Advertisement

ಮನೆ ರಿಪೇರಿಗೆ ಚಳಿಗಾಲ ಸೂಕ್ತ

06:00 AM Dec 17, 2018 | |

ಮನೆ ರಿಪೇರಿ ಕೆಲಸವನ್ನು ಯಾವಾಗ ಬೇಕಾದರೂ ಮಾಡುವುದಕ್ಕೆ ಆಗುವುದಿಲ್ಲ. ಬೇಸಿಗೆ ಇಲ್ಲವೇ, ಚಳಿಗಾಲ ಇದಕ್ಕೆ ಸೂಕ್ತ ಸಮಯ. ಮಳೆಗಾಲದಲ್ಲಿ ಮನೆಯಲ್ಲಿ ಸೋರುವಿಕೆ ಎಲ್ಲೆಲ್ಲಿ ಎನ್ನುವುದನ್ನು ಗುರುತು ಮಾಡಿಕೊಂಡರೆ, ಚಳಿಗಾಲದಲ್ಲಿ ಅದನ್ನು ರಿಪೇರಿ ಮಾಡಿಸಬಹುದು. 

Advertisement

ಮನೆ ಎಂದರೆ ಸುಮ್ಮನೆ ಅಲ್ಲ. ಪ್ರತಿವರ್ಷ ಅದರ ನಿರ್ವಹಣೆ ಇದ್ದೇ ಇರುತ್ತದೆ. ಹೊಸಮನೆಯನ್ನೋ, ಹೊಸ ವಾಹನಗಳನ್ನೋ ಕೊಂಡಾಗ  ನಾಲ್ಕೈದು ವರ್ಷ ಅಂಥದ್ದೇನೂ ನಿರ್ವಹಣೆ( ರಿಪೇರಿ) ಬೇಡುವುದಿಲ್ಲ. ಆದರೆ, ಹಳತು ಆಗುತ್ತಿದ್ದಂತೆ ನಿರ್ವಹಣೆ ಮುಖ್ಯ. 

ನಿರ್ವಹಣೆ ಅಂದರೆ ಮತ್ತೇನಿಲ್ಲ, ಸಣ್ಣಪುಟ್ಟ ರಿಪೇರಿ, ಬಣ್ಣ ಬಳಿಯುವುದು ಇಷ್ಟೇ. ಹಾಗಂತ, ಎಲ್ಲ ಕಾಲದಲ್ಲೂ ಮನೆ ರಿಪೇರಿ ಆಗದು. ಆ ಕೆಲಸಕ್ಕೆ ಚಳಿಗಾಲ ಮಾತ್ರ ಸೂಕ್ತ. ಇತರೆ ಕಾಲದಲ್ಲಿ, ಉದಾಹರಣೆಗೆ ಮಳೆಗಾಲದಲ್ಲಿ ಬಣ್ಣ ಹೊಡೆಯಲು ಶುರುಮಾಡಿಕೊಂಡರೆ, ಕಡೇಪಕ್ಷ ಒಂದೇ ಒಂದು ದಿನದ ಮಳೆಯಾದರೂ, ಒಂದಷ್ಟು ಬಣ್ಣವನ್ನು ಕೊಚ್ಚಿಕೊಂಡು ಹೋದೀತು. ಆದರೆ ಚಳಿಗಾಲದಲ್ಲಿ ಅಂಥ ಭಯ ಇರುವುದಿಲ್ಲ. ಮಳೆಗಾಲದಲ್ಲಿ ಗೋಡೆಗಳು ಹೆಚ್ಚು ನೆನೆದಿರುವುದರಿಂದ ಬಣ್ಣ ಬೇಗನೆ ಆರದೆ, ಮಳೆ ಬಂದಾಗ ಹೆಚ್ಚು ಬಣ್ಣ ಕೊಚ್ಚಿಕೊಂಡು ಹೋಗುವ ಆತಂಕ ಇರುತ್ತದೆ. ಚಳಿಗಾಲದಲ್ಲಿ ಗೋಡೆಗಳು ಬಹುತೇಕ ಒಣಗಿದಂತೆ ಇರುವುದರಿಂದ, ಬಣ್ಣ ಬೇಗನೆ ಆರುತ್ತದೆ. 

