Advertisement

Win or Lose: ಗೆದ್ದರೂ ಹೀನಾಯವಾಗಿ ಸೋತೆ

04:18 PM Dec 21, 2023 | Team Udayavani |

ಕನ್ನಡ ರಾಜ್ಯೋತ್ಸವದ ಸಲುವಾಗಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ನನ್ನನ್ನು ಸ್ಪರ್ಧೆಗೆ ಸೇರುವಂತೆ ನನ್ನ ಗೆಳೆಯ ಒತ್ತಾಯಿಸಿದ. ಸ್ವಾಮಿ ವಿವೇಕಾನಂದರು ಭಾಷಣ ಮಾಡಿದಾಗ ಸೇರಿದಂತಹ ಸಭಿಕರೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿದ್ದು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಅದ್ಭುತ  ಭಾಷಣಗಳ ಮೂಲಕ ಸಾವಿರಾರು ಜನರನ್ನು ಸೇರಿಸಿದ್ದು ಹೀಗೇ ಎಲ್ಲ ರೀತಿಯ ಉದಾಹರಣೆಯನ್ನು ಕೊಟ್ಟು ನೀನು ಭಾಷಣ ಮಾಡಬಹುದು. ನೀನು ಭಾಷಣ  ಸ್ಪರ್ಧೆಯಲ್ಲಿ ಭಾಗವಹಿಸು ಎಂದು ನನ್ನ ಗೆಳೆಯ ನನ್ನನ್ನು ಪ್ರೋತ್ಸಾಹಿಸಿದ.

Advertisement

ನಾನು ಬರಹ ಸ್ಪರ್ಧೆಯಲ್ಲಿ ಪುಟಗಟ್ಟಲೆ ರಾಶಿ ಹಾಕಿ ಬಹುಮಾನ ಪಡೆಯುವ ಹುಡುಗನೇ ಬಿಟ್ಟರೆ ವೇದಿಕೆ ಮೇಲೆ ಮೈಕ್‌ ಹಿಡಿದು ಮಾತಾಡಿ ಗೊತ್ತಿರಲಿಲ್ಲ. ಸ್ವಲ್ಪ ಹಿಂಜರಿದೆ. ಅದಕ್ಕೆ ಅವನು ನೀನು ಹೆದರಬೇಡ ನಾನು ನಿನ್ನ ಹಾಗೆ ಮೊದಲಿಗೆ ಹೆದರ್ತಿದ್ದೆ ಈಗ ಅಭ್ಯಾಸ ಆಗಿದೆ. ಸ್ವಾಮಿ ವಿವೇಕಾನಂದರು ಏನು ಹೇಳಿದ್ದಾರೆ.

ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು. ನೀನು ಹೇಡಿಯ ಹಾಗೆ ಮಾಡ್ಬೇಡ. ಧೈರ್ಯವಾಗಿ ಭಾಷಣ ಮಾಡು. ನಿನ್ನೊಂದಿಗೆ ನಾನಿದ್ದೇನೆ ಅಂತ ರಕ್ತ ಕುದಿಯುವ ಹಾಗೆ ನನ್ನನ್ನು ಪ್ರೋತ್ಸಾಹಿಸಿದ. ನನಗೂ ಎಲ್ಲಿಲ್ಲದ ಧೈರ್ಯ ಬಂತು. ಇಬ್ಬರು ಹೆಸರು ನೋಂದಾಯಿಸಿಕೊಂಡೆವು. ಈಗ ನಾವಿಬ್ಬರು ಎದುರಾಳಿಗಳು. ಆದರೂ ಅವನು ನನಗೆ ಭಾಷಣಕ್ಕೆ ಬೇಕಾದ ತಯಾರಿ ನಡೆಸುವಲ್ಲಿ ಸಹಾಯ ಮಾಡಿದ. ಧೈರ್ಯ ಹೇಳಿದ.

ನನಗೆ ಇವನು ಗೆಳೆಯನೋ ಎದುರಾಳಿಯೋ ಎಂಬುದು ಸರಿಯಾಗಿ ಅರ್ಥ ಆಗಲಿಲ್ಲ. ನನ್ನ ತಯಾರಿ ಮುಂದುವರಿಸಿದೆ. ಭಾಷಣ ಸ್ಪರ್ಧೆ ನಡೆಯುವ ದಿನ ಬಂದೇ ಬಿಟ್ಟಿತು. ಮೊದಲಿಗೆ ಅವನ ಸರದಿ ಬಂತು. ಅವನ ಭಾಷಣ ಕೇಳಿ ತೀರ್ಪುಗಾರರ ಸಹಿತ ಎಲ್ಲರೂ ಬೆರಗಾದರು. ಮೊದಲ ಸ್ಥಾನ ಅವನಿಗೆ ಅನ್ನೋದು ನನಗೂ ಖಾತರಿ ಆಯಿತು.

ಈಗ ನನ್ನ ಸರದಿ. ಯಾವುದೇ ವಿಷಯ ಆಗಿರಲಿ ಎಲ್ಲರಿಗೂ  ಮೊದಲನೇ ಸಲ ಎದುರಿಸುವಾಗ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ. ನನಗೂ ಹಾಗೆ ಆಯಿತು. ವೇದಿಕೆ ಹತ್ತಿ ಒಂದು ಸರಿ ಎಲ್ಲರನ್ನೂ ನೋಡಿದೆ. ನನ್ನ ಹೃದಯ ಬಡಿತ ನನಗೆ ಹೇಳುವಷ್ಟು ನಿಶ್ಯಬ್ದ. ಹೆದರಿ ಮಾತೇ ಹೊರಡಲಿಲ್ಲ.

