ಕುಷ್ಟಗಿ: ಪುರಸಭೆ ಚುನಾವಣೆಯನ್ನು ಎಲ್ಲ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಪಟ್ಟಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯ ಗೆಲುವಿನಿಂದ ಬೀಗುತ್ತಿರುವ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಿ ಪ್ರತಿಷ್ಠೆ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದರೆ, ವಿಧಾನಸಭೆ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಸೇಡು ತಿರಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ನಡುವೆ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗಬೇಕೆಂದು ಕಣಕ್ಕಿಳಿದಿದೆ.
ಪುರಸಭೆ ಚುನಾವಣೆಗಾಗಿ ಕಾಂಗ್ರೆಸ್, ಬಿಜೆಪಿ ತಲಾ 22 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 11 ಸ್ಥಾನಗಳಿಗೆ ಸ್ಪರ್ಧಿಸಿದೆ. ಕೊನೆ ಘಳಿಗೆಯಲ್ಲಿ ಟಿಕೆಟ್ ವಂಚಿತರು 15 ವಾರ್ಡ್‌ಗಳಲ್ಲಿ ಬಂಡಾಯ ಬಾವುಟ ಹಾರಿಸಿದ್ದಾರೆ. ಇದರಿಂದ ರಾಜಕೀಯ ಪಕ್ಷಗಳಿಗೆ ಮತ ವಿಭಜನೆಯಾಗುವ ಆತಂಕವಿದೆ. ಹಣದ ಪ್ರಾಬಲ್ಯದಿಂದ ಮತ ವಿಭಜನೆ ತಳ್ಳಿ ಹಾಕುವಂತಿಲ್ಲ.
ಅವಿರೋಧ ಆಯ್ಕೆ: ಪಟ್ಟಣದ 23 ವಾರ್ಡ್‌ಗಳ ಪೈಕಿ 19ನೇ ವಾರ್ಡನಲ್ಲಿ ಅಂಬಣ್ಣ ಭಜಂತ್ರಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿಯೂ ಕರಿಸಿದ್ದ ಹೊಸವಕ್ಕಲ ಎಂಬುವವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ವಿಶೇಷತೆ ಮೆರೆದಿತ್ತು. ಹೀಗಾಗಿ 22 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.
ಪುನರಾಯ್ಕೆ ಬಯಸಿ ಕಣಕ್ಕೆ: ಪುರಸಭೆ ಅಧ್ಯಕ್ಷ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಹಾಗೂ ವಾರ್ಡ್ ಬದಲಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ 7ನೇ ವಾರ್ಡಿನಿಂದ ಜಯಸಾಧಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷದಿಂದ 8ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಮಾಜಿ ಅಧ್ಯಕ್ಷ ಕಲ್ಲೇಶ ತಾಳದ್ ಬಿಜೆಪಿಯಿಂದ 4ನೇ ವಾರ್ಡ್ ನಲ್ಲಿ ಜಯಗಳಿಸಿದ್ದರು. ಇದೀಗ 20ನೇ ವಾರ್ಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಂತೋಷ ಕುಮಾರ ಸರಗಣಾಚಾರ ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ 11ನೇ ವಾರ್ಡ್‌ನಲ್ಲಿ ಚುನಾಯಿತರಾಗಿದ್ದರು, ಈ ಬಾರಿ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. 