Advertisement

ಈ ಬಾರಿ ತೀವ್ರ ಚಳಿ?: ಲಾ ನಿನಾದಿಂದಾಗಿ ಕೊರೆಯುವ ಚಳಿಗಾಲ ಸಾಧ್ಯತೆ: ಐಎಂಡಿ

11:38 PM Oct 14, 2020 | mahesh |

ಹೊಸದಿಲ್ಲಿ: ಈ ಬಾರಿಯ ಚಳಿ ತುಸು ಹೆಚ್ಚೇ ನಡುಕ ತರಲಿದೆ! ಈ ಬಾರಿಯ ಚಳಿಗಾಲ ಸ್ವಲ್ಪ ಹೆಚ್ಚಾಗಿಯೇ ಕಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಲಾ ನಿನಾ ಸ್ಥಿತಿಯಿಂದಾಗಿ ಈ ಬೆಳವಣಿಗೆ ಉಂಟಾಗಲಿದೆ ಎಂದು ಅದು ತಿಳಿಸಿದೆ.

Advertisement

ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಚಳಿ ಹೆಚ್ಚಾಗಲು ತಾಪಮಾನ ಬದಲಾವಣೆ ಕಾರಣವಲ್ಲ ಎಂದಿದ್ದಾರೆ. ಬದಲಾಗಿ ವಾತಾವರಣದ ಅನಿಯಮಿತ ಸ್ಥಿತಿಯಿಂದಾಗಿ ಇದು ಉಂಟಾಗಲಿದೆ ಎಂದಿದ್ದಾರೆ.

ಒಂದು ವಾರದ ಕಾಲ ಲಾ ನಿನಾ ಮುಂದುವರಿದರೆ ಈ ವರ್ಷ ಚಳಿಗಾಲ ಹೆಚ್ಚು ತೀವ್ರವಾಗಿರಬಹುದು. ಎಲ್‌ ನಿನೋ ಮತ್ತು ಲಾ ನಿನಾ ಸ್ಥಿತಿಗಳು ಶೀತ ಗಾಳಿ ಸ್ಥಿತಿಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.

ಎಲ್‌ ನಿನೋ ಪಾತ್ರ ಹೆಚ್ಚಾಗಿದ್ದರೆ ಚಳಿಯ ತೀವ್ರತೆ ಅಷ್ಟೇನೂ ಹೆಚ್ಚಾಗಿರುವುದಿಲ್ಲ ಎಂದೂ ಮಹಾಪಾತ್ರ ತಿಳಿಸಿದ್ದಾರೆ. ರಾಜಸ್ಥಾನ, ಉ.ಪ್ರದೇಶ ಮತ್ತು ಬಿಹಾರದಲ್ಲಿ ತೀವ್ರ ಚಳಿ ಮತ್ತು ಶೀತ ಗಾಳಿಯಿಂದಾಗಿ ಹೆಚ್ಚು ಸಾವು ನೋವುಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಲಾ ನಿನಾ ಎಂದರೇನು?
ಸ್ಪ್ಯಾನಿಷ್‌ ಭಾಷೆಯಲ್ಲಿ ಲಾ ನಿನಾ ಎಂದರೆ ಪುಟ್ಟ ಹುಡುಗಿ ಎಂದರ್ಥ. ಲಾ ನಿನಾವು ಪೆಸಿಫಿಕ್‌ ಸಾಗರದಲ್ಲಿ ನೀರನ್ನು ಹೆಚ್ಚು ತಂಪು ಮಾಡುತ್ತದೆ. ಎಲ್‌ ನಿನೋ ಎಂದರೆ ಪುಟ್ಟ ಹುಡುಗ ಎಂದರ್ಥ. ಎಲ್‌ ನಿನೋ ಪೆಸಿಫಿಕ್‌ ಸಾಗರದ ನೀರನ್ನು ಹೆಚ್ಚು ಬಿಸಿ ಮಾಡುತ್ತದೆ. ಈ ಎರಡೂ ವಿದ್ಯಮಾನಗಳು ಭಾರತದ ಮುಂಗಾರು ಮಳೆ ಸಹಿತ ಹವಾಮಾನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next