ಬೆಂಗಳೂರು: ನಗರದಲ್ಲಿ ಭಾನುವಾರ ಗುಡುಗು ಮತ್ತು ಗಾಳಿ ಸಹಿತ ಮಳೆಗೆ ಸುಮಾರು 17ಕ್ಕೂ ಹೆಚ್ಚು ಮರ ಮತ್ತು ಮರದ ರೆಂಬೆಗಳು ನೆಲಕಚ್ಚಿದ್ದು, ಅಲ್ಲಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.
ಉತ್ತರದಲ್ಲಿ ಮೇಲ್ಮೆ„ ಸುಳಿಗಾಳಿ ಮತ್ತು ವಾಯುಭಾರ ಕುಸಿತ ಉಂಟಾಗಿದ್ದರಿಂದ ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಕನಿಷ್ಠ 2ರಿಂದ ಗರಿಷ್ಠ 33 ಮಿ.ಮೀ. ಮಳೆಯಾಗಿದೆ. ದೊಮ್ಮಲೂರಿನಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಮರ ಬಿದ್ದ ಕಡೆಗಳಲ್ಲಿ ಸಂಚಾರಕ್ಕೆ ಅಡತಡೆಯಾಯಿತು.
ಕೆಲವೆಡೆ ಮರ ಬಿದ್ದಿದ್ದರಿಂದ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಅಲ್ಲೆಲ್ಲಾ ಸಂಚಾರದಟ್ಟಣೆ ಉಂಟಾಗಿತ್ತು. ರಜೆ ದಿನವಾಗಿದ್ದರಿಂದ ಇದರ ಪರಿಣಾಮ ಅಷ್ಟಾಗಿ ಇರಲಿಲ್ಲ. ಆದರೆ, ರಜಾ-ಮಜಾಕ್ಕೆ ಕತ್ತರಿ ಬಿದ್ದಿತು.
ವೈಟ್‌ಫೀಲ್ಡ್, ತಲಘಟ್ಟಪುರ, ಎಚ್‌ಎಸ್‌ಆರ್ ಲೇಔಟ್, ದಾಲಿಯಾ ವೃತ್ತ, ಎಚ್‌ಎಎಲ್, ಆರ್.ಟಿ. ನಗರ ಬಿಡಿಎ ಹಿಂಭಾಗ, ಕೆ.ಆರ್. ರಸ್ತೆ, ಬಿಟಿಎಂ ಲೇಔಟ್, ಕೋರಮಂಗಲ, ಜೆ.ಪಿ. ನಗರ, ತಿಲಕನಗರ, ಹಲಸೂರು, ಲಕ್ಕಸಂದ್ರ, ಟ್ಯಾನರಿ ರಸ್ತೆ, ಮಾರ್ಗೋಸಾ ರಸ್ತೆ, ಶಾಂತಿನಗರದಲ್ಲಿ ಮರ ಮತ್ತು ಮರದ ರೆಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ.
ನಗರದ ದೊಮ್ಮಲೂರಿನಲ್ಲಿ 33 ಮಿ.ಮೀ., ವಿಜ್ಞಾನ ನಗರ 24.5, ಕೋರಮಂಗಲ 31.5, ಹೆಮ್ಮಿಗೆಪುರ 25, ಕೋಣನಕುಂಟೆ 19.5, ಬೇಗೂರು 21, ಉತ್ತರಹಳ್ಳಿ 7, ಸಿಂಗಸಂದ್ರ 8, ಬಸವನಗುಡಿ 4, ಎಚ್‌ಎಎಲ್ ಏರ್‌ಪೋರ್ಟ್ ರಸ್ತೆ 9, ಸಿಂಗಸಂದ್ರ 8, ಎಚ್‌ಎಸ್‌ಆರ್ ಲೇಔಟ್ 12.5, ಪಟ್ಟಾಭಿರಾಮನಗರ 6.5, ಆರ್.ಆರ್. ನಗರ 4.5 ಮಿ.ಮೀ. ಮಳೆ ದಾಖಲಾಗಿದೆ.