ನಿರ್ವಹಣೆ ಹೇಗೆ?
ಮಳೆಗಾಲದಲ್ಲಿ ಸೂರಿನ ಒಂದೆರಡು ಜಾಗದಲ್ಲಿ ತೇವಬರುವುದು, ಬೂಷ್ಟು ಹಿಡಿಯುವುದು ಆಗುವುದರಿಂದ ತಕ್ಷಣಕ್ಕೆ ರಿಪೇರಿ ಮಾಡಲು ಹಿಂಜರಿಕೆಯಾಗುತ್ತದೆ. ಮಾಡಿದ್ದು ಮಳೆಯಲ್ಲಿ ಕೊಚ್ಚಿಹೋದರೆ? ಎಂಬ ಆತಂಕ ಕಾಡುವುದಂತೂ ನಿಜ.  ಹಾಗಂತ ಮಳೆಗಾಲದಲ್ಲಿ ಸುಮ್ಮನೆ ಕೂರಬೇಡಿ.  ಮನೆಯ ಯಾವ,ಯಾವ ಭಾಗದಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಗುರುತು ಮಾಡಿಕೊಳ್ಳಿ.  ಆನಂತರ ಒಟ್ಟಿಗೆ ರಿಪೇರಿ ಮಾಡಿಸುವುದು ಸೂಕ್ತ. ಸೂರಿನ ಮೇಲೆ ಹಾಕಿರುವ ನೀರುನಿರೋಧಕ ಪದರ ಅಲ್ಲಲ್ಲಿ ಹಪ್ಪಳದಂತೆ ಎದ್ದಿದ್ದರೆ, ಇಲ್ಲ ನಡೆದಾಡಿದಾಗ ” ಡಬ್‌ಡಬ್‌’ ಎಂದು ಶಬ್ದ ಬಂದರೆ, ತಕ್ಷಣವೇ ರಿಪೇರಿ ಮಾಡಿಸಬೇಕು ಎಂದು ತಿಳಿಯಬೇಕು.  “ಇರುವ ಒಂದು ಪದರ ತೆಗೆದರೆ, ಮಳೆ ಬಂದಾಗ ಸೋರುವುದಕ್ಕೆ ಶುರುವಾದರೆ, ತೇವ ಬರುವುದು ಹೆಚ್ಚಾದರೆ ಏನುಮಾಡುವುದು’ ಎಂಬ ಆಲೋಚನೆಯೂ ಬಂದು “ಆಕಡೆ ಮಳೆ ನಿಂತಮೇಲೆ ಮಾಡಿದರಾಯಿತು’ ಎಂದು ಮುಂದೂಡುವುದೂ ಇದ್ದದ್ದೇ. ಹಾಗಾಗಿ, ಚಳಿಗಾಲದಲ್ಲಿ ರಿಪೇರಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಚಳಿಗಾಲವೇ ಸೂಕ್ತ ಸಮಯ.

