Advertisement

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಕೊಕೊ ಗಾಫ್ ಗೆ ಆಘಾತ

11:34 PM Jul 02, 2022 | Team Udayavani |

ಲಂಡನ್‌: ವಿಶ್ವದ ನಂಬರ್‌ ವನ್‌ ಇಗಾ ಸ್ವಿಯಾಟೆಕ್‌ ಹಾಗೂ ಅಮೆರಿಕದ 18ರ ಹರೆಯದ ಕೊಕೊ ಗಾಫ್ ವಿಂಬಲ್ಡನ್‌ ಟೆನಿಸ್‌ ಕೂಟದ ಮೂರನೇ ಸುತ್ತಿನ ಹೋರಾಟದಲ್ಲಿ ಸೋಲನ್ನು ಕಂಡಿದ್ದಾರೆ. ಗಾಫ್ ಅವರು ತನ್ನದೇ ದೇಶದ ಅಮಂಡಾ ಅನಿಸಿಮೋವಾ ಅವರ ಕೈಯಲ್ಲಿ 6-7 (4), 6-2, 6-1 ಸೆಟ್‌ಗಳಿಂದ ಶರಣಾದರು.

Advertisement

ಇನ್ನೊಂದು ಪಂದ್ಯದಲ್ಲಿ ಸ್ವಿಯಾಟೆಕ್‌ ಅವರು ಅಲೀಝ್ ಕಾರ್ನೆಟ್‌ ಅವರಿಗೆ 6-4, 6-2 ಸೆಟ್‌ಗಳಿಂದ ಸೋತರು. ಫ್ರೆಂಚ್‌ ಓಪನ್‌ನ ಫೈನಲ್‌ನಲ್ಲಿ ಸ್ವಿಯಾಟೆಕ್‌ ಮತ್ತು ಕೊಕೊ ಗಾಫ್ ಫೈನಲಿಗೇರಿದ್ದು ಸ್ವಿಯಾಟೆಕ್‌ ಪ್ರಶಸ್ತಿ ಜಯಿಸಿದ್ದರು. ಆದರೆ ಅವರಿಬ್ಬರು ಮೂರನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.

20ನೇ ಶ್ರೇಯಾಂಕದ ಅನಿಸಿ ಮೋವಾ ಮುಂದಿನ ಪಂದ್ಯದಲ್ಲಿ ಹಾರ್ಮೊನಿ ತಾನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಅವರು ಈ ಮೊದಲಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದರು.

ಫ್ಲೋರಿಡಾ ಮೂಲದ ಗಾಫ್ ಮತ್ತು ಅನಿಸಿಮೋವಾ ಅವರು ಜೂನಿಯರ್‌ ಹಂತದಲ್ಲೂ ಪರಸ್ಪರ ಹಲವು ಪಂದ್ಯಗಳಲ್ಲಿ ಮುಖಾ ಮುಖೀಯಾಗಿದ್ದರು. 2017ರಲ್ಲಿ ಯುಎಸ್‌ ಓಪನ್‌ ಜೂನಿಯರ್‌ ಪ್ರಶಸ್ತಿಗಾಗಿ ನಡೆದ ಹೋರಾಟದಲ್ಲಿ ಅನಿಸಿಮೋವಾ ಅವರು ಗಾಫ್ ಅವರನ್ನು ಸೋಲಿಸಿದ್ದರು.

ತಾನ್‌ಗೆ ಗೆಲುವು
ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಹಾರ್ಮೊನಿ ತಾನ್‌ ಬ್ರಿಟನ್‌ನ ಕ್ಯಾಟೀ ಬೌಲ್ಟರ್‌ ಅವರನ್ನು ಕೇವಲ 51 ನಿಮಿಷಗಳ ಹೋರಾಟದಲ್ಲಿ 6-1, 6-1 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿಗೇರಿದರು. ವಿಂಬಲ್ಡನ್‌ಗೆ ಪಾದಾರ್ಪಣೆಗೈದ ವರ್ಷವೇ ತಾನ್‌ ಅಮೋಘ ಆಟದ ಪ್ರದರ್ಶನ ನೀಡುತ್ತಿದ್ದು ಚೊಚ್ಚಲ ಬಾರಿ ನಾಲ್ಕನೇ ಸುತ್ತಿಗೇರಿದ್ದಾರೆ. ಆರಂಭಿಕ ಸುತ್ತಿನಲ್ಲಿ 24ರ ಹರೆಯದ ತಾನ್‌ ಅವರು ಏಳು ಬಾರಿಯ ಚಾಂಪಿಯನ್‌ ಸೆರೆನಾ ಅವರನ್ನು ಕೆಡಹಿದ್ದರು. ಇನ್ನೊಂದು ಮೂರನೇ ಸುತ್ತಿನ ಪಂದ್ಯದಲ್ಲಿ ಸಿಮೋನಾ ಹಾಲೆಪ್‌ ಅವರು ಮೆಗ್ಡಲಿನಾ ಫ್ರೆಂಚ್‌ ಅವರನ್ನು 6-4, 6-1 ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು.

