ಲಂಡನ್: ವಿಶ್ವದ ನಂಬರ್ ವನ್ ಆಟಗಾರ್ತಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮತ್ತು ಮಾಜಿ ನಂಬರ್ ವನ್ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಅವರು ವಿಂಬಲ್ಡನ್ ಟೆನಿಸ್ ಕೂಟದ ಅಂತಿಮ 16ರ ಸುತ್ತಿನಲ್ಲಿ ಸೋಲನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಅಮೋಘ ಆಟದ ಪ್ರದರ್ಶನ ನೀಡಿದ ಸ್ಪೇನ್‌ನ ಗಾರ್ಬಿನ್ ಮುಗುರುಜಾ 4-6, 6-4, 6-4 ಸೆಟ್‌ಗಳಿಂದ ಸದೆಬಡಿದು ಕ್ವಾರ್ಟರ್‌ಫೈನಲಿಗೇರಿದರು. ಮೊದಲ ಸೆಟ್ ಕಳೆದುಕೊಂಡರೂ ಭರ್ಜರಿ ಆಟವಾಡಿದ ಮುಗುರುಜಾ ಈ ಪಂದ್ಯವನ್ನು 2 ಗಂಟೆ 20 ನಿಮಿಷಗಳಲ್ಲಿ ತಮ್ಮದಾಗಿಸಿಕೊಂಡರು.
ಇನ್ನುಳಿದ ಪಂದ್ಯಗಳಲ್ಲಿ ವೀನಸ್ ವಿಲಿಯಮ್ಸ್, ಸ್ವೆತ್ಲಾನಾ ಕುಜ್ನೆತ್ಸೋವಾ, ಮಗ್ಡೆಲೆನಾ ರಿಬರಿಕೋವಾ ಮತ್ತು ಬ್ರಿಟನ್‌ನ ಜೋಹಾನಾ ಕೊಂಟಾ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಅಂತಿಮ ಎಂಟರ ಸುತ್ತಿಗೇರಿದರು. 9ನೇ ಶ್ರೇಯಾಂಕದ ಅಗ್ನಿàಸ್ಕಾ ರಾದ್ವಂಸ್ಕಾ ಮತ್ತು ನಾಲ್ಕನೇ ಶ್ರೇಯಾಂಕದ ಎಲೆನಾ ಸ್ವಿಟೋಲಿನಾ ಸೋತವರಲ್ಲಿ ಪ್ರಮುಖರಾಗಿದ್ದಾರೆ.
ಅಮೆರಿಕದ ವೀನಸ್ 6-3, 6-2 ಸೆಟ್‌ಗಳಿಂದ ಕ್ರೊವೇಶಿಯಾದ ಅನಾ ಕೊಂಜು ಅವರನ್ನು ಕೆಡಹಿ ಸುಲಭವಾಗಿ ಕ್ವಾರ್ಟರ್‌ಫೈನಲಿಗೇರಿದರು. ಇನ್ನೊಂದು ಪಂದ್ಯದಲ್ಲಿ 7ನೇ ಶ್ರೇಯಾಂಕದ ಕುಜ್ನೆತ್ಸೋವಾ ಅವರು ರಾದ್ವಂಸ್ಕಾ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು.
ಉಕ್ರೈನಿನ ಎಲೆನಾ ಸ್ವಿಟೋಲಿನಾ ಮತ್ತು ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ನಡುವಿನ ಹೋರಾಟದಲ್ಲಿ ಒಸ್ಟಾಪೆಂಕೊ 6-3, 7-6 (8-6) ಸೆಟ್‌ಗಳಿಂದ ಕೆಡಹಿದರು. ಈ ಹೋರಾಟ ಒಂದು ತಾಸು ಮತ್ತು 44 ನಿಮಿಷಗಳವರೆಗೆ ಸಾಗಿತ್ತು. ಇನ್ನೊಂದು ಪಂದ್ಯದಲ್ಲಿ ರಿಬರಿಕೋವಾ ಕ್ರೊವೇಶಿಯದ ಪೆಟ್ರಾ ಮಾರ್ಟಿಕ್ ಅವರನ್ನು6-4, 2-6, 6-3 ಸೆಟ್‌ಗಳಿಂದ ಸೋಲಿಸಿದರು.
ಬ್ರಿಟನ್‌ನ ಜೋಹಾನಾ ಕೊಂಟಾ ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಫ್ರಾನ್ಸ್‌ನ ಕರೋಲಿನಾ ಗಾರ್ಸಿಯಾ ಅವರನ್ನು ಉರುಳಿಸಿದರು. 2 ತಾಸು ಮತ್ತು 12 ನಿಮಿಷಗಳ ಹೋರಾಟದಲ್ಲಿ ಕೊಂಟಾ 7-6 (7-3), 4-6, 6-4 ಸೆಟ್‌ಗಳಿಂದ ಗೆದ್ದು ಬಂದರು. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಕೊಕೊ ವಾಂಡೆವೇ ಅವರು ವೋಜ್ನಿಯಾಕಿ ಅವರನ್ನು 7-6 (7-4), 6-4 ಸೆಟ್‌ಗಳಿಂದ ಕೆಡಹಿ ಅಂತಿಮ ಎಂಟರ ಸುತ್ತಿಗೇರಿದರು.