Advertisement

ಮುಷ್ಕರಕ್ಕೆ 14 ದಿನ ಮೊದಲೇ ನೋಟಿಸ್‌ ನೀಡಿಕೆ ಕಡ್ಡಾಯ?

09:34 AM Nov 29, 2019 | Team Udayavani |

ಹೊಸದಿಲ್ಲಿ: ಹೊಸ ಕಾರ್ಮಿಕ ಕಾನೂನು ಪ್ರಕಾರ, ಸರ್ಕಾರಿ ನೌಕರರು ಮುಷ್ಕರ ನಡೆಸುವುದಿದ್ದರೆ 14 ದಿನಗಳ ಮೊದಲೇ ನೋಟಿಸ್‌ ನೀಡುವುದು ಕಡ್ಡಾಯಗೊಳಿಸಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಯಾವುದೇ ಘಟಕದಲ್ಲಿ ಮುಷ್ಕರ ನಡೆಯುವುದಿದ್ದರೂ ಈ ನಿಯಮ ಅನ್ವಯವಾಗುತ್ತದೆ. ಕಾರ್ಮಿಕ ಕಾನೂನಿನಲ್ಲಿ ಸುಧಾರಣೆ ತರುವ ಸಲುವಾಗಿ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ವಿಲೀನಗೊಳಿಸಲಾಗುತ್ತದೆ. ಈ ಕುರಿತು ರಾಜ್ಯಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

Advertisement

ಚರ್ಚೆಯಲ್ಲಿ ಶಾ ಭಾಗಿ: ಲೋಕಸಭೆಯಲ್ಲಿ ಬುಧವಾರ ಎಸ್‌ಪಿಜಿ ಕಾಯ್ದೆ ತಿದ್ದುಪಡಿ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಸಚಿವ ಅಮಿತ್‌ ಶಾ, ಈ ವಿಧೇಯಕವು ಅದರ ಅಸಲಿ ಉದ್ದೇಶವನ್ನು ಉಳಿಸಲಿದೆ. ಹಿಂದಿನ ಸರಕಾರಗಳು ಅದನ್ನು ದುರ್ಬಲಪಡಿಸಿದ್ದವು ಎಂದಿದ್ದಾರೆ. ಜತೆಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್‌, ಪ್ರಿಯಾಂಕಾ ಅವರ ಭದ್ರತೆಯನ್ನು ವಾಪಸ್‌ ಪಡೆದಿಲ್ಲ. ಬದಲಿಗೆ ಎಸ್‌ಪಿಜಿಯಿಂದ ಝೆಡ್‌ ಪ್ಲಸ್‌ಗೆ ಇಳಿಸಲಾಗಿದೆ ಅಷ್ಟೆ ಎಂದೂ ಶಾ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ಜೀವಿತಾವಧಿವರೆಗೂ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಇದೇ ವೇಳೆ, ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖಾಸಗೀಕರಣಗೊಳಿಸದೇ ಇದ್ದರೆ, ಅದನ್ನು ಮುಚ್ಚಬೇಕಾಗುತ್ತದೆ ಎಂದು ರಾಜ್ಯಸಭೆಗೆ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದಾರೆ. ಬುಧವಾರ ಎರಡು ಕೇಂದ್ರಾಡಳಿತ ಪ್ರದೇಶಗಳಾದ ದಾಮನ್‌ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿಯನ್ನು ವಿಲೀನಗೊಳಿಸುವ ವಿಧೇಯಕ, ಇ-ಸಿಗರೇಟ್‌ಗೆ ನಿಷೇಧ ಹೇರುವ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿವೆ.

ಗೋಡ್ಸೆ ದೇಶಭಕ್ತ ಎಂದ ಪ್ರಜ್ಞಾ
ಲೋಕಸಭೆಯಲ್ಲಿ ಚರ್ಚೆಯ ವೇಳೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಮಹಾತ್ಮಾ ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವ ಮೂಲಕ ಮತ್ತೂಮ್ಮೆ ವಿವಾದ ಸೃಷ್ಟಿಸಿದ್ದಾರೆ. ಎಸ್‌ಪಿಜಿ ತಿದ್ದುಪಡಿ ಮಸೂದೆ ಚರ್ಚೆ ವೇಳೆ, ಡಿಎಂಕೆ ಸದಸ್ಯ ಎ.ರಾಜಾ ಅವರು ಗೋಡ್ಸೆ ಕುರಿತು ಪ್ರಸ್ತಾಪಿಸಿದಾಗ ಅವರನ್ನು ತಡೆದ ಪ್ರಜ್ಞಾ, ‘ನೀವು ದೇಶಭಕ್ತನೊಬ್ಬನ ಉದಾಹರಣೆ ನೀಡಬೇಡಿ’ ಎಂದಿದ್ದಾರೆ. ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಸ್ಪೀಕರ್‌ ಬಿರ್ಲಾ ಪ್ರಜ್ಞಾ ಹೇಳಿಕೆಯನ್ನು ಕಡತದಿಂದ ಅಳಿಸುವಂತೆ ಸೂಚಿಸಿ ವಿವಾದಕ್ಕೆ ತೆರೆ ಎಳೆದರು.

ನಿರ್ಮಲಾ ಸ್ಪಷ್ಟನೆ: ಆರ್ಥಿಕ ಪ್ರಗತಿ ಸ್ವಲ್ಪಮಟ್ಟಿಗೆ ಕುಸಿದಿದೆಯೇ ವಿನಾ ದೇಶವು ಆರ್ಥಿಕ ಹಿಂಜರಿತಕ್ಕೆ ಸಿಲುಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ದೇಶದ ಆರ್ಥಿಕತೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಬಜೆಟ್‌ ಅನಂತರ ಸರಕಾರ ಕೈಗೊಂಡ ಕೆಲವು ಕ್ರಮಗಳು ಈಗ ಪ್ರತಿಫ‌ಲ ನೀಡುತ್ತಿದ್ದು, ಆಟೋಮೊಬೈಲ್‌ ಕ್ಷೇತ್ರ ಕೂಡ ಚೇತರಿಸಿಕೊಳ್ಳುತ್ತಿದೆ ಎಂದಿದ್ದಾರೆ.

Advertisement

ಆರ್ಥಿಕ ಸಂಕಷ್ಟಕ್ಕೆ ಉತ್ತರಿಸುವ ಬದಲು ನಿರ್ಮಲಾ ಬಜೆಟ್‌ ಭಾಷಣ ಓದುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು. ಇದಕ್ಕೂ ಮುನ್ನ ಕಳೆದ 8 ತ್ತೈಮಾಸಿಕಗಳಲ್ಲಿ ಜಿಡಿಪಿ ಪ್ರಗತಿ ಕುಸಿದಿರುವುದನ್ನು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ರಾಜ್ಯಸಭೆಯ ಗಮನಕ್ಕೆ ತಂದು, ನೋಟು ಅಮಾನ್ಯದಂಥ ಕೆಟ್ಟ ನಿರ್ಧಾರಕ್ಕೆ ದೇಶ ಬೆಲೆ ತೆರುವಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next