ಪೆಂಟಿಂಗ್‌, ಪಾಲಿಶಿಂಗ್‌
ಮಳೆಗಾಲದಲ್ಲಿ ನೀರು ಕುಡಿದು, ತೇವಾಂಶ ಹೀರಿಕೊಂಡು ಹಿಗ್ಗಿದ್ದ ಮರಮುಟ್ಟುಗಳು, ಕಿಟಕಿ ಬಾಗಿಲುಗಳ ಬಣ್ಣ ಹಾಗೂ ಪಾಲಿಶ್‌ ಅನೇಕ ಕಡೆ ಚಳಿಗಾಲದಲ್ಲಿ ಚಕ್ಕೆ ಏಳಬಹುದು. ಬಹುತೇಕ ಮರಗಳು ಸ್ವಾಭಾಕವಿವಾಗೇ ಒಂದಷ್ಟು ತೇವಾಂಶವನ್ನು ತಮ್ಮಲ್ಲಿ ಹೊಂದಿರುತ್ತವೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ, ಚಳಿಗಾಲದಲ್ಲಿ ಒಮ್ಮೆಲೆ ಒಣ ಹವೆ ಎದುರಾದರೆ, ದಿಢೀರ್‌ ಎಂದು ಕುಗ್ಗಿದಾಗ, ಕಿಟಕಿ ಬಾಗಿಲುಗಳಿಗೆ ಬಳಿದ ಬಣ್ಣ ಕೆಲವೆಡೆ ಎದ್ದು ಬರುವುದುಂಟು. ಸಾಮಾನ್ಯವಾಗಿ ಬಣ್ಣ ಬಳಿದ ನಂತರದ ಒಂದೆರಡು ಮಳೆಗಾಲದಲ್ಲಿ ಹೀಗಾಗದಿದ್ದರೂ ನಾಲ್ಕಾರು ಮಳೆಗಾಲ ಎದುರಿಸಿದ ನಂತರ, ಈ ಹಿಂದೆ ಸಣ್ಣಸಣ್ಣದಾಗಿ ಕಣ್ಣಿಗೆ ಹೆಚ್ಚು ಬೀಳದಿದ್ದದ್ದು ಢಾಳಾಗಿ ಕಾಣುತ್ತದೆ. ಇದೇ ರೀತಿ ಗೋಡೆಗಳೂ ಕೂಡ ಒಂದಷ್ಟು ಮಳೆನೀರು ಕುಡಿದ ಕಾರಣ, ಗೋಡೆಗೂ ಬಣ್ಣಕ್ಕೂ ಇದ್ದ ಅಂಟು ಕಡಿಮೆ ಆಗಿ ಚಳಿಗಾಲದಲ್ಲಿ ಒಮ್ಮೆಲೆ ಒಣಗಿದಾಗ ಪುಡಿಪುಡಿಯಾಗಿ ಕೆಲವೆಡೆ ಉದುರುವುದೂ ಉಂಟು. ಹೀಗಾಗಲು ಮುಖ್ಯ ಕಾರಣ – ಬಣ್ಣಕ್ಕೂ ಅದರ ಹಿಂದಿನ ಗೋಡೆಯ ಪದರಕ್ಕೂ ಉಂಟಾದ ಅಂಟಿನ ಸಡಿಲುವಿಕೆಯ ಪ್ರಕ್ರಿಯೆ. ಈಗ ಬರುವ ಬಣ್ಣಗಳು ಸಾಕಷ್ಟು ಹವಾಮಾನ ನಿರೋಧಕ ಗುಣಗಳನ್ನು ಪಡೆದಿದ್ದರೂ, ಕೆಲವರ್ಷಗಳ ಮಳೆ, ಚಳಿ, ಬಿಸಿಲಿಗೆ ಒಡ್ಡಿಕೊಂಡಾಗ ಬಣ್ಣ ಮಾಸುವುದು ಅನಿವಾರ್ಯ. ಆದರೆ ಫಿನಿಶ್‌ ತೀರಾ ಕಿತ್ತುಬಂದಂತೆ ಅನ್ನಿಸಿದರೆ, ಮರಳಿ ಬಣ್ಣ ಬಳಿಯುವ ಬಗ್ಗೆ ಚಿಂತಿಸಬೇಕಾಗುತ್ತದೆ.

