ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ 5 ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ವಿಪ್ರೋ ಸಂಸ್ಥೆ
ಹೈಕೋರ್ಟ್ ನಿರ್ದೇಶನದ ಮೇರೆಗೆ ಶುಕ್ರವಾರ 19 ಕೋಟಿ ರೂ. ತೆರಿಗೆಯನ್ನು ಪಾಲಿಕೆಗೆ ಪಾವತಿ ಮಾಡಿದೆ. ಶುಕ್ರವಾರ ಬೆಳಗ್ಗೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಅವರು ವಿಪ್ರೋ ಸಂಸ್ಥೆ ಉಪಾಧ್ಯಕ್ಷ ರಘುನಂದನ್ ಅವರಿಂದ ಆಸ್ತಿ ತೆರಿಗೆ ಚೆಕ್ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಣಶೇಖರ್, ಆಸ್ತಿ ಸಂಗ್ರಹ ಕೆಟಗರಿ ವಿಚಾರವಾಗಿ ವಿಪ್ರೋ ಸಂಸ್ಥೆ ತೆರಿಗೆ ಪಾವತಿಸದೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ನ್ಯಾಯಾಲಯವು ತೆರಿಗೆ ಪಾವತಿಸಿ ಬಳಿಕ ನ್ಯಾಯಾಲಯದ ಮುಂದೆ ಹಾಜರಾಗುವಂತೆೆ ಸೂಚಿಸಿದೆ. ಹೀಗಾಗಿ 21 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ವಿಪ್ರೋ ಸಂಸ್ಥೆ ವ್ಯತ್ಯಾಸ ಮೊತ್ತವನ್ನು ಕಡಿತಗೊಳಿಸಿ 19 ಕೋಟಿ ರೂ. ಪಾವತಿ ಮಾಡಿದೆ ಎಂದು ತಿಳಿಸಿದರು.
ಎಸ್‌ಎಎಸ್ ಅಡಿ ಪಾಲಿಕೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವ ಕಟ್ಟಡಗಳ ಪತ್ತೆಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ 5 ಸಾವಿರ ಬೃಹತ್ ಕಟ್ಟಡಗಳು, 70 ಟೆಕ್‌ಪಾರ್ಕ್, 40 ಶಾಪಿಂಗ್ ಮಾಲ್‌ಗಳನ್ನು ಲೇಸರ್ ಆಧಾರಿತ ಟೋಟಲ್ ಸ್ಟೇಷನ್ ಸರ್ವೇ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
231 ಕೋಟಿ ರೂ. ಬಾಕಿ: ಹಿಂದೆ ಶಾಪಿಂಗ್ ಮಾಲ್, ಟೆಕ್‌ಪಾರ್ಕ್ ಸೇರಿ 10 ಬೃಹತ್ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೇ ನಡೆಸಲಾಗಿತ್ತು. ಆಗ ಬೃಹತ್ ಕಟ್ಟಡಗಳು ಭಾರಿ ಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಈ 10 ಕಟ್ಟಡಗಳಿಂದ ಒಟ್ಟು 231.66 ಕೋಟಿ ರೂ. ತೆರಿಗೆ ಬರಬೇಕಿದ್ದು, ಅದನ್ನು ವಸೂಲಿ ಮಾಡಲಾಗುವುದು ಎಂದರು.
ಬ್ಯಾಂಕ್‌ಗಳಿಗೆ ಕೊಕ್: ಬಿಬಿಎಂಪಿ ಪರವಾಗಿ ಆಸ್ತಿ ಮಾಲೀಕರಿಂದ ತೆರಿಗೆ ಸ್ವೀಕರಿಸಲು ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಆಕ್ಸಿಸ್, ಎಚ್‌ಡಿಎಫ್ಸಿ ಹಾಗೂ ಎಸ್ ಬ್ಯಾಂಕ್‌ಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಬ್ಯಾಂಕ್‌ಗಳ ಶಾಖೆಗಳಲ್ಲಿ ತೆರಿಗೆ ಪಾವತಿಸಲು ತೆರಳಿದಾಗ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅನೇಕ ಆಸ್ತಿ ಮಾಲೀಕರು ದೂರು ನೀಡಿದ್ದಾರೆ. ಹೀಗಾಗಿ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸ ಲಾಗುವುದು. ಮತ್ತೆ ದೂರು ಕೇಳಿ ಬಂದರೆ ಅಂತಹ ಬ್ಯಾಂಕ್‌ಗಳೊಂದಿಗೆ ವ್ಯವಹಾರ ಕಡಿದುಕೊಳ್ಳಲಾಗುವುದು ಎಂದು ಹೇಳಿದರು.