ಈ ಸೆಲ್ಫಿ ಎಷ್ಟು ಸದ್ದು ಮಾಡುತ್ತಿದೆ ಎಂದರೆ ಯಾರಾದರೂ ಸೆಲೆಬ್ರಿಟಿಗಳು ಸೆಲ್ಫಿ ತೆಗೆದುಕೊಂಡರೆ ಆ ದಿನ ಅವರ ಸೆಲ್ಫಿಯೇ ಬ್ರೇಕಿಂಗ್ ನ್ಯೂಸ್, ಶಾಕಿಂಗ್ ನ್ಯೂಸ್ ಎಲ್ಲಾ ಆಗಿಬಿಡುತ್ತದೆ. ಇದೇ ಸೆಲ್ಫಿ ನಮ್ಮ ಪ್ರಧಾನಿ ಮೋದಿಯವರನ್ನೂ ಬಿಡಲಿಲ್ಲ ಎಂದರೆ ತಪ್ಪಾಗಲಾರದು. ಅವರು ಶುರುಮಾಡಿದ ಹೊಸ ಯೋಜನೆ “ಭೇಟಿ ಪಡಾವೊ, ಭೇಟಿ ಬಚಾವೊ’ ಅಡಿಯಲ್ಲಿ “ಸೆಲ್ಫಿ ವಿತ್ ಡಾಟರ್’ ಎಷ್ಟು ಸುದ್ದಿ ಆಗಿತ್ತು ಎಂದರೆ ಎಲ್ಲ ಸೆಲೆಬ್ರಿಟಿಗಳು, ಸ್ಟಾರ್‌ಗಳು, ರಾಜಕಾರಣಿಗಳೆಲ್ಲ ತಮ್ಮ ಮುದ್ದಿನ ಮಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಎಲ್ಲೆಂದರಲ್ಲಿ ಅಪ್ಲೋಡ್ ಮಾಡುತ್ತಿದ್ದರು.ಇನ್ನು ನಮ್ಮಂಥ ಕಾಲೇಜು ಹುಡುಗಿಯರಿಗೆ ಹೇಳುವುದೇ ಬೇಡ. ದಿನಾ ಯೂನಿಫಾರಂನಲ್ಲಿ ಹೋಗುತ್ತಿದ್ದ ನಾವು ಯಾವತ್ತಾದರೂ ಕಾರ್ಯಕ್ರಮಕ್ಕಾಗಿ ಹೊಸ ಬಟ್ಟೆ ಧರಿಸಿದರೆ ಅಂದು ನಮ್ಮ ಸೆಲ್ಫಿ ಕಾರ್ಯಕ್ರಮ ಶುರು ಎಂದೇ ಅರ್ಥ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ಉಪನ್ಯಾಸಕರು ಬಂದು, “ಸೆಲ್ಫಿ ತೆಗೆದದ್ದು ಸಾಕಮ್ಮ ಕ್ಲಾಸಿಗೆ ಬನ್ನಿ’ ಅಂತ ಎಚ್ಚರಿಸುವ ತನಕ.
ನಾನು ಕಾಲೇಜು ಮೂಲಕ ರಂಗನಾಟಕಗಳ ಪ್ರದರ್ಶನ ಕೊಡಲು ಮೈಸೂರು, ಬಿಜಾಪುರದಂಥ ಸ್ಥಳಗಳಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ನನ್ನಮ್ಮ ಹೇಳುತ್ತಿದ್ದದ್ದು ಒಂದೇ, “ಅಲ್ಲಿ ತುಂಬಾ ದೊಡ್ಡ ದೊಡ್ಡ ಕಲಾವಿದರು ಇರುತ್ತಾರೆ, ಅವರೊಟ್ಟಿಗೆಲ್ಲ ಒಂದು ಸೆಲ್ಫಿ ತೆಗೊ’ ಅಂತ. ಹಾಗೆ ಹೇಳಿದಾಗ ಯಾರು ಅವರ ಹಿಂದೆ ಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ ಅಂತ ಉದಾಸೀನ ತೋರಿಸ್ತಾ ಇದ್ದೆ. ಆದರೆ ಅಲ್ಲಿ ಹೋದ ಮೇಲೆ ದೊಡ್ಡ ದೊಡ್ಡ ಕಲಾವಿದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಾಗ ಆದ ಖುಶಿ ಅಷ್ಟಿಷ್ಟಲ್ಲ. ಅವರನ್ನು ಕಂಡಾಗ ಸೆಲ್ಫಿ ತೆಗೆಯದೆ ಹಿಂದೆ ಬರಲು ಮನಸೇ ಬರಲಿಲ್ಲ. ಈಗ ಅದನ್ನೆಲ್ಲ ಮತ್ತೆ ನೋಡುತ್ತಿದ್ದರೆ ಆ ನೆನಪುಗಳೆಲ್ಲ ಮತ್ತೆ ಮರುಕಳಿಸುತ್ತದೆ.