Advertisement

ಚಳಿಗಾಲದ ಲಾಭಗಳು
ಈ ಕಾಲದಲ್ಲಿ ಎಲ್ಲವೂ ಒಣಗಿದಂತೆ ಇರುವುದರಿಂದ, ಬಣ್ಣ ಬಳಿದರೆ ಬೇಗನೆ ಹೀರಿಕೊಂಡು, ಗೋಡೆಗಳ ಒಳಗೆ ಸಾಕಷ್ಟು ಆಳವಾಗಿ ಪ್ರವೇಶಿಸಿ ಹೊಂದಿಕೊಳ್ಳುತ್ತದೆ. ಬಣ್ಣದ ಬಳಕೆ ಹೆಚ್ಚು ಎಂದೆನಿಸಿದರೂ, ಅದು ಗಟ್ಟಿ ತಳಹದಿ ಹೊಂದಿದಂತೆ ಆಗಿ, ಮುಂಬರುವ ಕಾಲಗಳಲ್ಲಿ ಹವಾಮಾನದ ವೈಪರಿತ್ಯಗಳನ್ನು ಎದುರಿಸಲು ಹೆಚ್ಚು ಶಕ್ತವಾಗಿರುತ್ತದೆ. ಈ ಕಾಲದಲ್ಲಿ ಬಿಸಿಲೂ ಕೂಡ ಹೆಚ್ಚು ತೀಕ್ಷ್ಣ ವಾಗಿರದ ಕಾರಣ, ಬಣ್ಣಗಳು ಬೇಸಿಗೆಗೆ ಹೋಲಿಸಿದರೆ ಸ್ವಲ್ಪ ನಿಧಾನವಾಗೇ ಒಣಗುತ್ತದೆ. ಆದ್ದರಿಂದ ಹೆಚ್ಚು ತೇಪೆ ಸ್ಥಳಗಳು ಕಾಣುವುದಿಲ್ಲ. ಕೆಲವೊಮ್ಮೆ ಎರಡು ಕೋಟ್‌ ಬಣ್ಣ ಬಳಿದರೂ ಸರಿ ಕಾಣದೆ, ಮತ್ತೂಂದು ಪದರ ಬಳಿಯಲು ಹೀಗೆ ತೇಪೆ ಹಾಕಿದಂತೆ ಕಾಣುವ  ಗೋಡೆಗಳೇ ಕಾರಣ ಆಗಿರುತ್ತದೆ. ಬಿಸಿಲುಗಾಲಕ್ಕೆ ಹೋಲಿಸಿದರೆ, ಚಳಿಗಾಲದಲ್ಲಿ ಹೆಚ್ಚು ಸುಲಭದಲ್ಲಿ ಒಳ್ಳೆಯ ಫಿನಿಶ್‌ ಪಡೆಯಬಹುದು. 

ಕೆಲವೊಮ್ಮೆ ತೇವಾಂಶ ಎಷ್ಟು ಮುಖ್ಯವಾಗುತ್ತದೆ ಎಂದರೆ, ಪಾಲಿಶ್‌ ಕೆಲಸವನ್ನು ಮಳೆಗಾಲದಲ್ಲಿ ಮಾಡದಿದ್ದರೇ ಉತ್ತಮ. ಈ ಕಾಲದಲ್ಲಿ ಒಳ್ಳೆಯ ಫಿನಿಶ್‌ ಪಡೆಯಲು ಕಷ್ಟ ಆಗುತ್ತದೆ. ಹೀಗಾಗಲು ಮುಖ್ಯ ಕಾರಣ ಪಾಲಿಶ್‌ ಬೇಗನೆ ಒಣಗದೆ ನಾಲ್ಕಾರು ಕೋಟ್‌ ಪಾಲಿಶ್‌ ನೀಡಲು ಕಷ್ಟ ಆಗುತ್ತದೆ. ಇದೇ ರೀತಿಯಲ್ಲಿ ಹೊಡೆದ ಬಣ್ಣ ಕೆಳಗಿಳಿಯ ತೊಡಗಿದರೆ, ಇಲ್ಲವೇ, ಸರಿಯಾಗಿ ಹರಡದಿದ್ದರೆ ಕೂಡ, ಫಿನಿಶ್‌ ಸರಿಯಾಗಿ ಬರುವುದಿಲ್ಲ. ಮಳೆಗಾಲದಲ್ಲಿ ಬಣ್ಣಗಳು ಸರಿಯಾಗಿ ಅಂಟದೆ ಕೆಳಗಿಳಿಯುವುದು, ಕೆಳಗಿಳಿದು ಅಲ್ಲಿಯೇ ಸೆಟ್‌ ಆಗಿ, ಮೇಲೊಂದು ಬಣ್ಣ ಕೆಳಗೊಂದು ಥರ ಕಾಣಬಹುದು. 