Advertisement

ಹಾ ಮಾತಾಡು…ಅಂತ ತೀರ್ಪುಗಾರರು ಹೇಳಿದ್ರು.  ನನಗೆ ನನ್ನ ಭಾಷಣದಲ್ಲಿ ವಿಷಯವೇ ಮರೆತು ಹೋಗಿತ್ತು. ಬಹಳ ಕಷ್ಟದಲ್ಲಿ ವಿಷಯ ನೆನಪಿಸಿಕೊಂಡು ಎರಡು ನಿಮಿಷ ತೊದಲು ತೊದಲು ಮಾತಾಡಿ ನನ್ನ ಭಾಷಣಕ್ಕೆ ವಿರಾಮ ಹಾಡಿ ತೆರಳಿದಾಗ ನನ್ನ ಮನಸ್ಸು ಇದೆಲ್ಲ ಬೇಕಿತ್ತಾ ನಿನಗೆ ಅಂತ ಹೇಳ್ತಿತ್ತು.  ಅನಂತರ ತೀರ್ಪುಗಾರರು ನಾನು ಹೇಗೆ ಯಾವ ರೀತಿಯಲ್ಲಿ ಮಾತಾಡಬಹುದಿತ್ತು ಅನ್ನೋದನ್ನು ಸರಿಯಾಗಿ ತಿಳಿಹೇಳಿದರು. ಮೊದಲ ಭಾಷಣ ಅಲ್ಲವೇ.

ಇದೆಲ್ಲ ವಿದ್ಯಾರ್ಥಿ ಜೀವನದಲ್ಲಿ ಇದ್ದದ್ದೇ. ಬಹುಮಾನ ಬಿಡಿ, ನನ್ನ ಭಾಷಣ ಹೆಚ್ಚು ಜನ ಕೇಳಲಿಲ್ಲ ಅನ್ನೋದೇ ನನಗೆ ಸಮಾಧಾನ. ಮರುದಿವಸ ಕನ್ನಡ ರಾಜ್ಯೋತ್ಸವದ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು. ಅತಿಥಿಗಳ ಭಾಷಣ ಮುಗಿದು ಈಗ ಬಹುಮಾನ ವಿತರಣೆಯ ಸಮಯ. ಮೊದಲ ಬಹುಮಾನ ನನ್ನ ಗೆಳೆಯನಿಗೆ. ನನಗೆ ಖುಷಿ ಆಯಿತು.

ಚಪ್ಪಾಳೆಯ ನಡುವೆ ವೇದಿಕೆಗೆ ಹೋಗಿ ಬಹುಮಾನ ಸ್ವೀಕರಿಸಿದ.   ಎರಡನೇ ಬಹುಮಾನ ನನ್ನ ಸರದಿ. ಇದನ್ನು ಹೇಳಿ ನನಗೆ ಶಾಕ್‌ ಆಯಿತು. ನನಗೆ ಹೇಗೆ ಎರಡನೇ ಸ್ಥಾನ ಸಿಕ್ಕಿದ್ದು. ನನಗೆ ಆಶ್ಚರ್ಯವಾಯಿತು. ಚಪ್ಪಾಳೆಯ ನಡುವೆ ಬಹುಮಾನ ಸ್ವೀಕರಿಸುವಾಗ ನನಗೆ ಇನ್ನೂ ಹೆಚ್ಚು ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅನ್ನುವ ಅಸೆ ಹುಟ್ಟಿತು.

ಬಹುಮಾನ ಸಿಕ್ಕಿತಲ್ಲ ಅನ್ನುವ ಖುಷಿಯಲ್ಲಿ ತರಗತಿಗೆ ತೆರಳಿದೆ. ಆ ಖುಷಿ ಕ್ರೋಧಕ್ಕೆ ಬದಲಾಗುವಲ್ಲಿ ಹೆಚ್ಚು ಸಮಯ ಬೇಕಾಗಿರಲಿಲ್ಲ. ಯಾಕಂದ್ರೆ  ಮೊದಲಿಗೆ ಸ್ಪರ್ಧೆಗೆ ಹೆಸರು ಕೊಟ್ಟವನು ಅವನೊಬ್ಬನೇ. ಆದರೆ ಒಬ್ಬ ಸ್ಪರ್ಧಿಯಿಂದ ಸ್ಪರ್ಧೆ ನಡೆಸಲು ಸಾಧ್ಯ ಇಲ್ಲ ಯಾರನ್ನಾದರೂ ಸೇರಿಸು ಆಗ ಸ್ಪರ್ಧೆ ನಡೆಸ್ತೇವೆ ಅಂತ ತೀರ್ಪುಗಾರರು ಹೇಳಿದ್ದರು. ಆಗ ಸಿಕ್ಕಿದ ಬಲಿಪಶು ನಾನೇ. ಅವನ ಪ್ರೋತ್ಸಾಹ, ಬೆಂಬಲದ ಹಿಂದೆ ಇದ್ದ ಉದ್ದೇಶ ಇದಾಗಿತ್ತು. ಹೀನಾಯವಾಗಿ ಸೋತರೂ ಸಿಕ್ಕ ಬಹುಮಾನಕ್ಕೆ ಖುಷಿಪಡಬೇಕಾ ಅಥವಾ ಅವನ ಬುದ್ಧಿವಂತಿಕೆಗೆ ಬಲಿಯಾದೆ ಎಂದು ಬೇಸರಪಡಬೇಕಾ ಅನ್ನುವುದು ಮಾತ್ರ ನನಗೆ ಗೊತ್ತಾಗಲಿಲ್ಲ.

-ಚೈತನ್ಯ ಆಚಾರ್ಯ

ಕೊಂಡಾಡಿ

Advertisement

Udayavani is now on Telegram. Click here to join our channel and stay updated with the latest news.

Next