ನಮ್ಮೂರಲ್ಲಿ ಆಷಾಢ ಮಾಸ ಬಂತೆಂದರೆ ಊರಿನ ಯಕ್ಷಗಾನ ಕಲಾವಿದರು ಚಿಕ್ಕ ಮೇಳದ ಹೆಸರಲ್ಲಿ ಮನೆ ಮನೆಗೆ ಹೋಗಿ ಒಂದೈದು ನಿಮಿಷ ನೃತ್ಯ ಮಾಡಿತೋರಿಸುವುದು ಒಂದು ವಾಡಿಕೆ, ಕ್ರಮ. ಹಾಗೆಯೇ ಈ ವರ್ಷವೂ ನಮ್ಮ ಮನೆಗೆ ಯಕ್ಷಗಾನ ಕಲಾವಿದರು ಬಂದಾಗ ಅವರೊಂದಿಗೊಂದು ಸೆಲ್ಫಿ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆ. ಅಂತೆಯೇ ಅವರು ಇನ್ನೇನು ಹೊರಡಬೇಕು ಎಂದಾಗ ಓಡಿ ಹೋಗಿ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಾಗ ಆದ ಖುಷಿ ಅಷ್ಟಿಷ್ಟಲ್ಲ. ಅದನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟಾಗ ಎಲ್ಲರೂ ಅವರ ಮೂಗಿನ ಮೇಲೆ ಬೆರಳಿಟ್ಟಿದ್ದಂತೂ ನಿಜ. ಏಕೆಂದರೆ, ಅದೇ ಮೊದಲ ಬಾರಿಗೆ ನಾನು ಯಕ್ಷಗಾನ ಕಲಾವಿದರಿಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೆ.
ಈಗೀಗ ನನಗೂ ಅಷ್ಟೇ ಸೆಲ್ಫಿ ಹುಚ್ಚು ಜೋರಾಗಿ ಹಿಡಿದಂತೆ ಇದೆ. ಎಲ್ಲಿಯೇ ಹೋದರೂ ಅಲ್ಲಿ ಏನಾದರೂ ವಿಶೇಷ ಕಂಡುಬಂದರೆ ರಪಕ್ ಅಂತ ಫೋನ್ ತೆಗೆದು, ಟುಪಕ್ ಅಂತ ಸೆಲ್ಫಿ ತೆಗೆದರೆ ಮಾತ್ರ ನನಗೆ ಸಮಾಧಾನ. ಈ ಸೆಲ್ಫಿ ಎಂಬುದು ಬರೀ ನಮ್ಮ ಊರಿಗೋ ಅಥವಾ ನಮ್ಮ ದೇಶಕ್ಕೋ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ ಈ ಸೆಲ್ಫಿ ಸದ್ದು ಮಾಡುತ್ತಿದೆ. ಈ ಸೆಲ್ಫಿಯಿಂದಲೇ ಸುದ್ದಿ ಯಾಗುವವರೂ ಸಾಕಷ್ಟು ಮಂದಿ ಇದ್ದಾರೆ.
ಆದರೆ, ಇತ್ತೀಚೆಗೆ ಸೆಲ್ಫಿ ತೆಗೆಯಲು ಹೋಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವರು ಅವರ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಅತೀ ಹೆಚ್ಚು ಅಂತಲೂ ನಾನು ಇತ್ತೀಚಿಗೆ ಪತ್ರಿಕೆಯಲ್ಲಿ ಓದಿದ್ದೆ. ಕಡಲ ತೀರದಲ್ಲಿ ಅಪಾಯ ಎಂದು ಬೋರ್ಡ್ ಹಾಕಿದ್ದರೂ, ರೈಲು ಇನ್ನೇನು ಬರುವ ಸಮಯವಾಯಿತು ಎಂದರೂ, ಎತ್ತರದ ಬೆಟ್ಟದಿಂದ ಒಂದು ಹೆಜ್ಜೆ ಹಿಂದೆ ಇಟ್ಟರೂ ಸಾವು ಖಚಿತ ಎಂದು ಗೊತ್ತಿದ್ದರೂ, ಯಾವುದಾದರೂ ಮೃಗಾಲಯಕ್ಕೆ ಹೋದಾಗ ಅಪಾಯಕಾರಿಯಾದ ಪ್ರಾಣಿಗಳ ಬಳಿ ಹೋಗಬೇಡಿ ಎಂದು ಬರೆದಿದ್ದರೂ ಇಲ್ಲೆಲ್ಲ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಸಾಹಸ ಯಾಕೆ? ಎಲ್ಲಿ ಸೆಲ್ಫಿ ತೆಗೆಯಬೇಕೋ ಅಲ್ಲಿಯೇ ಸೆಲ್ಫಿ ತೆಗೆದುಕೊಂಡು ಸಂತೋಷಪಡಬೇಕೇ ಹೊರತು ತೆಗೆದ ಸೆಲ್ಫಿ ಜೀವಕ್ಕೆ ಸಂಚಕಾರ ತರಬಾರದು. ಪ್ರತಿಯೊಂದು ಫೊಟೋ ಕೂಡ ಸುಂದರವಾದ ನೆನಪುಗಳನ್ನು ಮರುಕಳಿಸುವಂತೆ ಇರಬೇಕೆ ಹೊರತು ದುಃಖೀಸುವಂತೆ ಇರಬಾರದು ಎಂಬುದು ನನ್ನ ಅನಿಸಿಕೆ. ಒಟ್ಟಿನಲ್ಲಿ ಸೆಲ್ಫಿ ತೆಗೆಯಿರಿ, ಎಂಜಾಯ್ ಮಾಡಿ.
– ಪಿನಾಕಿನಿ ಪಿ. ಶೆಟ್ಟಿ
ಪ್ರಥಮ ಎಂ. ಕಾಂ.
ಕೆನರಾ ಕಾಲೇಜು, ಮಂಗಳೂರು