Advertisement

Winter Assembly session ವಿಳಂಬ ಆರಂಭ: ಬೆಳಗಾವಿ ಕಲಾಪಕ್ಕೆ ಮೊದಲ ದಿನವೇ ಆರು ಸಚಿವರು ಗೈರು

12:41 AM Dec 05, 2023 | Team Udayavani |

ಬೆಳಗಾವಿ: ಕಾಂಗ್ರೆಸ್‌ ಸರಕಾರಕ್ಕೆ ಮೊದಲನೆ ಯದಾದ ಬೆಳಗಾವಿ ಅಧಿವೇಶನದ ಮೊದಲ ದಿನವೇ ಆರು ಸಚಿವರು ಗೈರು ಹಾಜರಾಗಿದ್ದರಿಂದ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಸಿಟ್ಟಾದರು, ಅತ್ತ ವಿಧಾನಸಭೆಯಲ್ಲೂ ಕಲಾಪ ಒಂದು ತಾಸು ತಡವಾಗಿ ಆರಂಭವಾಯಿತು.

Advertisement

ಮೇಲ್ಮನೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ವಿವಿಧ ಕ್ಷೇತ್ರಗಳಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇದರ ಬೆನ್ನಲ್ಲೇ ಪ್ರಶ್ನೋತ್ತರ ಅವಧಿ ಪ್ರಾರಂಭವಾಯಿತು. ಹಲವು ಸಚಿವರ ಪರವಾಗಿ ಸಭಾ ನಾಯಕರು ಮತ್ತು ಪ್ರಿಯಾಂಕ್‌ ಖರ್ಗೆ ಉತ್ತರಿಸಿದರು. ಕೆಲವು ಉಪ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನೂ ಮಾಡಿದರು. ಈ ಸಂದರ್ಭ ಕೆಲವು ಶಾಸಕರು ಸಂಬಂಧಪಟ್ಟ ಖಾತೆಗಳ ಸಚಿವರಿಂದಲೇ ವಿವರವಾದ ಉತ್ತರ ಬಯಸಿದರು.

ಆಗ, ಮೊದಲ ದಿನವೇ ಆರು ಸಚಿವರು ಗೈರುಹಾಜರಿದ್ದಾರೆ. ಎಲ್ಲರೂ ಪೂರ್ವನಿರ್ಧರಿತ ಕಾರ್ಯಕ್ರಮದ ಕಾರಣ ನೀಡಿದ್ದಾರೆ.

ಹೀಗಾದರೆ ನಾನು ಸದನ ನಡೆಸಬೇಕೋ ಬೇಡವೋ ನೀವೇ ಹೇಳಿ. ನಾಳೆಯಿಂದ ಇದು ನಡೆಯುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಖಾರವಾಗಿ ಹೇಳಿದರು. ದೀರ್ಘ‌ ಉತ್ತರ ಬಯಸಿದ್ದರಿಂದ ಕೆಲವು ಪ್ರಶ್ನೆಗಳನ್ನು ಅರ್ಧ ತಾಸು ಚರ್ಚೆಗೆ ಕೈಗೆತ್ತಿಕೊಳ್ಳಲು ಸದಸ್ಯರು ಮನವಿ ಮಾಡಿದರು. ಸಚಿವರಾದ ಕೆ.ಜೆ. ಜಾರ್ಜ್‌, ಡಾ| ಎಂ.ಸಿ. ಸುಧಾಕರ್‌, ಕೆ.ಎಚ್‌. ಮುನಿಯಪ್ಪ, ಡಾ| ಶರಣಪ್ರಕಾಶ ಪಾಟೀಲ ಗೈರುಹಾಜರಿದ್ದರು.

ವಿಧಾನಸಭೆ ಒಂದು ತಾಸು ವಿಳಂಬ ಆರಂಭ: ವಿಧಾನಸಭೆಯಲ್ಲಿ ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಕಲಾಪ ಆರಂಭವಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌, ಯಾವ ಕಾರಣಕ್ಕೆ ಕಲಾಪ ವಿಳಂಬವಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.

