Advertisement

Kannada must; ರಾಜ್ಯದ ಪ್ರತೀ ಉತ್ಪನ್ನದಲ್ಲೂ ಕನ್ನಡ ಕಡ್ಡಾಯ?

01:05 AM Nov 02, 2024 | Team Udayavani |

ಬೆಂಗಳೂರು: ನಾಮಫ‌ಲಕದಲ್ಲಿ ಕನ್ನಡ ಕಡ್ಡಾಯ ಆದೇಶದ ಬಳಿಕ ಈಗ ರಾಜ್ಯದಲ್ಲಿ ಉತ್ಪಾದನೆಯಾಗುವ ಎಲ್ಲ ಉತ್ಪನ್ನಗಳ ಮೇಲೂ ಕನ್ನಡ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಜ್ಜೆಯಿಟ್ಟಿದೆ.

Advertisement

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 69ನೇ ಕನ್ನಡ ರಾಜ್ಯೋತ್ಸವ ಹಾಗೂ “ಕರ್ನಾಟಕ’ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಪ್ರತೀ ಉತ್ಪನ್ನದ ಮೇಲೆ ಇನ್ನು ಮುಂದೆ ಕನ್ನಡ ಅನುರಣಿಸಲಿದೆ. ಇದರೊಂದಿಗೆ ಆ ಉತ್ಪನ್ನಗಳು ಪೂರೈಕೆಯಾಗುವ ಪ್ರದೇಶಗಳಲ್ಲೆಲ್ಲ ಕನ್ನಡ ಭಾಷೆಯ ಪರಿಚಯ ಆಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ವಲಯದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಮೇಲೆ ಕನ್ನಡವನ್ನೂ ಮುದ್ರಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.

ಕನ್ನಡ ವಸ್ತು ಸಂಗ್ರಹಾಲಯ: ಇದಲ್ಲದೆ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಆಗಿದ್ದ ಅಠಾರ ಕಚೇರಿಯನ್ನು”ಕನ್ನಡ ವಸ್ತುಸಂಗ್ರಹಾಲಯ’ವನ್ನಾಗಿ ರೂಪಿಸಲಾಗುವುದು. ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದಿಂದ ಈ ಅಠಾರ ಕಚೇರಿ ಖಾಲಿ ಇದೆ. ಕನ್ನಡ ನಾಡು-ನುಡಿ, ಅದು ನಡೆದುಬಂದ ದಾರಿ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಈ ವಸ್ತುಸಂಗ್ರಹಾಲಯದಿಂದ ಆಗಲಿದೆ. ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದರು.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ನಾಡಿಗೆ ಕೊಡುಗೆ ನೀಡಿದ ಸಾಧಕರನ್ನು ವಿಧಾನಸೌಧ ಮುಂಭಾಗದಲ್ಲಿ ಸನ್ಮಾನಿಸಲಾಗಿದೆ. ಇದು ಸಾಧಕರಿಗೆ ಮಾಡಿದ ಸಮ್ಮಾನ ಅಲ್ಲ. ಈ ಮೂಲಕ ಸರಕಾರ ತನ್ನನ್ನು ತಾನೇ ಗೌರವಿಸಿಕೊಂಡಿದೆ. ಈ ನಿಮ್ಮ ಕಾರ್ಯಗಳು ರಾಜ್ಯದ ಯುವಜನಾಂಗಕ್ಕೆ ಇದು ಮಾದರಿ ಆಗಬೇಕು ಎಂದು ಪ್ರಶಂಸಿಸಿದರು.

Advertisement

ಕನ್ನಡದ ಧ್ವಜಾರೋಹಣ ಕಡ್ಡಾಯ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಷ್ಟ್ರೀಯ ಹಬ್ಬದ ದಿನಗಳಂದು ರಾಷ್ಟ್ರಧ್ವಜ ರಾರಾಜಿಸಿದಂತೆಯೇ ಮುಂದಿನ ವರ್ಷದಿಂದ ಬೆಂಗಳೂರಿನ ಎಲ್ಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳ ಮೇಲೆ ಕನ್ನಡದ ಧ್ವಜಾರೋಹಣ ಕಡ್ಡಾಯಗೊಳಿಸಲಾಗಿದೆ. ಈ ವರ್ಷವೇ ಶೇ. 75ರಷ್ಟು ಮಂದಿಇದನ್ನು ಅನುಸರಿಸಿದ್ದಾರೆ. ಮುಂದಿನ ವರ್ಷ ಕಡ್ಡಾಯಗೊಳಿಸಲಾಗುವುದು ಎಂದರು.

ಪ್ರಶಸ್ತಿ ಪುರಸ್ಕೃತ ಸಾಧಕರ ವಿವಿಧ ಸಾಧನೆಗಳು ಇಲ್ಲಿಗೆ ನಿಲ್ಲಬಾರದು. ಇನ್ನಷ್ಟು ಸಾಧನೆಗೆ ನಾಂದಿ ಆಗಬೇಕು. ನಿಮ್ಮ ಸಾಧನೆಯನ್ನು ಸರ್ಕಾರ ಗುರುತಿಸಿಲ್ಲ; ನಾಡಿನ ಜನ ಗುರುತಿಸಿದ್ದಾರೆ. ಹಳ್ಳಿಯಿಂದ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ ಖ್ಯಾತನಾಮರನ್ನು ಗುರುತಿಸಿ ಗೌರವಿಸಲಾಗಿದೆ. ಇವರಲ್ಲಿ ಯಾರೂ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ. ವಿಧಾನಸೌಧಕ್ಕೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ| ಪರಮೇಶ್ವರ, ಶಿವರಾಜ ತಂಗಡಗಿ, ಬೈರತಿ ಸುರೇಶ್‌, ಶಾಸಕರಾದ ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್ತಿನ ಸದಸ್ಯರಾದ ನಜೀರ್‌ ಅಹಮದ್‌, ಕೆ. ಗೋವಿಂದರಾಜು, ಸಲೀಂ ಅಹಮದ್‌, ಮಂಜುನಾಥ ಭಂಡಾರಿ ಇದ್ದರು.

ಉತ್ಪನ್ನಗಳ ಮೇಲೆ ಕನ್ನಡದ ಮುದ್ರೆ
ಪ್ರಸ್ತುತ ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ವಲಯ ಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಹೆಸರು ಇಂಗ್ಲಿಷ್‌ ನಲ್ಲಿ ಮಾತ್ರ ಇರುತ್ತದೆ. ಮುಂಬರುವ ದಿನಗಳಲ್ಲಿ ಕನ್ನಡವನ್ನೂ ಸೇರಿಸಿ ಮಾರುಕಟ್ಟೆಗೆ ಪರಿಚಯಿಸಲು ಸರಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶದ ಯಾವುದೇ ಮೂಲೆಗೆ ಇಲ್ಲಿನ ಉತ್ಪನ್ನಗಳು ಪೂರೈಕೆಯಾದರೂ ಅವುಗಳ ಮೇಲೆ “ಕನ್ನಡದ ಮುದ್ರೆ’ ರಾರಾಜಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next