ಗ್ರಾಸ್ ಐಲೆಟ್ ( ಸೇಂಟ್ ಲೂಸಿಯ): ಅತಿಥೇಯ ವೆಸ್ಟ್‌ಇಂಡೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಜವಾಬಿತ್ತ ಇಂಗ್ಲೆಂಡ್ 18. 5 ಓವರ್‌ಗಳಲ್ಲಿ 6 ವಿಕೆಟಿಗೆ 161 ರನ್ ಬಾರಿಸಿ ಜಯಿಸಿತು.
ಕಳೆದ ಏಕದಿನ ಸರಣಿಗಳಲ್ಲಿ ಮಿಂಚಿದ “ಯುನಿವರ್ಸ್ ಬಾಸ್’ ಗೇಲ್ ಈ ಬಾರಿ ಕೇವಲ 15 ರನ್ ಗಳಿಸಿ ನಿರಾಶೆ ಮೂಡಿಸಿದರು. ವಿಂಡೀಸ್ 102 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಕ್ರೀಸ್‌ಗೆ ಬಂದ ನಿಕೋಲಸ್ ಪೂರಣ್ ಆಕ್ರಮಣಕಾರಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 160ಕ್ಕೆ ತಲುಪಿಸಿದರು. ಅವರ ಗಳಿಕೆ 58 ರನ್ (3 ಬೌಂಡರಿ, 4 ಸಿಕ್ಸರ್). ಇಂಗ್ಲೆಂಡ್‌ನ ಟಾಮ್ ಕರನ್ 36ಕ್ಕೆ 4ವಿಕೆಟ್ ಕಬಳಿಸಿ ವಿಂಡಿಸ್‌ಗೆ ಘಾತುಕವಾಗಿ ಕಾಡಿದರು.
160ರ ಸಾಧಾರಣ ಮೊತ್ತ ಗುರಿ ಬೆನ್ನತ್ತಲಾರಂಭಿಸಿ ಇಂಗ್ಲೆಂಡ್ ಬಹು ಬೇಗನೇ ಆರಂಭಿಕಾರ ಅಲೆಕ್ಸ್ ಹೆಲ್ಸ್ ಅವರನ್ನು ಕಳೆದುಕೊಂಡಿತು. ಮತ್ತೋರ್ವ ಆರಂಭಕಾರ ಜಾನಿ ಬೇರ್‌ಸ್ಟೊ ಕ್ರೀಸ್ ಕಚ್ಚಿ ನಿಂತರು. ಅವರು 40 ಎಸೆತಗಳಲ್ಲಿ 68 ರನ್ ಬಾರಿಸಿ ಇಂಗ್ಲೆಂಡ್‌ಗೆ ನೆರವಾದರು. ಇವರು ಔಟಾದ ಬಳಿಕ ಬಂದ ಆಟಗಾರರನ್ನು ಬೇಗನೇ ಪೆವೆಲಿಯನ್‌ಗೆ ಅಟ್ಟುವಲ್ಲಿ ವಿಂಡೀಸ್ ತಂಡ ಯಶಸ್ವಿಯಾಯಿತು. ಜೊಯ್ ಡೆನ್ಲಿ (30), ಸ್ಯಾಮ್ ಬಿಲ್ಲಿಂಗ್ಸ್ (18) ತಾಳ್ಮೆಯ ಆಟದಿಂದ ಇಂಗ್ಲೆಂಡ್ ಗೆಲುವಿನ ದಡ ಸೇರಿತು. ವಿಂಡೀಸ್ ಪರ ಶೆಲ್ಡನ್ ಕೊಟ್ರಲ್ 3 ವಿಕೆಟ್ ಸಂಪಾದಿಸಿದರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್‌ಇಂಡಿಸ್-20 ಓವರ್‌ಗಳಲ್ಲಿ 6 ವಿಕೆಟಿಗೆ160 (ನಿಕೋಲಸ್ ಪೂರಣ್ 58, ಡೆರಾನ್ ಬ್ರಾವೊ 28, ಟಾಮ್ ಕರನ್ 36ಕ್ಕೆ 4), ಇಂಗ್ಲೆಂಡ್- 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 (ಬೇರ್‌ಸ್ಟೊ 68, ಶೆಲ್ಡನ್ ಕೊಟ್ರಲ್ 29ಕ್ಕೆ 3, ಹೋಲ್ಡರ್ 26ಕ್ಕೆ 1).
ಪಂದ್ಯ ಶ್ರೇಷ್ಠ: ಜಾನಿ ಬೇರ್‌ಸ್ಟೊ.