Advertisement

ಕಾಟಾಚಾರದ ಸಮೀಕ್ಷೆ: ಬಾಲಕಾರ್ಮಿಕ ಪದ್ಧತಿಗಿಲ್ಲ ತಡೆ

04:30 PM Nov 21, 2017 | |

ದೇವದುರ್ಗ: ತಾಲೂಕಿನಲ್ಲಿ ಶಾಲೆಯಿಂದ ಹೊರ ಉಳಿದ ನೂರಾರು ಮಕ್ಕಳು ನಿತ್ಯ ಖಾಸಗಿ ವಾಹನಗಳಲ್ಲಿ ಹೊಲಗದ್ದೆಗಳಿಗೆ ದುಡಿಮೆಗೆ ಹೋಗುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲದಾಗಿದೆ. ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೇಳುತ್ತಿರುವುದಕ್ಕೂ, ಶಾಲೆಗೆ ಹೋಗಬೇಕಾದವರು ದುಡಿಮೆ ಹೋಗುತ್ತಿರುವ ಮಕ್ಕಳ ಸಂಖ್ಯೆಗೂ ಭಾರೀ ಅಂತರ ಕಂಡುಬರುತ್ತಿದೆ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೇವಲ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ಪ್ರಜ್ಞಾವಂತರು ದೂರಿದ್ದಾರೆ.

Advertisement

ತಾಲೂಕಿನಲ್ಲಿ ಬಾಲ ಕಾರ್ಮಿಕರ ನಿಷೇಧ, ಬಾಲ ಕಾರ್ಮಿಕರನ್ನು ಬಳಸಿಕೊಂಡರೆ ಶಿಕ್ಷೆ, ದಂಡ ಎಲ್ಲವೂ ಕಾಗದದಲ್ಲೇ ಉಳಿಯುವಂತಾಗಿದೆ. ಬಾಲಕಾರ್ಮಿಕ ಪದ್ಧತಿ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ಇದ್ದು, ಕಾನೂನನ್ನು ಸಮರ್ಪಕ ಅನುಷ್ಠಾನಗೊಳಿಸಿದ್ದರಿಂದ ಬಾಲ ಕಾರ್ಮಿಕ ಪದ್ಧತಿಗೆ ಕಡಿವಾಣ ಬೀಳುತ್ತಿಲ್ಲ.

ಕಳೆದ 2015-16ನೇ ಸಾಲಿನಲ್ಲಿ ಶಿಶು ಅಭಿವೃದ್ಧಿ ಇಲಾಖೆಯಿಂದ ಹೊರ ಉಳಿದ ಮಕ್ಕಳ ಸಮೀಕ್ಷೆ ಮಾಡಲಾಗಿತ್ತು. 1,182 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ನೀಡಲಾಗಿತ್ತು. ಆದರೆ ಶಿಕ್ಷಣ ಇಲಾಖೆ ಪ್ರಕಾರ 165 ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿದಿವೆ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡಿದೆ. 2016-17ನೇ ಸಾಲಿನಲ್ಲಿ ಕೇವಲ 89 ಮಕ್ಕಳು ಶಾಲೆಯಿಂದ ಹೊರ ಉಳಿದಿದ್ದಾರೆ ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ನಿತ್ಯ
ವಾಹನಗಳಲ್ಲಿ ಕುರಿಯಂತೆ ಮಕ್ಕಳನ್ನು ತುಂಬಿಕೊಂಡು ಹೊಲಗದ್ದೆಗಳ ಕೆಲಸಕ್ಕೆ ಕರೆದೂಯ್ಯುತ್ತಿರುವುದನ್ನು ನೋಡಿದರೆ ಸಮೀಕ್ಷೆ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಶಾಲೆ ಬಿಟ್ಟ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ದಂಡದ ಜೊತೆಗೆ ಶಿಕ್ಷೆ ವಿಧಿಸಲಾಗುವುದು ಸರಕಾರ ಎಲ್ಲೆಂದರಲ್ಲಿ ನಾಮಫಲಕ ಎಚ್ಚರಿಕೆ ನೀಡಿದೆ. ಜಮೀನು ಮಾಲಿಕರು ಇಂಥಹ ಸೂಚನೆಗಳನ್ನು ಮೀರಿ ಮಕ್ಕಳನ್ನು ಹೊಲದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶಾಲೆಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಇಲಾಖೆ ಅಧಿಕಾರಿಗಳು ಸಂಪೂರ್ಣ ಎಡವಿದ್ದಾರೆ. ಹೀಗಾಗಿ ಗ್ರಾಮೀಣ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ, ಹಾಜರಾತಿ ಕುಸಿಯುತ್ತಿದೆ. 

14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಹದಿಹರೆಯದ 15ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳವುದು ಶಿಕ್ಷಾರ್ಹ ಅಪರಾಧ ಎಂದು
ಎಚ್ಚರಿಕೆ ನಾಮಫಲಕಗಳನ್ನು ಸರ್ಕಾರ ಎಲ್ಲೆಂದರಲ್ಲಿ ಹಾಕಿ ಜಾಗೃತಿ ಮೂಡಿಸಿದೆ. ಆದರೆ ಇದು ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಜನ ದೂರಿದ್ದಾರೆ.

Advertisement

ದಾಳಿ: ಜಮೀನು ಕೆಲಸಕ್ಕೆ ಕರೆದೊಯ್ಯುವ ವಾಹನಗಳ ಮೇಲೆ ಆಗಾಗ ದಾಳಿ ಮಾಡುವ ಅಧಿಕಾರಿಗಳು, ವಾಹನ ಮತ್ತು ಚಾಲಕರನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ ಕೆಲಸಕ್ಕೆ ಕಳಿಸುವ ಪಾಲಕರು ಮತ್ತು ಕೆಲಸಕ್ಕೆ ಕರೆದೊಯ್ಯುವ ಮಾಲಿಕರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಮಾತ್ರ ತಿಳಿಯುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು. 
ಶಾಲೆಯಿಂದ ಹೊರ ಉಳಿದು ಕೂಲಿ ಕೆಲಸಕ್ಕೆ ಕರೆದೂಯ್ಯುವ ವಾಹನಗಳಿಗೆ ದಂಡ ಹಾಕಲಾಗಿದೆ. ಈ ವೇಳೆ ಪತ್ತೆಯಾದ ಮಕ್ಕಳನ್ನು ಪುನಃ ಶಾಲೆಗೆ ಕಳಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಪಾಲಕರಲ್ಲಿ ಜಾಗೃತಿ ಮೂಡಬೇಕಿದೆ. ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸೌಲಭ್ಯ ಪಡೆದು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು.
ಶಿವಶರಣಪ್ಪ ಕಟ್ಟೋಳಿ, ತಹಶೀಲ್ದಾರ್‌

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಯತ್ತ ಮುಖ್ಯವಾಹಿನಿಗೆ ತರುವಂತೆ ಈಗಾಗಲೇ ಸಂಬಂಧಪಟ್ಟ ಸಿಆರ್‌ಪಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣ ಭಾಗದ ಶಾಲೆಯ ಶಿಕ್ಷಕರು ಮನೆ ಮನೆಗೆ ಹೋಗಿ ಕರೆದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಕಾಳಜಿ ತೋರುತ್ತಿಲ್ಲ. ಮಕ್ಕಳ ಪಾಲಕರಲ್ಲಿ ಜಾಗೃತಿ ಬರಬೇಕಿದೆ.
ಎಸ್‌.ಎಂ.ಹತ್ತಿ, ಬಿಇಒ, ದೇವದುರ್ಗ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next