ಹೊಸದಿಲ್ಲಿ: ಚೀನದ ಬಲವಂತಕ್ಕೆ ಮಣಿದು, ಕೋವಿಡ್ ವೈರಸ್ ಬಗ್ಗೆ ಎಲ್ಲರಿಗಿಂತ ಮೊದಲೇ ವಿಶ್ವವನ್ನು ಎಚ್ಚರಿಸುವ ಕರ್ತವ್ಯದಿಂದ ನುಣುಚಿಕೊಂಡ ಆರೋಪಕ್ಕೆ ಗುರಿಯಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿರುದ್ಧ ತನಿಖೆ ನಡೆಸುವ ಅವಕಾಶ ಭಾರತದ ಪಾಲಿಗೆ ಬಂದೊದಗಲಿದೆ.
ಆದರೆ, ಅದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಲಿದ್ದು, ಭಾರತವು ಅದನ್ನು ಅತ್ಯಂತ ನಾಜೂಕಿನಿಂದ ನಿಭಾಯಿಸಬೇಕಿದೆ.
ನುಂಗಲಾರದ ಬಿಸಿ ತುಪ್ಪ: ಕಾರ್ಯಕಾರಿಣಿಯ ಅಧ್ಯಕ್ಷನಾಗುವ ಭಾರತಕ್ಕೆ ಬರುವ ಮೊದಲ ಸವಾಲು – WHO ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸುವುದು. ಅಮೆರಿಕವು, ಈ ತನಿಖೆಗೆ ಒತ್ತಡ ಹೇರಿರುವುದರಿಂದ ತನಿಖೆ ಕೈಗೊಳ್ಳಲೇಬೇಕಿದೆ. ಆದರೆ, ನೆರೆ ರಾಷ್ಟ್ರವಾದ ಚೀನ ಬಗ್ಗೆ ತನಿಖೆ ನಡೆಸುವುದು ಭಾರತದ ಸ್ವಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಬಹುದು ಎಂಬ ಭೀತಿಯೂ ಇದೆ.
ಇತ್ತ ದರಿ, ಅತ್ತ ಪುಲಿ!: ಭಾರತ, ಚೀನ ನಡುವೆ ಏನೇ ಭಿನ್ನಾಭಿಪ್ರಾಯವಿರಲಿ, ಚೀನವನ್ನು ಭಾರತ ಕಡೆಗಣಿಸುವಂತಿಲ್ಲ. ಚೀನ ಇಡೀ ಏಷ್ಯಾದಲ್ಲೇ ಸೂಪರ್ ಪವರ್ ಆಗಿರುವ ದೇಶ. ಸಾಲದಕ್ಕೆ ಭಾರತದ ಆಂತರಿಕ ಮಾರುಕಟ್ಟೆ ಚೀನದ ಉತ್ಪಾದನಾ ರಂಗವನ್ನು ಬಹುತೇಕ ಅವಲಂಬಿಸಿದೆ.
ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಯೋಚಿಸುವುದಾದರೆ, ಚೀನ, ಪಾಕಿಸ್ಥಾನದ ಪರಮಾಪ್ತ ಮಿತ್ರ. ಹಾಗಾಗಿ, ಚೀನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತ ತೊಡೆ ತಟ್ಟಿದರೆ, ಇಲ್ಲಿ ಭಾರತದ ಗಡಿ ಭಾಗದಲ್ಲಿ, ಆಂತರಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವ ಭೀತಿಯೂ ಇದೆ.
ಚೀನ ವಿರುದ್ಧ ತನಿಖೆಯ ಬಗ್ಗೆ ಒತ್ತಡ ಹೇರುತ್ತಿರುವ ಅಮೆರಿಕ, ಸಹಕರಿಸುವಂತೆ ಭಾರತ ಮಾತ್ರವಲ್ಲದೆ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಕೋರಿದೆ. ಹಾಗಾಗಿ, ತನಿಖೆ ವಿಚಾರವನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.
ತನಿಖೆ ಜವಾಬ್ದಾರಿ ಹೇಗೆ?
ಸ್ವಿಟ್ಸರ್‌ಲಂಡ್‌ನ ಜಿನಿವಾದಲ್ಲಿ WHOನ ವಾರ್ಷಿಕ ಸಮ್ಮೇಳನ ಇದೇ 18ರಿಂದ ಶುರುವಾಗಲಿದೆ. ಆ ಸಭೆಯಲ್ಲಿ ವಿಶ್ವದ 34 ರಾಷ್ಟ್ರಗಳು ಭಾಗವಹಿಸಲಿವೆ. ಈ ಸಭೆಯಲ್ಲಿ ಭಾರತವನ್ನು WHO ಕಾರ್ಯಕಾರಣಿಯ ಸದಸ್ಯ ರಾಷ್ಟ್ರವನ್ನಾಗಿ ಆರಿಸಲಾಗುತ್ತದೆ.
ಈ ಸದಸ್ಯತ್ವದ ಅವಧಿ ಮೂರು ವರ್ಷವಾಗಿರುತ್ತದೆ. ಅದರ ಜೊತೆಯಲ್ಲೇ, ಭಾರತಕ್ಕೆ ಕಾರ್ಯಕಾರಣಿಯ ಅಧ್ಯಕ್ಷ ಪಟ್ಟವೂ ದೊರಕದೆ. ಹಾಗಾಗಿ, ಕಾರ್ಯಕಾರಣಿ ಸದಸ್ಯತ್ವ ಪಡೆದ ಮೊದಲ ವರ್ಷವೇ ಭಾರತ, ಅಧ್ಯಕ್ಷ ಸ್ಥಾನಕ್ಕೇರಲಿದ್ದು, ಅದರ ಮೇಲುಸ್ತುವಾರಿಯಲ್ಲೇ ಚೀನ ವಿರುದ್ಧ ತನಿಖೆ ನಡೆಯಬೇಕಿರುತ್ತದೆ.