Advertisement

ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ಕಲಾಪ ನಿಯಮಗಳ ಪ್ರಕಾರ ಸದನವನ್ನು ಹೇಗೆ ಪ್ರಾರಂಭಿಸಬೇಕೆಂಬ ಬಗ್ಗೆ ನಿರ್ದಿಷ್ಟ ಪದ್ಧತಿ ಇದೆ. ಯಾರು ಬೇಕಾದರೂ ಬರಲಿ, ಬಿಡಲಿ; ನೀವು ಪೀಠದಲ್ಲಿ ಆಸೀನರಾಗಿ ಕಲಾಪ ಆರಂಭಿಸಿ. ಆಗ ಎಲ್ಲರೂ ಬರುತ್ತಾರೆ. ಇಲ್ಲವಾದರೆ ಬೆಳಗಾವಿ ಅಧಿವೇಶನ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನು ಜನರು ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡಬೇಡಿ ಎಂದು ಸ್ಪೀಕರ್‌ ಖಾದರ್‌ ಅವರಿಗೆ ಮನವಿ ಮಾಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಉತ್ತರ ಕರ್ನಾಟಕ ಭಾಗದ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ರಾಜಕೀಯ ನಾಯಕತ್ವವನ್ನು ಅವಗಣಿಸುತ್ತಿರುವ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ಇದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಡಿ. 6ರಿಂದ ಉ.ಕ. ಸಮಸ್ಯೆಗಳ ಬಗ್ಗೆ ಚರ್ಚೆ: ಡಿ. 6ರಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕದ ನೀರಾವರಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡಬೇಕೆಂದು ಅನೇಕ ಶಾಸಕರು ಬೇಡಿಕೆ ಇರಿಸಿದ್ದರು. ಇದಕ್ಕೆ ಸಹಮತ ವ್ಯಕ್ತವಾಗಿದ್ದು, ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಕಾಲಾವಕಾಶ ಒದಗಿಸಲು ವಿಧಾನಸಭೆ ಕಾರ್ಯಕಲಾಪಗಳ ಸಲಹಾ ಸಮಿತಿ (ಬಿಎಸಿ) ಸಭೆ ನಿರ್ಧರಿಸಿದೆ. ಸೋಮವಾರ ಭೋಜನ ವಿರಾಮದ ವೇಳೆಯಲ್ಲಿ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಕೊಡುವುದು, ಮಸೂದೆಗಳನ್ನು ಮೊದಲ ವಾರದಲ್ಲೇ ಮಂಡಿಸಿ, ಎರಡನೇ ವಾರದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಎಚ್ಚರ ವಹಿಸಬೇಕು
ಆಡಳಿತ ಪಕ್ಷದ ಮುಖ್ಯ ಸಚೇತಕರಾದರೂ ಈ ಬಗ್ಗೆ ಎಚ್ಚರ ವಹಿಸಬೇಕಲ್ಲವೇ ಎಂದು ಸಭಾಪತಿ ಹೊರಟ್ಟಿ ಪ್ರಶ್ನಿಸಿದರು. ಆಗ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ “ಆನ್‌ ದಿ ವೇ’ ಎಂದು ಸಮಜಾಯಿಷಿ ನೀಡಲು ಮುಂದಾದರು. “ಯಾವ ಆನ್‌ ದಿ ವೇ ರೀ? ಸದನದ ಸಮಯ ಗೊತ್ತಿಲ್ಲವೇ? ನಾಳೆಯಿಂದ ಇದು ಪುನರಾವರ್ತನೆಯಾಗುವಂತಿಲ್ಲ’ ಎಂದು ಹೊರಟ್ಟಿಯವರು ಸ್ಪಷ್ಟ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next