3ನೇ ವಾರ್ಡಿನ ಮಹೇಶ ಕೋಳೂರು ಅವರು, 1ನೇ ವಾರ್ಡಿಗೆ ತಮ್ಮ ಪತ್ನಿ ಗೀತಾ ಕೋಳೂರು ಅವರನ್ನು ಸ್ಪರ್ಧೆಗಿಳಿಸಿದ್ದಾರೆ. ಕಳೆದ ಬಾರಿ 20ನೇ ವಾರ್ಡಿಗೆ ರೇಖಾ ಡೊಳ್ಳಿನ್ ಜೆಡಿಎಸ್‌ನಿಂದ ಪುರಸಭೆ ಸದಸ್ಯೆಯಾಗಿದ್ದರೆ, ಈ ಬಾರಿ ಪತಿ ದ್ಯಾಮಣ್ಣ ಡೊಳ್ಳೀನ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. 2ನೇ ವಾರ್ಡಿನಲ್ಲಿ ತಾಯಿ ಸದಸ್ಯರಾಗಿದ್ದ ವಾರ್ಡಿನಲ್ಲಿ ಈ ಬಾರಿ ಮಗ ಅಬ್ದುಲ್ ರಝಾಕ್ ಸುಳ್ಳದ್ ಕಾಂಗ್ರೆಸ್ ಪಕ್ಷದಿಂದ ಸ್ಪಧಿಸಿದ್ದಾರೆ. ಪಪಂ ಮಾಜಿ ಅಧ್ಯಕ್ಷ ಜಿ.ಕೆ. ಹಿರೇಮಠ 21ನೇ ವಾರ್ಡಿಗೆ, ಮಾಜಿ ಸದಸ್ಯ ವಸಂತ ಮೇಲಿನಮನಿ 4ನೇ ವಾರ್ಡಿಗೆ, ಶರಣಪ್ಪ ಕಂಚಿ 5ನೇ ವಾರ್ಡಿಗೆ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ನಾಮ ನಿರ್ದೇಶಿತ ಸದಸ್ಯ ರಾಮಣ್ಣ ಬಿನ್ನಾಳ ಅವರು 6 ವಾರ್ಡ್‌ಗೆ ಕಾಂಗ್ರೆಸ್ ಪಕ್ಷದಿಂದ, ಇದೇ ವಾರ್ಡ್‌ಗೆ ಪಪಂ ಮಾಜಿ ಅಧ್ಯಕ್ಷ ಬಸವರಾಜ್ ಭೋವಿ ಸ್ಪರ್ಧಾ ಕಣದಲ್ಲಿದ್ದಾರೆ. ಮಾಜಿ ಉಪಾಧ್ಯಕ್ಷೆ ಖೈರುನ್ನಬೀ ಕಾಯಿಗಡ್ಡಿ ಅವರು 16ನೇ ವಾರ್ಡ್‌ಗೆ ಪಕ್ಷೇತರರಾಗಿ ಸ್ಪರ್ಧಿಗಳಾಗಿರುವ ಪ್ರಮುಖರೆನಿಸಿದ್ದಾರೆ. ಮಹಿಳಾ ಮತದಾರರ ಪ್ರಾಬಲ್ಯ: ಪುರಸಭೆ ವ್ಯಾಪ್ತಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರಿವುದು ಈ ಬಾರಿಯ ವಿಶೇಷ. 21,398 ಒಟ್ಟು ಮತದಾರರ ಪೈಕಿ 10,635 ಪುರುಷರು, 10,763 ಮಹಿಳಾ ಮತದಾರರಿದ್ದಾರೆ.
ಪ್ರತಿಷ್ಠೆಯ ಸವಾಲು
ಚುನಾವಣೆ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ನಾಪುರ, ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದವರಾಗಿದ್ದರೂ ಕಾಂಗ್ರೆಸ್, ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಜೆಡಿಎಸ್‌ಗೆ ಸಾಧ್ಯವಾಗುತ್ತಿಲ್ಲ.
ಹಿಂದೆ ಗೆದ್ದವರು..
ಕಳೆದ ಬಾರಿಯ ಪುರಸಭೆ ಚುನಾವಣೆಯಲ್ಲಿ ಬಿಜೆಪಿ 8, ಕಾಂಗ್ರೆಸ್ 7, ಜೆಡಿಎಸ್ 5 ಹಾಗೂ ಪಕ್ಷೇತರ 2 ಹಾಗೂ 19ನೇ ವಾರ್ಡ್ ನಿಂದ ಅವಿರೋಧ ಆಯ್ಕೆ ನಡೆದಿತ್ತು. 2ನೇ ವಾರ್ಡ್‌ನ ಪಕ್ಷೇತರ ಸದಸ್ಯೆ ರಸುಲ್‌ಬಿ ಸುಳ್ಳದ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಬಸಮ್ಮ ಹಿರೇಮಠ ಅವರು ಸಾಧಿಸಿದ್ದರಿಂದ ಬಿಜೆಪಿ 9 ಸ್ಥಾನಕ್ಕೆ ಹೆಚ್ಚಿಸಿಕೊಂಡಿತ್ತು.
ಮಂಜುನಾಥ ಮಹಾಲಿಂಗಪುರ