ಬೆಂಗಳೂರು: ಪ್ರತಿಷ್ಠಿತ ವಿಪ್ರೋ ಸಂಸ್ಥೆ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ 25.1 ಶತಕೋಟಿ ರೂ. ನಿವ್ವಳ ಆದಾಯ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಆದಾಯದಲ್ಲಿ ಶೇ.29.6ರಷ್ಟು ಏರಿಕೆಯಾಗಿದೆ.
ಸಂಸ್ಥೆಯ ಒಟ್ಟು ಆದಾಯ 150.6 ಶತಕೋಟಿ ರೂ. ಮೀರಿದ್ದು, ಹಿಂದಿನ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.3.6 ಹಾಗೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10.2ರಷ್ಟು ಪ್ರಗತಿ ದಾಖಲಿಸಿದೆ. ಹಾಗೇ ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತದ ಹೊರತಾಗಿಯೂ ಮಾಹಿತಿ ತಂತ್ರಜ್ಞಾನ ಸೇವೆಗಳ ಆದಾಯ ಎರಡನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಮೂರನೇ ತ್ತೈಮಾಸಿಕದಲ್ಲಿ ಶೇ.2.4ರಷ್ಟು ಹೆಚ್ಚಾಗಿದೆ.
ಇದೇ ಅವಧಿಯಲ್ಲಿ ಷೇರು ಗಳಿಕೆ ದರ (ಇಪಿಎಸ್) 5.57 ರೂ.ನಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38.2ರಷ್ಟು ಏರಿಕೆಯಾಗಿದೆ. ಜತೆಗೆ ವಿಪ್ರೋ ನಿರ್ದೇಶಕರ ಮಂಡಳಿಯು 1:3ರ ಅನುಪಾತದಲ್ಲಿ ಷೇರುದಾರರಿಗೆ ಬೋನಸ್ ಷೇರು ನೀಡಲು ನಿರ್ಧರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ತೈಮಾಸಿಕದಲ್ಲಿ ಐಟಿ ಸೇವಾ ವಹಿವಾಟಿನಲ್ಲಿ 2,047 ದಶಲಕ್ಷ ಡಾಲರ್‌ನಿಂದ 2,088 ದಶಲಕ್ಷ ಡಾಲರ್ ಆದಾಯ ನಿರೀಕಿಸಲಾಗಿದೆ.
ಬೆಂಗಳೂರಿನ ಸರ್ಜಾಪುರದ ಕಚೇರಿಯಲ್ಲಿ ಶುಕ್ರವಾರ ಮೂರನೇ ತ್ತೈಮಾಸಿಕ ಅವಧಿಯ ವರದಿ ಬಿಡುಗಡೆಗೊಳಿಸಿ ಮಾತನಾಡಿದ ವಿಪ್ರೋ ಸಿಇಒ ಹಾಗೂ ಕಾರ್ಯಕಾರಿ ನಿರ್ದೇಶಕ ಅಬಿದಾಲಿ ಜಡ್. ನೀಮುಚಾಲಾ, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಸೇವೆಗಳಿಂದ 2,046.5 ದಶಲಕ್ಷ ಡಾಲರ್ ಆದಾಯ ಗಳಿಸಿದ್ದು, ಹಿಂದಿನ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.1.8ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.
ನಿರ್ವಹಣಾ ಗುಣಮಟ್ಟ ಸುಧಾರಣೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ನಿರಂತರವಾಗಿ ನೀಡಿದ ಆದ್ಯತೆಗೆ ಅನುಗುಣವಾಗಿ ಉತ್ತಮ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ತಿಳಿಸಿದರು.