Advertisement

ಮಾತುಕತೆಗೆಂದು ತೆರಳಿದ್ದ ಭಾರತೀಯ ಯೋಧರ ಮೇಲೆ ಚೀನಿ ಸೈನಿಕರ ಅಟ್ಟಹಾಸ

12:03 AM Jun 17, 2020 | Hari Prasad |

ನವದೆಹಲಿ: ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರ ನಡುವೆ ಸೋಮವಾರ ರಾತ್ರಿ ಲಢಾಕ್ ನ ವಾಸ್ತವ ನಿಯಂತ್ರಣ ರೇಖೆಯ ಬಳಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿರುವುದನ್ನು ಭಾರತೀಯ ಸೇನೆ ಮಂಗಳವಾರ ಖಚಿತಪಡಿಸಿದೆ.

Advertisement

ಚೀನಾ ಪಡೆಗಳಲ್ಲಿಯೂ 43 ಸೈನಿಕರು ಸಾವನ್ನಪ್ಪಿರುವುದಾಗಿ ಅಥವಾ ಗಂಭೀರವಾಗಿ ಗಾಯಗೊಂಡಿರುವ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಭಾರತ ಹಾಗೂ ಚೀನಾ ಸೈನಿಕರ ಈ ಮುಖಾಮುಖಿ ಘರ್ಷಣೆಯಲ್ಲಿ ನಮ್ಮ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.

ಲಢಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶದಿಂದ ಹಿಂದೆ ಸರಿಯಲು ಎರಡೂ ರಾಷ್ಟ್ರಗಳ ಉನ್ನತ ಮಟ್ಟದ ಸೇನಾ ಮಾತುಕತೆಯ ವೇಳೆ ಚೀನಾ ಒಪ್ಪಿಕೊಂಡಿತ್ತು.

ಆದರೆ, ಚೀನಾ ಸೈನಿಕರು ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಅತಿಕ್ರಮಣ ನಡೆಸಿದ ಸಂದರ್ಭದಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಖಚಿತ ಮೂಲಗಳನ್ನುದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಭಾರತದ ಭೂಭಾಗದಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ಬಿಹಾರ್ ರೆಜಿಮೆಂಟ್ ನ ಕರ್ನಲ್ ಸಂತೋಷ್ ಬಾಬು ನೇತೃತ್ವದಲ್ಲಿ ಮಾತುಕತೆಗೆ ಇಳಿದಿತ್ತು. ಆದರೆ ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಚೀನಾ ಸೈನಿಕರು ಹಿಂದೆ ಸರಿಯಲು ಸಮ್ಮತಿಸಲಿಲ್ಲ ಬದಲಾಗಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಿಗೊಳಿಸುತ್ತಾ ಹೋಗಿದ್ದಾರೆ.

ಮತ್ತು ಈ ಸಂದರ್ಭದಲ್ಲಿ ಚೀನಾ ಸೈನಿಕರು ತಮ್ಮ ಬಳಿಗೆ ಮಾತುಕತೆಗೆಂದು ಬಂದಿದ್ದ ಭಾರತೀಯ ಸೈನಿಕರ ತಂಡದ ಮೇಲೆ ದೊಣ್ಣೆ, ಕಲ್ಲು, ಮುಳ್ಳುತಂತಿ ಸುತ್ತಿದ ದೊಣ್ಣೆಗಳಿಂದ ಯದ್ವಾತದ್ವ ಹಲ್ಲೆಯನ್ನು ನಡೆಸಿರುವುದಾಗಿ ಇದೀಗ ತಿಳಿದುಬಂದಿದೆ.

ಮತ್ತು ಈ ಘರ್ಷಣೆಯ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಸೈನಿಕರ ಸಂಖ್ಯೆಯ ಅಂತರ 3:1 ಇತ್ತು ಎಂದು ಮೂಲಗಳು ತಿಳಿಸಿವೆ. ಮತ್ತು ಈ ಅನಿರೀಕ್ಷಿತ ಘರ್ಷಣೆಯಿಂದ ಭಾರತದ ಕಡೆಯ ಕಮಾಂಡರ್ ಅಧಿಕಾರಿ ಗಂಭೀರವಾಗಿ ಗಾಯಗೊಂಡರು. ಈ ಘರ್ಷಣೆ ಸೋಮವಾರ ರಾತ್ರಿ ಸರಿಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದಿರುವ ಮಾಹಿತಿ ಇದೀಗ ಲಭ್ಯವಾಗಿದೆ.

ಚೀನಾ ಸೈನಿಕರ ಈ ಅಮಾನವೀಯ ಹಾಗೂ ಅನಿರೀಕ್ಷಿತ ಘರ್ಷಣೆಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಭಾರತೀಯ ಪಡೆಗಳು ಆ ಬಳಿಕ ಚೀನಾ ಪಡೆಗಳಿಗೆ ತಕ್ಕ ಶಾಸ್ತಿಯನ್ನು ಮಾಡಿವೆ ಎಂದೂ ತಿಳಿದುಬಂದಿದೆ. ಈ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾದರೆ, ಚೀನಾ ಕಡೆಯಲ್ಲೂ ಸುಮಾರು 40 ಯೋಧರು ಸಾವಿಗೀಡಾಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.

ಸದ್ಯದ ಪರಿಸ್ಥಿತಿಯ ಕುರಿತಾಗಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೂರೂ ಸೇನೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next