ನವದೆಹಲಿ: ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್ ಪವರ್ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ನಡುವೆಯೇ ಚೀನಾ ಗಡಿಯಲ್ಲಿ ಭಾರತ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸುವ ಐತಿಹಾಸಿಕ ದಿಟ್ಟ ಕ್ರಮ ತೆಗೆದುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಲಾಂಚ್ ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು:ರಕ್ಷಿಸಿದ ಯುವಕ
ಬ್ಲೂಮ್ ಬರ್ಗ್ ವರದಿ ಪ್ರಕಾರ, ಕಳೆದ ಕೆಲವು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇನೆ ಮತ್ತು ಸ್ಕ್ವಾಡ್ರನ್ ಫೈಟರ್ ಜೆಟ್ ಗಳನ್ನು ಚೀನಾದೊಂದಿಗೆ ಹೊಂದಿಕೊಂಡಿರುವ ಮೂರು ಗಡಿ ಪ್ರದೇಶಗಳಲ್ಲಿ ರವಾನಿಸಿದೆ ಎಂದು ಹೇಳಿದೆ. ಇದರೊಂದಿಗೆ ಭಾರತ ಈಗ ಚೀನಾ ಗಡಿಯಲ್ಲಿ ಸುಮಾರು 2,00,000 ಸೈನಿಕರನ್ನು ನಿಯೋಜಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.40ಕ್ಕಿಂತ ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.
ಗಡಿ ವಿಚಾರದಲ್ಲಿ ಭಾರತ ಚೀನಾ ಮೇಲೆ ದೃಷ್ಟಿ ನೆಟ್ಟಿದ್ದರೂ ಕೂಡಾ ಭಾರತ ಮತ್ತು ಚೀನಾ ನಡುವೆ 1962ರಲ್ಲಿ ಯುದ್ಧವಾಗಿದ್ದರೂ ಸಹ, ಭಾರತ ಮುಖ್ಯವಾಗಿ ವಿವಾದಿತ ಕಾಶ್ಮೀರದ ಪ್ರದೇಶದ ವಿಷಯದಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚು ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ಹಿಂದೆ ಭಾರತ ಮತ್ತು ಪಾಕ್ ನಡುವೆ ಮೂರು ಬಾರಿ ಯುದ್ಧ ನಡೆದಿದ್ದು, ಭಾರತ ಜಯಗಳಿಸಿತ್ತು.
ಏತನ್ಮಧ್ಯೆ ಕಳೆದ ವರ್ಷ ಪೂರ್ವ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ನಡುವೆ ಭೀಕರ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಮತ್ತು ಬೀಜಿಂಗ್ ಜತೆಗಿನ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಪರಿಸ್ಥಿತಿಯನ್ನು ಎದುರಿಸಲು ಗಡಿಭಾಗದಲ್ಲಿ ಸಿದ್ಧರಾಗಿರುವಂತೆ ಸೈನಿಕರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.