ಪ್ರ„ಮರ್‌ ಹೊಡೆಯಿರಿ
ಬಣ್ಣಗಳು ಕಿತ್ತು ಬರಲು ಮುಖ್ಯ ಕಾರಣ, ಅವುಗಳನ್ನು ಗೋಡೆಗಳಿಗೆ ಸರಿಯಾಗಿ ಅಂಟಿಕೊಂಡು ಕೂರುವಂತೆ ಮಾಡುವ ಪದರ ಸರಿಯಾಗಿ ಅಂಟದಿರುವುದೇ ಆಗಿರುತ್ತದೆ. ಹಾಗಾಗಿ, ಮರು ಬಣ್ಣ ಹೊಡೆಯುವ ಮೊದಲು, ಎಲ್ಲೆಲ್ಲಿ ಪೇಂಟ್‌ ಹೆಚ್ಚು ಕಿತ್ತು ಹೋಗಿದೆಯೋ ಅಲ್ಲೆಲ್ಲ ಮತ್ತೆ ಮರಳು ಕಾಗದದಿಂದ ಉಜ್ಜಿ ನಂತರ ಮುಂದುವರಿಯುವುದು ಉತ್ತಮ. ಈಗ ಬರುವ ಅನೇಕ ಬಣ್ಣಗಳಿಗೆ ಪ್ರ„ಮರ್‌ ಹೊಡೆಯುವ ಅಗತ್ಯವಿಲ್ಲ. ಫಿನಿಶ್‌ ಬಣ್ಣವನ್ನೇ ಒಂದು ಪದರ ಹೊಡೆದು ಅದು ಒಣಗಿದ ನಂತರ ಸೂಕ್ತ ಆಧಾರ ಸಿಗುತ್ತದೆ. ನಂತರ ಫಿನಿಶ್‌ ಕೋಟ್‌ಗಳನ್ನು ಬಳಿಯಿರಿ ಎಂದು ಕೆಲ ಕಂಪನಿಗಳು ಹೇಳುವುದುಂಟು. ನಾವು ದುಬಾರಿ ಬಣ್ಣಗಳನ್ನು ಆಯ್ಕೆ ಮಾಡಿದ್ದರೆ, ಅದೇ ಬಣ್ಣವನ್ನು ಬೇಸ್‌ ಕೋಟ್‌ನಂತೆ ಬಳಿಯುವುದು ಮತ್ತೂ ದುಬಾರಿ ಆದೀತು. ಆದುದರಿಂದ, ನಾವು ಸಾಧಕಬಾದಕಗಳನ್ನು ನೋಡಿ ಮುಂದು ವರಿಯುವುದು ಉತ್ತಮ.  ಎಲ್ಲದಕ್ಕೂ ಒಂದೊಂದು ಕಾಲವಿರುತ್ತದೆ. ನಿಮಗೆ ಒಳ್ಳೆಯ ಫಿನೀಶ್‌ ದೀರ್ಘ‌ಕಾಲ ಬಾಳಿಕೆ ಬರಬೇಕೆಂದರೆ, ಋತು ನೋಡಿ ಬಣ್ಣ ಹೊಡೆಯುವುದು ಒಳ್ಳೆಯದು.  

ಮಾಹಿತಿಗೆ ಫೋನ್‌ 98441 32826 

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next