Advertisement

ಅಲ್ಕರಾಝ್ ನಾಲ್ಕನೇ ಸುತ್ತಿಗೆ
ಆಸ್ಕರ್‌ ಒಟ್ಟೆ ಅವರನ್ನು ಸುಲಭವಾಗಿ ಮಣಿಸಿದ ಕಾರ್ಲೋಸ್‌ ಅಲ್ಕರಾಝ್ ನಾಲ್ಕನೇ ಸುತ್ತಿಗೇರಿದರು. 19ರ ಹರೆಯದ ಅಲ್ಕರಾಝ್ ಅವರು ಟಾಮಿಕ್‌ ಬಳಿಕ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತಿಗೇರಿದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು. ಈ ಹಿಂದೆ ಬೆರ್ನಾರ್ಡ್‌ ಟಾಮಿಕ್‌ 18ರ ಹರೆಯದಲ್ಲಿ 2011ರಲ್ಲಿ ಇಲ್ಲಿ ಕ್ವಾರ್ಟರ್‌ ಫೈನಲಿಗೇರಿದ್ದರು.

ನಿವೃತ್ತಿ ಬಗ್ಗೆ ಯೋಚಿಸಿದ್ದ ನಡಾಲ್‌
22 ಗ್ರ್ಯಾನ್‌ಸ್ಲಾéಮ್‌ ಗೆದ್ದು, ವಿಶ್ವದಾಖಲೆ ನಿರ್ಮಿಸಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಕೇವಲ 2 ವಾರಗಳ ಹಿಂದೆ ನಿವೃತ್ತಿಯಾದರೆ ಹೇಗೆ ಎಂದು ಯೋಚಿಸಿದ್ದರು! ಆದರೆ ಅವರೀಗ ವಿಂಬಲ್ಡನ್‌ನಲ್ಲೂ ಆಟ ಮುಂದುವರಿಸಿದ್ದಾರೆ. ವಿಶೇಷವೇನು ಗೊತ್ತ? ಇಂತಹ ಯೋಚನೆಗಳು ಬರುವ ಕೇವಲ ಒಂದೆರಡು ವಾರಗಳ ಮುನ್ನ ಅವರು; ಫ್ರೆಂಚ್‌ ಓಪನ್‌ ಟೆನಿಸ್‌ ಗೆದ್ದು ಅದ್ಭುತ ಮಟ್ಟಕ್ಕೇರಿದ್ದರು. ಆ ಇಡೀ ಕೂಟದಲ್ಲಿ ಅವರು ಪಾದದ ನೋವಿನಿಂದ ನೋವು ನಿವಾರಕ ಇಂಜೆಕ್ಷನ್‌ ತೆಗೆದುಕೊಂಡೇ ಆಡಿದ್ದರು. ಅನಂತರ ಈ ಸಂಗತಿಯನ್ನು ಬಯಲು ಮಾಡಿ ಕೆಲವರಿಂದ ಟೀಕೆಗಳನ್ನೂ ಎದುರಿಸಿದ್ದರು. ಅನಂತರ ಚಿಕಿತ್ಸೆ ಪಡೆದು ಮತ್ತೆ ಲಯಕ್ಕೆ ಮರಳಿದ್ದಾರೆ. ಈಗ ಅವರಲ್ಲಿ ನಿವೃತ್ತಿ ಯೋಚನೆ ಇಲ್ಲವಂತೆ.

ಇಸ್ನರ್‌ ಏಸ್‌ ವಿಶ್ವದಾಖಲೆ !
ಶುಕ್ರವಾರ ನಡೆದ ವಿಂಬಲ್ಡನ್‌ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಜಾನ್‌ ಇಸ್ನರ್‌ ಭರ್ಜರಿ ಏಸ್‌ಗಳನ್ನು ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಇಷ್ಟರ ಮಧ್ಯೆಯೂ ಇಟಲಿಯ ಎದುರಾಳಿ ಜಾನಿಕ್‌ ಸಿನ್ನರ್‌ ಎದುರು 4-6, 6-7, 3-6ರಿಂದ ಸೋತು ಹೋದರು. ಈ ಪಂದ್ಯದಲ್ಲಿ ಅವರು 5 ಏಸ್‌ಗಳನ್ನು ಸಿಡಿಸಿದ್ದರೆ ಕಾರ್ಲೋವಿಕ್‌ ಅವರ ಸಾರ್ವಕಾಲಿಕ ಗರಿಷ್ಠ ಏಸ್‌ಗಳ ವಿಶ್ವದಾಖಲೆಯನ್ನು ಮೀರುತ್ತಿದ್ದರು. ಅದರಲ್ಲಿ ಯಶಸ್ವಿಯಾಗುವ ಮೂಲಕ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಒಟ್ಟು ಏಸ್‌ಗಳ ಸಂಖ್ಯೆಯನ್ನು 13,729ಕ್ಕೇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next